Advertisement

ನವತಾರೆಯರ ನವೋತ್ಸಾಹದಲ್ಲಿ ಮಿಂದೆದ್ದ ಟೀಂ ಇಂಡಿಯಾ

03:37 PM Jan 21, 2021 | Team Udayavani |

ಬ್ರಿಸ್ಬೇನ್‌: ಆಸ್ಟ್ರೇಲಿಯದಲ್ಲಿನ ಭಾರತ ಕ್ರಿಕೆಟ್‌ ತಂಡದ ಸುದೀರ್ಘ‌ ಪ್ರವಾಸ ಮುಕ್ತಾಯವಾಗಿದೆ. ಏಕದಿನ ಸರಣಿಯನ್ನು 2-1ರಿಂದ ಸೋತು, ಟಿ20ಯನ್ನು 2-0 ಯಿಂದ, ಟೆಸ್ಟ್‌ ಸರಣಿಯನ್ನು 2-1ರಿಂದ ಗೆದ್ದಿದೆ. ಅಲ್ಲಿಗೆ ಸತತ ಎರಡನೇ ಪ್ರವಾಸದಲ್ಲೂ ಆಸ್ಟ್ರೇಲಿಯವನ್ನು ಸಂಪೂರ್ಣ ಹತಾಶೆಗೆ ತಳ್ಳಿದೆ.

Advertisement

ಅಚ್ಚರಿ, ಅದ್ಭುತ ಸಂಗತಿಯೆಂದರೆ ಭಾರತೀಯರು ತೋರಿದ ಹೋರಾಟಕಾರಿ ಮನೋಭಾವ, ಅದರಲ್ಲೂ ಅನನುಭವಿ ಹೊಸ ಹುಡುಗರು ತೋರಿದ ಎದೆಗಾರಿಕೆ. ಟೆಸ್ಟ್‌ ಸರಣಿ ಮುಗಿದಾಗ ಐದು ಮಂದಿ ಹೊಸ ತಾರೆಯರು ಹುಟ್ಟಿಕೊಂಡಿದ್ದಾರೆ. ಅವರ ಕಿರುಪರಿಚಯ ಇಲ್ಲಿದೆ.

ಟಿ.ನಟರಾಜನ್‌

ವಾಸ್ತವವಾಗಿ ತಮಿಳುನಾಡಿನ ಯಾರ್ಕರ್‌ ತಜ್ಞ ಟಿ.ನಟರಾಜನ್‌ ಭಾರತ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಅವರ ನಿಖರತೆ, ಹಾಗೆಯೇ ಮೊದಲೆರಡು ಟೆಸ್ಟ್‌ ಮುಗಿದ ನಂತರ ಭಾರತದ ಗಾಯಾಳುಗಳ ಸಂಖ್ಯೆ ಹೆಚ್ಚಿದಾಗ ತಂಡವನ್ನು ಕೂಡಿಕೊಂಡರು. ಅಂತೂ ನಾಲ್ಕನೇ ಟೆಸ್ಟ್‌ನಲ್ಲಿ ಕಣಕ್ಕಿಳಿದರು. ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ ಪಡೆದು ಆಸೀಸಿಗರನ್ನು ಕಾಡಿದರು. ಇವರ ಬೌಲಿಂಗ್‌ ಶೈಲಿಯನ್ನೇ ಗಮನಿಸಿದರೆ, ಅದ್ಭುತ ಭವಿಷ್ಯವಿರುವುದು ಖಚಿತ.

