Advertisement

ಸಲಹಾ ಶುಲ್ಕ ಶ್ರೀಧರಾಶ್ರಮದ ಹುಂಡಿಗೆ!: ಯುವ ವೈದ್ಯ ಡಾ|ಅಭಿಷೇಕ್‌ರಿಂದ ವಿಶಿಷ್ಟ ಕಾರ್ಯ

12:01 PM Jun 19, 2021 | Team Udayavani |

ಸಾಗರ: ಮೈಸೂರಿನ ಕೆ.ಆರ್‌. ಆಸ್ಪತ್ರೆಯ ಸರ್ಜನ್‌ ಆಗಿ ಕೆಲಸ ನಿರ್ವಹಿಸುತ್ತಿರುವ ಸಾಗರದ ವೈದ್ಯರೋರ್ವರು, ಅನಿವಾರ್ಯ ಕಾರಣಗಳಿಂದ ಕೆಲ ಕಾಲ ತಮ್ಮ ಸಾಗರದ ಮನೆಯಲ್ಲಿರುವಾಗ ಕಳೆದ 2 ತಿಂಗಳಿನಿಂದ ಆರೋಗ್ಯ ಸಮಸ್ಯೆ ಅಥವಾ ಅನುಮಾನಗಳಿಗೆ ಆನ್‌ ಲೈನ್‌ ಸಮಾಲೋಚನೆ ಮೂಲಕ ಸೂಕ್ತ ಚಿಕಿತ್ಸೆ ಸಲಹೆ ನೀಡುತ್ತಿದ್ದಾರೆ.

Advertisement

ಕೋವಿಡ್‌ ಕುರಿತಾದ ಹಲವು ಅನುಮಾನಗಳನ್ನು ಪರಿಹರಿಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಜನರಿಗೆ ತುರ್ತು ಸಂದರ್ಭದಲ್ಲಿ ಸಲಹೆ, ಮಾರ್ಗದರ್ಶನ ಮಾಡಿದ್ದಾರೆ. ಗುಣಮುಖರಾದವರುಆಗ್ರಹಪೂರ್ವಕವಾಗಿ ನೀಡಿದ ಸಲಹಾ ಶುಲ್ಕವನ್ನು ವೈದ್ಯರು ತಾಲೂಕಿನ ವರದಪುರದ ಶ್ರೀಧರಾಶ್ರಮದ ಹುಂಡಿಗೆ ತಲುಪಿಸಿರುವ ವಿಚಿತ್ರ ವಿದ್ಯಮಾನ ನಡೆದಿದೆ.

ಈವರೆಗೆ ಈ ರೀತಿ ಕಾಣಿಕೆಯಾಗಿ ಸಂದಿರುವ 46 ಸಾವಿರ ರೂ.ಗಳಿಗೆ ಶ್ರೀಧರಾಶ್ರಮದ ಆಡಳಿತ ನೋಡಿಕೊಳ್ಳುವ ಶ್ರೀಧರ ಸೇವಾ ಮಹಾಮಂಡಲ ಆ ಮೊತ್ತಕ್ಕೆ ರಸೀದಿ ಹರಿದು ಅಧಿಕೃತ ಅಭಿನಂದನಾ ಪತ್ರದ ಜೊತೆ ಆ ವೈದ್ಯರಿಗೆ ನೀಡಿದೆ.

ಈ ರೀತಿಯ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ನಗರದ ಕೆಳದಿ ರಸ್ತೆಯ ನಿವಾಸಿ ಕೇವಲ 26 ವರ್ಷಗಳ ಡಾ| ಎಸ್‌.ಎಸ್‌. ಅಭಿಷೇಕ್‌. ಮರ ಕೈಗಾರಿಕೆಯ ಕೆಲಸ ಮಾಡುವ ಟಿ.ಎಸ್‌. ಶಶಿಧರಮೂರ್ತಿ ಮತ್ತು ಶೀಲಾ ದಂಪತಿ ಪುತ್ರ. ನಗರದ ಎಂಡಿಎಫ್‌ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿದ್ದ ಅವರುಆನಂತರ ಬಳ್ಳಾರಿಯಲ್ಲಿ ವೈದ್ಯಕೀಯ ಪದವಿ ಪಡೆದುಕೊಂಡಿದ್ದಾರೆ. ತಾವು ಮನೆಯಲ್ಲಿದ್ದರೂ ಜನರಿಗೆ ಉಪಕಾರಿಯಾಗಿರಬೇಕು ಎಂಬ ಕಾರಣಕ್ಕೆ ಆನ್‌ಲೈನ್‌ ಸಮಾಲೋಚನೆಸೌಲಭ್ಯವನ್ನು ಜನರಿಗೆ ಕೊಡುವ ಪ್ರಕಟಣೆವಿವಿಧ ಸಾಮಾಜಿಕ ಜಾಲತಾಣಗಳಲ್ಲಿಪ್ರಕಟಗೊಂಡ ನಂತರ ನಿರಂತರವಾಗಿ ಫೋನ್‌ ಕರೆಗಳನ್ನು ಸ್ವೀಕರಿಸತೊಡಗಿದ್ದಾರೆ. ತಮ್ಮ ಸಲಹೆಗೆ ಶುಲ್ಕ ಪಡೆದುಕೊಳ್ಳಲು ಬಯಸುತ್ತಿಲ್ಲ.

