Advertisement

ಯು-19 ವಿಶ್ವ ಕಪ್‌ ಕ್ರಿಕೆಟ್‌ಗೆ ಯುವ ಆಟಗಾರರ ತಯಾರಿ ಅಗತ್ಯ

10:55 AM Jun 02, 2022 | Team Udayavani |

ಹುಬ್ಬಳ್ಳಿ: ಮುಂದಿನ ವರ್ಷ 19ವರ್ಷದೊಳಗಿನ ಯುವ ವಿಶ್ವ ಕಪ್‌ (ಯು-19 ಯುಥ್‌ ವರ್ಲ್ಡ್ ಕಪ್‌) ಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬೆಳಗಾವಿ-ಹುಬ್ಬಳ್ಳಿ ವಲಯದಲ್ಲಿ ರಾಷ್ಟ್ರೀಯ ಶಿಬಿರಗಳು ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯ ಸುನೀಲ ಜೋಶಿ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇತಿಹಾಸದಲ್ಲಿ ಮೊದಲ ಬಾರಿಗೆ 19 ವರ್ಷದೊಳಗಿನವರ ವಿಶ್ವ ಕಪ್‌ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಯುವ ಆಟಗಾರರನ್ನು ತಯಾರಿ ಮಾಡಲು ಹಾಗೂ ಅವರನ್ನು ಪ್ರೇರೇಪಿಸಲು ತರಬೇತಿ ನೀಡಲಾಗುತ್ತಿದೆ. ತರಬೇತುದಾರರೊಂದಿಗೆ ಸಂವಹನ ಮಾಡಬಹುದು ಎಂದು ತಿಳಿ ಹೇಳಲಾಗುತ್ತಿದೆ.

ಶಿಬಿರಾರ್ಥಿಗಳು ತರಬೇತುದಾರರ ಮೇಲೆ ವಿಶ್ವಾಸವಿಡಬೇಕು. ಆಟಗಾರರರು ನಿರಂತರವಾಗಿ ಅಭ್ಯಾಸ(ಪ್ರಾಕ್ಟಿಸ್‌) ಮಾಡಬೇಕು. ಸತತ ಶ್ರಮ ಪಡಬೇಕು. ಎಲ್ಲರಲ್ಲೂ ಪ್ರತಿಭೆ ಇದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ರಾಜ್ಯದ ಬೆಳಗಾವಿ-ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರಕ್ಕೆ ದೇಶದ ಎಲ್ಲ ರಾಜ್ಯಗಳಿಂದ ತಲಾ 25 ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ. ಆಟಗಾರರಿಗೆ ಪ್ರೇರೇಪಿಸಲು ಅನುಭವ ಮುಖ್ಯ. ಆಟಗಾರರು ಮಾತ್ರವಲ್ಲ ತರಬೇತುದಾರರು, ಫಿಟ್ನೆಸ್, ಪಿಜಿಯೋಥೆರಪಿ ಎಲ್ಲರೊಂದಿಗೆ ಸಂವಹನ ಮುಖ್ಯ ಎಂದರು.

ಭಾರತದಲ್ಲಿ ಕರ್ನಾಟಕದಲ್ಲಿದ್ದಷ್ಟು ಸೌಲಭ್ಯಗಳು ಎಲ್ಲೂ ಇಲ್ಲ. ಇಲ್ಲಿನ ಎಲ್ಲ ವಲಯಗಳಲ್ಲಿ ಟರ್ಫ್‌ ಕ್ರಿಕೆಟ್‌ ಮೈದಾನಗಳಿವೆ. ರಾಜ್ಯದಲ್ಲಿ ವರ್ಷಕ್ಕೆ 5,500 ಪಂದ್ಯಗಳನ್ನು ಹಾಗೂ ಧಾರವಾಡ ವಲಯ ಒಂದರಲ್ಲೇ 500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿಸಲಾಗುತ್ತಿದೆ. ಹೀಗಾಗಿ ಬಿಸಿಸಿಐ, ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ) ಯಿಂದ ರಾಜ್ಯದಲ್ಲಿ ಹೆಚ್ಚೆಚ್ಚು ಪಂದ್ಯಗಳು ನಡೆಯುತ್ತಿವೆ ಎಂದರು.