ಇದನ್ನೂ ಓದಿ:ಸ್ಮಿತ್‌ ಔಟ್‌; ಸ್ಯಾಮ್ಸನ್‌ ರಾಜಸ್ಥಾನ್‌ ನಾಯಕ

Advertisement

ಮೊಹಮ್ಮದ್‌ ಸಿರಾಜ್‌

ಪ್ರಸ್ತುತ ಆಸೀಸ್‌ ಪ್ರವಾಸದಲ್ಲಿ ಸಿರಾಜ್‌ ಏಕದಿನ, ಟಿ20, ಟೆಸ್ಟ್‌ ಮೂರೂ ತಂಡದಲ್ಲಿ ಕಾಣಿಸಿ ಕೊಂಡರು. ಹೈದರಾಬಾದ್‌ನ ಆಟೋ ಚಾಲಕನ ಪುತ್ರ ಮೆಲ್ಬರ್ನ್ನಲ್ಲಿ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದರು. ಅಲ್ಲಿಂದ ಸ್ಥಿರವಾಗಿ ಬೌಲಿಂಗ್‌ ಮಾಡುತ್ತಲೇ ಹೋದ ಅವರು, ಬ್ರಿಸ್ಬೇನ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ಆಡುವ ಹೊತ್ತಿಗೆ ಒಟ್ಟು 13 ವಿಕೆಟ್‌ ಪಡೆದು, ಭಾರತದ ಪರ ಗರಿಷ್ಠ ವಿಕೆಟ್‌ ಸಾಧಕನಾಗಿದ್ದರು. ಇದೇ ಪಂದ್ಯದ ಕೊನೆಯ ಇನಿಂಗ್ಸ್‌ ನಲ್ಲಿ 5 ವಿಕೆಟ್‌ ಪಡೆದು, ತಾನು ಜನಾಂಗೀಯ ನಿಂದನೆಗಳಿಗೆ ಹೆದರುವುದಿಲ್ಲವೆಂದು ವಿಶ್ವ ಕ್ರಿಕೆಟ್‌ಗೆ ನೇರಸಂದೇಶ ರವಾನಿಸಿದರು.

ಶಾರ್ದೂಲ್‌ ಠಾಕೂರ್‌

2018ರಲ್ಲಿ ಹೈದರಾಬಾದ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಮಹಾರಾಷ್ಟ್ರ ವೇಗಿ ಠಾಕೂರ್‌ ಕಾಲಿಟ್ಟರು. ಗ್ರಹಚಾರಕ್ಕೆ ಕೇವಲ 10 ಎಸೆತಗಳ ನಂತರ ಕುಂಟಿ ಕೊಂಡು ಪಂದ್ಯದಿಂದ ಹೊರಹೋದರು. ಅದಾದ ನಂತರ ಅವರಿಗೆ ಟೆಸ್ಟ್‌ ಆಡುವ ಅವಕಾಶವೇ ಸಿಕ್ಕಿರಲಿಲ್ಲ. ಅದೃಷ್ಟವಶಾತ್‌ ಬ್ರಿಸ್ಬೇನ್‌ ಟೆಸ್ಟ್‌ ಹೊತ್ತಿಗೆ ಗಾಯಾಳುಗಳ ಸಂಖ್ಯೆ ಹೆಚ್ಚಾದಾಗ ಠಾಕೂರ್‌ಕಣಕ್ಕಿಳಿದರು. ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌, 8ನೇ ವಿಕೆಟ್‌ಗೆ ಕ್ರೀಸ್‌ಗೆ ಬಂದು 67 ರನ್‌ ಬಾರಿಸಿದರು. ಇದು ಪಂದ್ಯದ ಹಣೆಬರಹ ನಿರ್ಧರಿಸಿತು. ಮುಂದೆ ಸಿಗುವ ಅವಕಾಶಗಳಲ್ಲಿ ಇನ್ನೊಂದಷ್ಟು ಸ್ಥಿರತೆ ತೋರಿದರೆ, ಅವರ ಭವಿಷ್ಯ ಭದ್ರ

