Advertisement

ಅನಗತ್ಯ ವಿಷಯಗಳತ್ತ ವಾಲುತ್ತಿದೆ ಯುವಜನತೆ

08:23 PM Jan 25, 2020 | Lakshmi GovindaRaj |

ತುಮಕೂರು: ಯುವಜನತೆ ಅನಗತ್ಯ ವಿಷಯಗಳತ್ತ ಹೆಚ್ಚು ಮಾರು ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್‌ ವಿಷಾದಿಸಿದರು.

Advertisement

ತುಮಕೂರು ವಿಶ್ವವಿದ್ಯಾಲಯದ ಸರ್‌ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ತುಮಕೂರು ವಿ.ವಿ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ದಿನಾಚರಣೆ, ಸಾಮಾಜಿಕ ಪಿಡುಗುಗಳ ವಿರುದ್ಧ ಅರಿವಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರಲ್ಲಿರುವ ಚೈತನ್ಯ ಮತ್ತು ಶಕ್ತಿ ಸದ್ಬಳಕೆಯಾಗಬೇಕು ಎಂದರು.

ಮಹನೀಯರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಮಹನೀಯರ ಸಾಧನೆ ಮತ್ತು ಆದರ್ಶಗಳು ಯುವ ಪೀಳಿಗೆಗೆ ದಾರಿಯಾಗಬೇಕು. ಸ್ವಾಮಿ ವಿವೇಕಾನಂದರು ಮೌಡ್ಯ, ಪವಾಡದ ಬಗ್ಗೆ ಹೇಳಲಿಲ್ಲ. ಬದಲಾಗಿ ಯುವಕರ ಶಕ್ತಿಯಿಂದ ಏನೆಲ್ಲಾ ಸಾಧಿಸಬಹುದು ಎಂಬುದನ್ನು ಪ್ರತಿಪಾದಿಸಿದರು. ಕಾಯಕ ಪ್ರಜ್ಞೆ ಮತ್ತು ದೃಢಸಂಕಲ್ಪದಿಂದ ಬದುಕಿನಲ್ಲಿ ಗುರಿ ಮುಟ್ಟಲು ಸಾಧ್ಯ ಎಂಬುದನ್ನು ತೋರಿಸಿದರು. ಇವರ ಆದರ್ಶಗಳು ಯುವ ಪೀಳಿಗೆಗೆ ಮಾದರಿಯಾಗಲಿ ಎಂದು ಪ್ರತಿಪಾದಿಸಿದರು.

ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ಮಾತನಾಡಿ, ಹಿಂದಿನ ಕಾಲದಲ್ಲಿ ಪುಸ್ತಕಗಳೇ ಮನುಷ್ಯನ ವ್ಯಕ್ತಿತ್ವ ರೂಪಿಸಿದ್ದವು. ಯುವಕರು ಬೇರೆ ಬೇರೆ ಚಟಗಳಿಗೆ ಮಾರುಹೋಗದೆ ಭವಿಷ್ಯ ರೂಪಿಸಿಕೊಳ್ಳುವತ್ತ ಮುಂದಾಗಿ ಎಂದರು. ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸಾ.ಚಿ.ರಾಜಕುಮಾರ್‌ ಮಾತನಾಡಿ, ಕ್ಷಣದ ಸುಖಕ್ಕೆ ಜೀವನ ಪರ್ಯಂತ ನರಳುವ ಮಾರ್ಗ ಹುಡುಕಿಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. ಮದ್ಯ, ಮಾದಕ ವ್ಯಸನಗಳಿಗಿಂದ ಹೊರಬರಬೇಕು ಎಂದು ಹೇಳಿದರು.

ಮಾದಕ ವಸ್ತುಗಳ ಉತ್ಪಾದನೆ, ಮಾರಾಟ ಮತ್ತು ಸೇವನೆ ಇವೆಲ್ಲವೂ ಅಪರಾಧಗಳಾಗಿದ್ದು, 1985ರ ನಾರ್ಕೋಟಿಕ್‌ ಡ್ರಗ್ಸ್‌ ಕಾಯ್ದೆ ಪ್ರಕಾರ ಶಿಕ್ಷೆ ವಿಧಿಸಲ್ಪಡುತ್ತದೆ. ತಂಬಾಕು ಉತ್ಪನ್ನ ಮಾರಾಟ ಸಾರ್ವಜನಿಕ ಪ್ರದೇಶದಲ್ಲಿ ನಿಷೇಧಿಸಲಾಗಿದೆ. 2003ರಲ್ಲಿ ಜಾರಿಗೆ ಬಂದ ತಂಬಾಕು ನಿಷೇಧ ಕಾಯ್ದೆ ಅನ್ವಯ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆಗೆ ದಂಡ ಮತ್ತು ಶಿಕ್ಷೆ ವಿಧಿಸುವ ಅವಕಾಶಗಳಿವೆ. ಶಾಲಾ ಕಾಲೇಜು ವ್ಯಾಪ್ತಿಯ 100 ಮೀಟರ್‌ ಅಂತರದಲ್ಲಿ ಮಾದಕ ವಸ್ತುಗಳು, ತಂಬಾಕು ಉತ್ಪನ್ನ ಸಿಗದಂತೆ ನೋಡಿಕೊಳ್ಳಬೇಕು ಎಂದರು.

Advertisement

ಕೆಲವು ಕಾಲೇಜುಗಳಲ್ಲಿ ರ್ಯಾಗಿಂಗ್‌ ಪಿಡುಗು ಇಂದಿಗೂ ಜೀವಂತವಾಗಿದ್ದು, ಈ ಬಗ್ಗೆ ವಿದ್ಯಾರ್ಥಿ ಸಮೂಹ ಎಚ್ಚರಿಕೆ ವಹಿಸಬೇಕು. ರ್ಯಾಗಿಂಗ್‌ ಕಂಡುಬಂದರೆ ದೂರು ನೀಡಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶಗಳಿವೆ. ಕಾನೂನು ಏನೇ ಇರಲಿ ಓದುವ ಅವಧಿಯಲ್ಲಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್‌, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್‌.ದೇವರಾಜು, ಪ್ರಾಧ್ಯಾಪಕ ಎಲ್‌.ಪಿ.ರಾಜು, ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ.ಎಂ.ಕೊಟ್ರೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next