Advertisement

ಇಂದು ಆಟಗಾರರು ಟಿ-20 ಪಂದ್ಯಕ್ಕೆ ಹೆಚ್ಚೆಚ್ಚು ಒತ್ತು ಕೊಡುತ್ತಿದ್ದಾರೆ. ಐಪಿಎಲ್‌ ಪಂದ್ಯಗಳೂ ಆಟಗಾರರಿಗೆ ದೊಡ್ಡ ಪ್ರಮಾಣದಲ್ಲಿ ಮೇಲೆತ್ತಿವೆ. ಆಟಗಾರರು ಇನ್ನೊಬ್ಬ ಆಟಗಾರರನ್ನು ನೋಡಿ ಕಲಿಯುವುದು ಬಹಳಷ್ಟಿದೆ. ಭಾರತದಲ್ಲಿ ಟೆಸ್ಟ್‌ ಪಂದ್ಯದ ಆಟಗಾರರು ಕಡಿಮೆ ಆಗಿದ್ದಾರೆ. ಭಾರತ ತಂಡದಲ್ಲಿ ಕರ್ನಾಟಕದ ಆಟಗಾರರ ಆಯ್ಕೆ ಹೇಳಿಕೊಳ್ಳುವಷ್ಟು ಕಡಿಮೆ ಆಗಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಆಡಿದ್ದಾರೆ. ಸ್ಪರ್ಧಾತ್ಮಕತೆ ಹೆಚ್ಚಾಗಿದ್ದರಿಂದ ಪ್ರತಿಸ್ಪರ್ಧಿಗಳು ಹೆಚ್ಚಾಗಿದ್ದಾರೆ. ಜತೆಗೆ ಅವಕಾಶಗಳು ಹೆಚ್ಚಿವೆ. ಕಾರಣ ಆಟಗಾರರು ಉತ್ತಮ ಪ್ರದರ್ಶನ ತೋರಬೇಕಾಗಿದೆ. ಕ್ರೀಡೆಯಲ್ಲಿ ಯಾವುದೇ ಪ್ರಭಾವ ನಡೆಯಲ್ಲ. ಆಟಗಾರರಲ್ಲಿ ಬಲಿಷ್ಠ ಕೌಶಲ್ಯವಿದ್ದರೆ ಯಾರೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ಕೌಶಲದಿಂದಲೇ ನಾವು ಗೆಲ್ಲಬೇಕು. ಶಾರ್ಟ್‌ಕಟ್‌ ನೋಡಬಾರದು. ಇದರಿಂದ ತಮ್ಮ ಪ್ರತಿಭೆ ಮರೆತುಬಿಡುತ್ತಾರೆ. ಕೊರೊನಾ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ರಣಜಿ ಟ್ರೋಪಿ ಪಂದ್ಯಗಳು ನಡೆದಿಲ್ಲ. ಇನ್ಮುಂದೆ ರಣಜಿ ಪಂದ್ಯಗಳು ಹೆಚ್ಚೆಚ್ಚು ನಡೆಯಲಿವೆ ಎಂದರು.

ಮುಕ್ತವಾಗಿ ಚರ್ಚಿಸಿ: ಆಟಗಾರರು ತರಬೇತುದಾರರ ಬಗ್ಗೆ ವಿಶ್ವಾಸ ಇಡಬೇಕು. ಅವರೊಂದಿಗೆ ಯಾವುದೇ ಮುಜುಗರ ಹೊಂದದೆ ಮುಕ್ತವಾಗಿ ಚರ್ಚಿಸಬೇಕು. ತರಬೇತುದಾರರು ಇಲ್ಲದೆ ನಾವು ಏನೂ ಕಲಿಯಲು ಸಾಧ್ಯವಿಲ್ಲ. ನಿಮ್ಮ ಜತೆಯಲ್ಲಿರುವ ಆಟಗಾರರೊಂದಿಗೆ ಉತ್ತಮ ಬಾಂಧವ್ಯ, ನಂಬಿಕೆ ಇಟ್ಟುಕೊಳ್ಳಬೇಕು. ಸತತ ಅಭ್ಯಾಸ ಮಾಡಬೇಕು. ಶ್ರಮ ಪಡಬೇಕೆಂದು 19ವರ್ಷದೊಳಗಿನ ಆಟಗಾರ್ತಿಯರೊಂದಿಗೆ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯ ಸುನೀಲ ಜೋಶಿ ಕರೆ ಕೊಟ್ಟರು. ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ತರಬೇತಿ ಪಡೆಯುತ್ತಿರುವ ರಾಷ್ಟ್ರೀಯ ಶಿಬಿರದಲ್ಲಿನ ಶಿಬಿರಾರ್ಥಿಗಳೊಂದಿಗೆ ಬುಧವಾರ ಸಮಾಲೋಚನೆ ನಡೆಸಿದ ಅವರು, ತರಬೇತು ದಾರರೊಂದಿಗೆ ಹೆಚ್ಚು ಸಮಯ ಕಳೆದು ಹೊಸ ಹೊಸ ಕೌಶಲ್ಯಗಳನ್ನು ಕಲಿಯಬೇಕು. ಸತತ ಅಭ್ಯಾಸ ಮಾಡಬೇಕು. ಎಷ್ಟು ಬಾರಿ ತಪ್ಪು ಮಾಡುತ್ತೀರಿ ಅದರಿಂದ ಎಲ್ಲವನ್ನು ಕಲಿಯುತ್ತೀರಿ. ಬೇರೆ ಆಟದ ಆಟಗಾರರ ಆತ್ಮಕತೆ ಅಧ್ಯಯನ ಮಾಡಬೇಕು. ಇದರಿಂದ ನಿಮ್ಮ ಮನಸ್ಸಿನಲ್ಲಿರುವ ಗೊಂದಲಗಳಿಗೆ ಪರಿಹಾರ ಸಿಗಲಿದೆ. ನೀವು ಯಾವ ತಂಡದೊಂದಿಗೆ ಆಡುತ್ತಿದ್ದೇವೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಆಟದ ಬಗ್ಗೆ ಗಮನಹರಿಸಿ. ನೀವು ಯಾವ ತಂಡದಲ್ಲಿ ಆಡುತ್ತಿದ್ದೀರಿ ಎಂಬುದು ಮುಖ್ಯ. ಇದು ವೈಯಕ್ತಿಕವಾಗಿರದೆ ತಂಡದ ಆಟವಾಗಿದ್ದು, ಸಾಂಘಿಕವಾಗಿ ಎಲ್ಲರೂ ಆಡಬೇಕು ಎಂದರು.

ಕೆಎಸ್‌ಸಿಎ ಧಾರವಾಡ ವಲಯದ ಚೇರ್ಮನ್‌ ವೀರಣ್ಣ ಸವಡಿ, ಸಂಚಾಲಕ ಅವಿನಾಶ ಪೋತದಾರ, ವಸಂತ ಶೆಟ್ಟಿ, ಶ್ರೀನಾಥ, ಶಿವಾನಂದ ಗುಂಜಾಳ, ವಿಜಯ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next