ಬೆಳಗಾವಿ: ಅಪಘಾತದಲ್ಲಿ ಸಂಪೂರ್ಣವಾಗಿ ಜಜ್ಜಿದಂತಾಗಿ ವಿಕಾರವಾಗಿದ್ದ ಯುವತಿ ಯೋರ್ವಳ ಮುಖವನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಸರಿಪಡಿಸುವಲ್ಲಿ ನಗರದ ವಿಜಯಾ ಆಥೊರ್ ಮತ್ತು ಟ್ರೌಮಾ ಸೆಂಟರ್‌ನ ವೈದ್ಯರು ಯಶಸ್ವಿಯಾಗಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಸ್ಪತ್ರೆಯ ನಿರ್ದೇಶಕ ಡಾ| ರವಿ ಪಾಟೀಲ, ಆಸ್ಪತ್ರೆಯ ಡಾ| ಕೌಸ್ತುಭ ಹಾಗೂ ಅವರ ತಂಡವು ಸತತ ಎಂಟು ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಈ ಅಪರೂಪದ ಸಾಧನೆ ಮಾಡಿದ್ದಾರೆ ಎಂದರು.
ಯುವತಿಗೆ ಉಚಿತವಾಗಿ ಈ ಚಿಕಿತ್ಸೆ ಮಾಡಲಾಗಿದ್ದು, ಯುವತಿ ಸಹಜ ಜೀವನ ನಡೆಸಬಹುದು. ಸಮಾಜ ಸೇವೆ ಪರಿಕಲ್ಪನೆಯಡಿ ಇಂತಹ ಸೇವೆಯನ್ನು ಆಸ್ಪತ್ರೆಯು ನೀಡುತ್ತಿದೆ. ಅನೇಕ ಚಿಕಿತ್ಸೆಗಳಲ್ಲಿ ಬಡವರಿಗೆ ವಿನಾಯತಿ ಸಹ ನೀಡಲಾಗಿದೆ ಎಂದು ಹೇಳಿದರು.
ಜೂನ್ 16ರಂದು ಕಾಕತಿ ಬಳಿ ನಡೆದ ಅಪಘಾತದಲ್ಲಿ ಧಾರವಾಡ ಜಿಲ್ಲೆ ಕುಂದಗೋಳದ ಲಕ್ಷ್ಮಿ ಹುಲಗೂರು (28) ಎಂಬ ಯುವತಿಯ ಮೂಗು, ಕಣ್ಣು, ಮುಖದಲ್ಲಿ ಮೂಳೆಗಳು ಪುಡಿಯಾಗಿದ್ದವು. ನರಗಳು ತುಂಡಾಗಿ ಮುಖ ನಜ್ಜುಗುಜ್ಜಾಗಿತ್ತು. ತಕ್ಷಣ ಗಾಯಗೊಂಡಿದ್ದ ಲಕ್ಷ್ಮೀಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಪ್ಲಾಸ್ಟಿಕ್ ಸರ್ಜನ ಡಾ| ಕೌಸ್ತೂಬ್ ದೇಸಾಯಿ ಹಾಗೂ ಅವರ ತಂಡ ಸತತ ಯಶಸ್ವಿ ಪ್ಲಾಸ್ಟಿಕ್ ಸರ್ಜರಿ ಮಾಡಿ ಗುಣಪಡಿಸಿದ್ದಾರೆ ಎಂದರು. ಜೂ.16ರಿಂದ 15 ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿ, ತಿಂಗಳ ಕಾಲ ವಿಶೇಷ ವಾರ್ಡನಲ್ಲಿ ದಾಖಲಿಸಲಾಗಿತ್ತು. ಪ್ಲಾಸ್ಟಿಕ್ ಸರ್ಜರಿಗೆ ಸುಮಾರು 2 ರಿಂದ 2.5 ಲಕ್ಷ ವೆಚ್ಚವಾಗುತ್ತದೆ. ಯುವತಿ ಕುಟುಂಬಸ್ಥರು ಬಡವರಿರುವದರಿಂದ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು. ಡಾ| ಶ್ರೀಧರ ಖತವಾಟ, ಡಾ| ಭೂಷಣ, ಡಾ| ಹಾಲೇಶ್, ಬಸವರಾಜ ರೊಟ್ಟಿ ಇದ್ದರು.