ಮೈಸೂರು: ಸರ್ಕಾರಗಳು ಮಹನೀಯರ ಜಯಂತಿಗಳನ್ನು ಮತಬ್ಯಾಂಕ್‌ಗಳನ್ನಾಗಿ ಮಾಡಿಕೊಳ್ಳದೆ ಯುವಜನರಲ್ಲಿ ದೇಶಪ್ರೇಮ ಬೆಳೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಲೇಖಕ ಬನ್ನೂರು ಕೆ.ರಾಜು ಹೇಳಿದರು. ಮೈಸೂರು ಕನ್ನಡ ವೇದಿಕೆ ವತಿಯಿಂದ ನಗರದ ಸುಬ್ಬರಾಯನಕೆರೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಸೋಮವಾರ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಬ್ರಿಟೀಷರ ಕಪಿಮುಷ್ಟಿಯಲ್ಲಿದ್ದ ಭಾರತಕ್ಕೆ ಮುಕ್ತಿ ಕೊಡಿಸುವ ಸಲುವಾಗಿ ಹೋರಾಡಿದ ಮಹಾನ್ ಹೋರಾಟಗಾರರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಗ್ರಗಣ್ಯ. ಬ್ರಿಟೀಷರ ಎದುರು ನಿಂತು ಮಾತನಾಡಲು ಹೆದರುತ್ತಿದ್ದ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಧೈರ್ಯಶಾಲಿಯಾಗಿದ್ದ ಸಂಗೊಳ್ಳಿ ರಾಯಣ್ಣ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚುಹಚ್ಚಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ತ್ಯಾಗಿಯಾಗಿದ್ದಾರೆ ಎಂದರು.
ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ತ್ಯಾಗ ಎಲ್ಲರಿಗೂ ಮಾದರಿಯಾಗಿದ್ದು ಯುವಕರು ದೇಶಪ್ರೇಮವನ್ನು ಮೈಗೂಡಿಸಿಕೊಂಡು, ರಾಯಣ್ಣನ ಹಾದಿಯಲ್ಲಿ ಮುನ್ನಡೆದು ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ದೇಶಕ್ಕಾಗಿ ಹೋರಾಡಿದ ಮಹಾನ್‌ವ್ಯಕ್ತಿಗಳ ಮೂಲಕ ಯುವಕರಲ್ಲಿ ದೇಶಪ್ರೇಮ ಬೆಳೆಸುವ ಜತೆಗೆ ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀ ಬಾಯಿ ಸೇರಿದಂತೆ ಮಹಾನ್ ವ್ಯಕ್ತಿಗಳ ಯಶೋಗಾಥೆಯನ್ನು ಪಠ್ಯಕ್ಕೆ ಸೇರಿಸಬೇಕು ಎಂದು ಹೇಳಿದರು.
ಕಪ್ಪುಪಟ್ಟಿಗೆ ಸೇರಿಸಿ: ಸಾಹಿತಿ ಬರಗೂರು ರಾಮಚಂದ್ರಪ್ಪ ಸೈನಿಕರ ಕುರಿತು ಅವಹೇಳನಕಾರಿಯಾಗಿ ಬರೆದ ಲೇಖನ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ದೇಶದೆಲ್ಲೆಡೆ ಈ ಲೇಖನದ ವಿರುದ್ಧ ಖಂಡನೆ ವ್ಯಕ್ತವಾಗಿದ್ದು, ವಿಶ್ವವಿದ್ಯಾಲಯ ಪಠ್ಯವನ್ನು ವಾಪಸ್ ಪಡೆದಿದೆ. ಪ್ರಾಣವನ್ನೂ ಲೆಕ್ಕಿಸದೆ ದೇಶಕ್ಕಾಗಿ ಹೋರಾಡುವ ಸೈನಿಕರ ಕುರಿತು ಈ ರೀತಿ ಅವಹೇಳನಕಾರಿ ಲೇಖನ ಬರೆದು ಸಮಾಜದಲ್ಲಿ ಗೊಂದಲವನ್ನುಂಟು ಮಾಡುತ್ತಿರುವುದರಿಂದ ಬರಗೂರು ಅವರ ಯಾವುದೇ ಲೇಖನವನ್ನು ಪಠ್ಯಕ್ಕೆ ಸೇರಿಸಬಾರದು,
ಜತೆಗೆ ಅಕಾಡೆಮಿಗಳಿಂದಲೂ ಅವರನ್ನು ದೂರವಿಡುವ ಮೂಲಕ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಶಿವಕುಮಾರ್, ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಎಂ.ಜೆ.ಕೃಷ್ಣಮೂರ್ತಿ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಉಪಾಧ್ಯಕ್ಷ ನಾಲಾಬೀದಿ ರವಿ, ರಾಧಾಕೃಷ್ಣ ಇನ್ನಿತರರು ಹಾಜರಿದ್ದರು.