ಪುರಾತನ ಕೆರೆ
ಕೊಡವೂರು ಕಲ್ಮಾಡಿ ನಡುವಿನ ಕಾನಂಗಿಯಲ್ಲಿ ಪುರಾತನ ಚಿಕ್ಕಣ್ಣ ಕೆರೆ ಇದ್ದು ಹಲವಾರು ವರ್ಷಗಳ ಹಿಂದೆ ಈ ಕೆರೆ ನೀರಾವರಿಗೆ ಉಪಯೋಗವಾಗುತ್ತಿತ್ತು. ವರ್ಷವಿಡೀ ನೀರಿನಿಂದ ತುಂಬಿರುತ್ತಿದ್ದ ಈ ಕೆರೆಯಲ್ಲಿ ಮೀನುಗಾರಿಕೆ ಕೂಡ ನಡೆಯುತ್ತಿತ್ತು. ಯುಗಾದಿಯಂದು ಇಲ್ಲಿ ಊರ ಜನ ಸೇರಿ ಮೀನು ಹಿಡಿಯುತ್ತಿದ್ದರು ಕೂಡ. ಆದರೆ ಈ ಕೆರೆ ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಪ್ರಯೋಜನಕ್ಕೆ ಬಾರದಂತಾಗಿತ್ತು. ಇದೀಗ ಸ್ಥಳೀಯ ಕೆರೆ ಅಭಿವೃದ್ಧಿ ಸಮಿತಿಯನ್ನು ಯುವಕರು ಕಟ್ಟಿಕೊಂಡು ಪುನಶ್ಚೇತನಕ್ಕೆ ತೊಡಗಿಕೊಂಡಿದ್ದಾರೆ.
Advertisement
ಯುವಕರ ಶ್ರಮದಾನ ಸುಮಾರು 30-35 ಸೆಂಟ್ಸ್ ವಿಸ್ತೀರ್ಣವಿರುವ ಕೆರೆಯಲ್ಲಿ ವ್ಯಾಪಕ ಕಳೆ ಗಿಡಗಳು ಬೆಳೆದಿದ್ದು, ಭಾರೀ ಪ್ರಮಾಣದ ಹೂಳು ತುಂಬಿದೆ. ಸುಮಾರು 40 -50 ಮಂದಿ ಯುವಕರ ತಂಡ ಹಿರಿಯರ ಮಾರ್ಗದರ್ಶನದಲ್ಲಿ ಕಳೆ ಗಿಡಗಳನ್ನು ತೆರವುಗೊಳಿಸಿದ್ದಾರೆ. ಮುಂದೆ ಜೆಸಿಬಿ ಮೂಲಕ ಹೂಳನ್ನು ತೆಗೆದು ಈ ಬಾರಿ ಯುಗಾದಿಗೆ ಗತ ವೈಭವವನ್ನು ಮರಳಿಸುವ ಉದ್ದೇಶವಿದೆ. ಜತೆಗೆ ಊರಿನಲ್ಲಿರುವ ಇತರ ನಾಲ್ಕು ಕೆರೆಗಳ ಪುನಶ್ಚೇತನಗೊಳಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಅಂತರ್ಜಲ ವೃದ್ಧಿ, ಕೆರೆ ಮರುಬಳಕೆಗೆ ಉಪಯೋಗವಾಗುವಂತೆ ಮಾಡುವುದು ಕೆರೆ ಅಭಿವೃದ್ಧಿ ಸಮಿತಿಯ ಉದ್ದೇಶವಾಗಿದೆ.
ನಮ್ಮ ಪೂರ್ವಜರು ನಿರ್ಮಿಸಿರುವ ಕೆರೆಗಳನ್ನು ರಕ್ಷಣೆ ಮಾಡವುದು ನಮ್ಮೆಲ್ಲರ ಕರ್ತವ್ಯ, ನಮ್ಮೂರಿನ ಕೆರೆಗಳನ್ನು ನಾವು ಜವಾಬ್ದಾರಿಯಿಂದ ನೋಡಿಕೊಳ್ಳಲು ನಾವು ಅಭಿವೃದ್ಧಿ ಸಮಿತಿಯನ್ನು ರಚಿಸಿ ಅಭಿವೃದ್ದಿ ಪಡಿಸಲು ಮುಂದಾಗಿದ್ದೇವೆ.
– ಪ್ರಭಾತ್ ಕೋಟ್ಯಾನ್, ಸ್ಥಳೀಯರು ಹಿರಿಯರ ಮಾರ್ಗದರ್ಶನದಲ್ಲಿ ಅಭಿವೃದ್ಧಿ
ಹಿಂದೆ ಕೃಷಿಗೆ ಆಧಾರವಾಗಿದ್ದ ಈ ಕೆರೆ ಆ ಬಳಿಕ ಎಷ್ಟೋ ವರ್ಷಗಳಿಂದ ಹೂಳು ತುಂಬಿ ಮುಚ್ಚಿಹೋಗಿತ್ತು. ಕೆರೆಯನ್ನು ಅಭಿವೃದ್ಧಿಪಡಿಸಲು ಮನವಿ ಸಲ್ಲಿಸಲಾಗಿತ್ತು. ಇದೀಗ ಸ್ಥಳೀಯ ಯುವಕರು ಸೇರಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಅಭಿವೃದ್ಧಿಗೆ ಮುಂದಾಗಿದ್ದೇವೆ.
– ದೇವರಾಜ್,
ಅಧ್ಯಕ್ಷರು, ಕೆರೆ ಅಭಿವೃದ್ದಿ ಸಮಿತಿ, ಕೊಡವೂರು