Advertisement

ಯುವಜನರು ಕನ್ನಡ ಚಿತ್ರಗಳನ್ನು ವೀಕ್ಷಿಸಲಿ 

12:47 PM Nov 18, 2017 | |

ಮೈಸೂರು: ಸಿನಿಮಾ ಜನರ ಮೇಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮ. ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಯುವಜನರು ಹೆಚ್ಚು ಚಿತ್ರಗಳನ್ನು ವೀಕ್ಷಿಸಬೇಕು ಎಂದು ಜಿಪಂ ಸಿಇಒ ಪಿ.ಶಿವಶಂಕರ್‌ ಹೇಳಿದರು.

Advertisement

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಶುಕ್ರವಾರ ಚಲನಚಿತ್ರೋತ್ಸವ ಸಪ್ತಾಹದ ಅಂಗವಾಗಿ ಒಲಂಪಿಯಾ ಚಿತ್ರಮಂದಿರದಲ್ಲಿ ಆಯೋಜಿಸಿರುವ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಪಡೆದ ಸಿನಿಮಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಚಿತ್ರರಂಗವನ್ನು ಉಳಿಸಿ ಬೆಳೆಸಬೇಕಾದರೆ ಚಲನಚಿತ್ರಗಳನ್ನು ಹೆಚ್ಚು ಪ್ರೋತ್ಸಾಹಿಸಿ ಚಿತ್ರಮಂದಿರಗಳಿಗೆ ಹೋಗಿ ಕನ್ನಡ ಚಿತ್ರಗಳನ್ನು ನೋಡಬೇಕು. ಮಕ್ಕಳ ಮೇಲೆ ಚಲನಚಿತ್ರಗಳು ತುಂಬಾ ಪ್ರಭಾವ ಬೀರುತ್ತವೆ. ಮೊಬೈಲ್‌ ಮತ್ತು ಟಿವಿಗಳಲ್ಲೂ ಸಿನಿಮಾ ಲಭ್ಯವಿವೆ. ಆದರೆ, ಚಿತ್ರಮಂದಿರಕ್ಕೆ ಬಂದು ನೋಡುವ ಅನುಭವ ಸಿಗುವುದಿಲ್ಲ. ಸಿನಿಮಾಗಳನ್ನು ಚಿತ್ರಮಂದಿರಗಳಲ್ಲೇ ನೋಡಬೇಕು ಎಂದು ಹೇಳಿದರು.

ಡಾ.ರಾಜ್‌ಕುಮಾರ್‌ ಅಭಿನಯದ ಬಂಗಾರದ ಮನುಷ್ಯ ನೋಡಿದ ಎಷ್ಟೋ ಯುವಕರು ಅಂದು ಕೃಷಿಯಲ್ಲಿ ತೊಡಗಿದ್ದರು. ಅಷ್ಟು ಪ್ರಭಾವವನ್ನು ಉತ್ತಮ ಚಿತ್ರಗಳು ಮಾಡುತ್ತವೆ. ಇಂತಹ ಚಿತ್ರಗಳನ್ನು ಸರ್ಕಾರ ಕೂಡ ಪ್ರೋತ್ಸಾಹಿಸಬೇಕೆಂದರು.

ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕಾದರೆ ಮೊದಲು ಮಕ್ಕಳಿಗೆ ನೀಡಬೇಕು. ಸದಭಿರುಚಿಯ ಚಲನಚಿತ್ರಗಳನ್ನು ಆಯ್ಕೆ ಮಾಡಿ ಶಾಲಾ ಮಕ್ಕಳಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟರೆ ಉತ್ತಮ ಸಂದೇಶ ತಲುಪುತ್ತದೆ ಎಂದರು.

Advertisement

ಟಿವಿಗಳಲ್ಲಿ ಹಲವಾರು ಕಾರ್ಯಕ್ರಮಗಳು ಬರುತ್ತವೆ. ಅವುಗಳಲ್ಲಿ ಯಾವ ಕಾರ್ಯಕ್ರಮಗಳನ್ನು ನೋಡಬೇಕು ಎಂಬುದನ್ನು ಮಕ್ಕಳು ಆಯ್ಕೆ ಮಾಡಿಕೊಳ್ಳಬೇಕು. ಭಕ್ತ ಕನಕದಾಸರನ್ನು ನಾವು ನೋಡಿಲ್ಲ. ಆದರೆ, ರಾಜಕುಮಾರ್‌ ಅಭಿನಯದಿಂದ ಕನಕದಾಸರು ಹೇಗಿದ್ದರು, ಅವರ ಭಕ್ತಿಗೆ ಶ್ರೀಕೃಷ್ಣ ಹೇಗೆ ಒಲಿದ ಎಂಬುದನ್ನು ಕಾಣುತ್ತೇವೆ.

ಚಿನ್ನಾರಿಮುತ್ತ ಸಿನಿಮಾದಲ್ಲೂ ಸಹ ಮಕ್ಕಳಿಗೆ ಉತ್ತಮ ಅವಕಾಶ ನೀಡಿದರೆ ರಾಷ್ಟ್ರಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆ  ಸಾಧ್ಯ ಎಂದು ತೋರಿಸಿದ್ದಾರೆ. ದಂಗಲ್‌, ತಾರೆ ಜಮೀನ್‌ ಫ‌ರ್‌ ಮುಂತಾದವು ನೋಡಬೇಕಾದ ಚಿತ್ರಗಳು. ಮಕ್ಕಳು ಇಂತಹ ಚಿತ್ರಗಳನ್ನು ನೋಡಿ, ಟಿಪ್ಪಣಿ ಬರೆದು ಪ್ರಾರ್ಥನೆ ಸಂದರ್ಭದಲ್ಲಿ ಪ್ರಸ್ತುತಪಡಿಸಬೇಕು ಎಂದರು.

ಉದ್ಘಾಟನಾ ಚಿತ್ರವಾಗಿ ಪೌರಕಾರ್ಮಿಕರ ಸಮಸ್ಯೆ ಹಾಗೂ ಸಂಕಷ್ಟಗಳ ಬಗ್ಗೆ ನಾಗರಿಕ ಸಮಾಜಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಿರುವ, ಗಿರಿರಾಜ್‌ ನಿರ್ದೇಶನದ ಅಮರಾವತಿ ಸಿನಿಮಾ ಪ್ರದರ್ಶಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉದಯ್‌ಕುಮಾರ್‌, ಶಿಕ್ಷಣ ಅಧಿಕಾರಿ ರಾಜಶೇಖರ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್‌. ರಾಜು, ಶಿಕ್ಷಣ ಸಂಯೋಜಕರಾದ ಜಯರಾಮ್‌, ಒಲಂಪಿಯಾ ಚಿತ್ರಮಂದಿರದ ಅಧೀಕ್ಷಕ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ಇಂದು “ಕಿರಿಕ್‌ಪಾರ್ಟಿ’ ಪ್ರದರ್ಶನ: ಶನಿವಾರ ಕಿರಿಕ್‌ ಪಾರ್ಟಿ, 19ರಂದು ರಾಮಾ ರಾಮಾ ರೇ, 20ರಂದು ಮದೀಪ್ಪು$(ತುಳು), 21 ರಂದು ಯೂ-ಟರ್ನ್, 22 ರಂದು ಅಲ್ಲಮ ಹಾಗೂ 23 ರಂದು ಮಾರಿಕೊಂಡವರು ಸಿನಿಮಾಗಳನ್ನು ಒಲಂಪಿಯಾ ಚಿತ್ರಮಂದಿರದಲ್ಲಿ ಬೆಳಗಿನ ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next