ಶುಬಮನ್‌ ಗಿಲ್‌

ಕೇವಲ 21 ವರ್ಷದ ಶುಬಮನ್‌ ಗಿಲ್‌ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದು ಮೆಲ್ಬರ್ನ್ನಲ್ಲಿ. ಪ್ರತೀಪಂದ್ಯದಲ್ಲಿ ಉತ್ತಮವಾಗಿ ಆಡುತ್ತಲೇ ಹೋದ ಅವರು, ಬ್ರಿಸ್ಬೇನ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನ ಅಂತಿಮ ಇನಿಂಗ್ಸ್‌ನಲ್ಲಿ 91 ರನ್‌ ಬಾರಿಸಿದರು. ಕನಿಷ್ಠ ಡ್ರಾ ಮಾಡಿಕೊಂಡರೂ ಸಾಕು ಎಂಬ ಮನೋಭಾವವನ್ನೇ ಈ ಇನಿಂಗ್ಸ್‌ ಬದಲಿಸಿತು. ಭಾರತೀಯರು ಅಂತಿಮ ಟೆಸ್ಟ್‌ನಲ್ಲಿ ಗೆದ್ದು, ಸರಣಿಯನ್ನೂ ವಶಪಡಿಸಿಕೊಂಡರು. ಶುಬಮನ್‌ ಗಿಲ್‌ ಶುಭವಾಗಲಿ.

ಇದನ್ನೂ ಓದಿ: ಪಂತ್‌ ಇರುವುದೇ ಹೀಗೆ, ಅಂಜದ ಗಂಡಿನ ಹಾಗೆ

ವಾಷಿಂಗ್ಟನ್‌ ಸುಂದರ್‌

ತಮಿಳುನಾಡಿನ ಕೇವಲ 21 ವರ್ಷದ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಬ್ರಿಸ್ಬೇನ್‌ನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು. ಅವರು ಪ್ರಸ್ತುತ ವಿಶ್ವದ ಶ್ರೇಷ್ಠ ಸ್ಪಿನ್ನರ್‌ಗಳಲ್ಲೊಬ್ಬರಾದ ಆರ್‌.ಅಶ್ವಿ‌ನ್‌ ಸ್ಥಾನಕ್ಕೆ ಬಂದಿದ್ದರು. ಈ ಪಾತ್ರವನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿದರು. ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌, 7ನೇ ವಿಕೆಟ್‌ ಗೆ ಬ್ಯಾಟಿಂಗ್‌ಗಿಳಿದು 62 ರನ್‌, 2ನೇ ಇನಿಂಗ್ಸ್‌ನಲ್ಲಿ 1 ವಿಕೆಟ್‌ ಪಡೆದು, 22 ರನ್‌ ಬಾರಿಸಿದ್ದು ಎಂತಹ ಪರಿಣಾಮ ಬೀರಿತು ಎನ್ನುವುದು ವಿಶ್ವಕ್ಕೇ ಗೊತ್ತಾಗಿದೆ. ಭವಿಷ್ಯದಲ್ಲಿ ಭಾರತ ಕ್ರಿಕೆಟ್‌ನ ಖ್ಯಾತ ಆಲ್‌ರೌಂಡರ್‌ ಆಗುವ ಎಲ್ಲ ಸಾಮರ್ಥ್ಯವಿದೆ.

ಈ ಸರಣಿ ನೀಡಿದ ಸಂದೇಶಗಳು

ನಾಲ್ಕಲ್ಲ, ಐದು ದಿನಗಳ ಪಂದ್ಯವೇ ಇರಲಿ: ಟೆಸ್ಟ್‌ ಕ್ರಿಕೆಟ್‌ ರದ್ದು ಮಾಡಿ ಎಂಬ ಕೂಗಿದೆ. ಅದರ ಮಧ್ಯೆ ಐಸಿಸಿ 2023ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಿಂದ, ಐದು ದಿನಗಳ ಪಂದ್ಯವನ್ನು 4ಕ್ಕಿಳಿಸುವ ಚಿಂತನೆ ಮಾಡಿತ್ತು. ಭಾರತ-ಆಸೀಸ್‌ ಸರಣಿ, ಐದು ದಿನಗಳ ಟೆಸ್ಟ್‌ ಅನಿವಾರ್ಯ ಎಂದು ಸ್ಪಷ್ಟಪಡಿಸಿದೆ.