ಈ ರೀತಿ ಪರಿಹಾರ ಪಡೆದ ಚಿಕ್ಕಮಗಳೂರಿನ ವ್ಯಕ್ತಿಯೋರ್ವ ಸೇವಾ ಶುಲ್ಕ ಪಡೆಯಬೇಕೆಂದು ತೀರಾ ಹಠಮಾಡಿದ್ದರಿಂದ ಒಪ್ಪಿಕೊಂಡ ಅಭಿಷೇಕ್‌,ನನಗೆ ಕೊಡಬೇಕೆಂದುಕೊಂಡಿರುವ ಹಣವನ್ನು ನೀವು ಶ್ರೀಧರ ಸ್ವಾಮಿಗಳ ಸನ್ನಿಧಿಗೆ ಸಲ್ಲಿಸಿ ಎಂದು ಸೂಚಿಸಿದ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ. ಶ್ರೀಧರ ಸೇವಾ ಮಹಾಮಂಡಲದ ಒಪ್ಪಿಗೆ ಪಡೆದು ಅವರ ಬ್ಯಾಂಕ್‌ ಖಾತೆಯ ವಿವರವನ್ನು ಪೇಶೆಂಟ್‌ ಗೆ ನೀಡಿದ್ದಾರೆ. ನಂತರದ ದಿನಗಳಲ್ಲಿ ಯಾರೇಶುಲ್ಕದ ಬಗ್ಗೆ ವಿಚಾರಿಸಿದಾಗಲೂ, ನೀವು ಕೊಡಲೇಬೇಕೆಂದಿದ್ದರೆ ಶ್ರೀಧರರ ಹುಂಡಿಗೆಮುಟ್ಟಿಸಿ ಎಂದಿದ್ದಾರೆ. ಈ ರೀತಿ ವೈದ್ಯ ಶುಲ್ಕ ಎಂಬ ಶೀರ್ಷಿಕೆಯಡಿಯೇ ಮಹಾಮಂಡಲಕ್ಕೆ 46 ಸಾವಿರ ರೂ. ಸಂದಾಯವಾಗಿದೆ.

Advertisement

ಈ ಹಣದ ಬಗ್ಗೆ ಸ್ಪಷ್ಟ ಲೆಕ್ಕ ಇರಿಸಿದ ಶ್ರೀಧರ ಸೇವಾ ಮಹಾಮಂಡಲ ಶುಕ್ರವಾರ ಅಭಿಷೇಕ್‌ ಅವರಿಗೆ ಅಧಿಕೃತ ಪತ್ರ ಹಾಗೂ ಹಣ ಸಂದಾಯದ ರಸೀದಿಯನ್ನು ತಲುಪಿಸಿದ್ದಾರೆ. ಸಾಗರ, ಸೊರಬ, ಸಿರಸಿ, ಕಾರವಾರ, ಚಿಕ್ಕಮಗಳೂರು ಸೇರಿದಂತೆರಾಜ್ಯದ ನಾನಾ ಭಾಗಗಳಿಂದ ಚಿಕಿತ್ಸೆ ಪಡೆದು, ಗುಣಮುಖರಾದವರು ಸೇವಾ ಶುಲ್ಕವನ್ನು ಶ್ರೀಧರಾಶ್ರಮಕ್ಕೆ ಜಮಾ ಮಾಡಿದ್ದಾರೆ ಎಂದು ಪತ್ರದಲ್ಲಿ ನಮೂದಿಸಲಾಗಿದೆ. ಡಾ| ಅಭಿಷೇಕ್‌ಅವರ ಸೇವಾ ಮನೋಭಾವದ ಜತೆಗೆ ವ್ಯಕ್ತವಾದ ಶ್ರದ್ಧಾಭಕ್ತಿಯನ್ನು ಶ್ರೀಧರ ಸೇವಾ ಮಂಡಲ ಮೆಚ್ಚಿ, ಅಭಿನಂದನೆ ಸೂಚಿಸಿದೆ.

ವೈದ್ಯರ ಸೇವೆ ಈಗಲೂ ಲಭ್ಯ :

ಆನ್‌ಲೈನ್‌ ಸಮಾಲೋಚನೆ ಅಥವಾ ಸಲಹೆ ಅಗತ್ಯವಿದ್ದವರು ಡಾ| ಅಭಿಷೇಕ್‌ ಅವರನ್ನು ದೂ: 82773 33528 ಮೂಲಕ ಸಂಪರ್ಕಿಸಬಹುದು. ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಅಥವಾ ಅನುಮಾನಗಳಿದ್ದು ತುರ್ತಾಗಿ ವೈದ್ಯರ ಜೊತೆ ಆನ್‌ಲೈನ್‌ ಸಮಾಲೋಚನೆ ಅಥವಾ ಸಲಹೆ ಬೇಕಾದಲ್ಲಿ ಸಂಪರ್ಕಿಸಬಹುದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next