ರಿಷಭ್‌-ಶ್ರೇಷ್ಠ ಕೀಪರ್‌ +ಬ್ಯಾಟಿಗ: 2019ರ ಏಕದಿನ ವಿಶ್ವಕಪ್‌ ಮುಗಿದಾಗ ರಿಷಭ್‌ ಪಂತ್‌ ಖಳನಾಯಕರಾಗಿ ಕಾಣಿಸಿಕೊಂಡಿದ್ದರು. ಐಪಿಎಲ್‌ನಲ್ಲೂ ವೈಫ‌ಲ್ಯ ಕಂಡಿದ್ದರು. ಪ್ರಸ್ತುತ ಟೆಸ್ಟ್‌ ಸರಣಿಯ 3ನೇ ಪಂದ್ಯದಲ್ಲಿ 97, 4ನೇ ಪಂದ್ಯದಲ್ಲಿ 89 ರನ್‌ ಬಾರಿಸಿದರು. ಅಲ್ಲಿಗೆ ತಾನು ಭಾರತದ ಭವಿಷ್ಯದ ವಿಕೆಟ್‌ ಕೀಪರ್‌+ಬ್ಯಾಟ್ಸ್‌ಮನ್‌ ಎಂಬ ಸಂದೇಶವನ್ನು ಖಚಿತವಾಗಿ ಸಾರಿದರು.

ಆಸ್ಟ್ರೇಲಿಯಕ್ಕೆ ಸ್ಮಿತ್‌ ಅನಿವಾರ್ಯ: ಕೆಲವು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾ ದಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿದ ಬಳಿಕ ಸ್ಟೀವ್‌ ಸ್ಮಿತ್‌ ಆಸ್ಟ್ರೇಲಿಯದ ನಾಯಕತ್ವ ಕಳೆದು ಕೊಂಡಿದ್ದರು. ಪ್ರಸ್ತುತ ಭಾರತ ವಿರುದ್ಧ ಆಸ್ಟ್ರೇಲಿಯದ ಮರ್ಯಾದೆಯನ್ನು ಕಾಪಾಡಿದ್ದು ಸ್ಮಿತ್‌ ಮಾತ್ರ. ಮತ್ತೆ ಆಸೀಸ್‌ ನಾಯಕತ್ವ ಅವರಿಗೆ ಹಸ್ತಾಂತರಿಸುವುದು ಅನಿವಾರ್ಯವೆನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಹ್ಲಿ ನಾಯಕ ಸ್ಥಾನ ಭದ್ರವಲ್ಲ: ಆಸ್ಟ್ರೇಲಿಯ ಪ್ರವಾಸಕ್ಕೂ ಮುನ್ನವೇ ಕನಿಷ್ಠ ಟಿ20ಯಲ್ಲಾದರೂ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಗೆ ನಾಯಕತ್ವ ಬಿಟ್ಟುಕೊಡಬೇಕು ಎಂಬ ಚರ್ಚೆ ಶುರುವಾಗಿತ್ತು. ಈಗ ಟೆಸ್ಟ್‌ ಸರಣಿ ಮುಗಿದಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ 11 ಮಂದಿ ಗಾಯಾಳುಗಳ ನಡುವೆ, ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಟೆಸ್ಟ್‌ ಸರಣಿಯನ್ನೇ ಗೆಲ್ಲಿಸಿದರು. ಇದೀಗ ಟೆಸ್ಟ್‌ನಲ್ಲಿ ಶಾಂತಸ್ವಭಾವದ ಅಜಿಂಕ್ಯ ರಹಾನೆಗೆ ಯಾಕೆ ನಾಯಕತ್ವ ನೀಡಬಾರದು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next