Advertisement
ಹಿರಿಯರ ಮಾತು: ಮಾನವ ಜನ್ಮ ದೊಡ್ಡದು, ಅದು ಹಾನಿ ಮಾಡಲು ಬೇಡಿ ಹುಚುಪ್ಪಗಳಿರಾ ಎಂದು ಪುರಂದರ ದಾಸರು ಬಹು ಶತಮಾನಗಳ ಹಿಂದೆಯೇ ಹೇಳಿದ್ದಾರೆ. ಆದರೆ, ಇಂದಿನ ಯುವಜನತೆ ಇದರ ಆಂತರ್ಯವನ್ನು ಅರ್ಥ ಮಾಡಿಕೊಂಡಂತಿಲ್ಲ. ತನ್ನ ಸ್ವಂತಿಕೆ ಮತ್ತು ಅನುಕೂಲಕ್ಕೆ ಅನುಗುಣವಾಗಿ ಈ ವಾಕ್ಯವನ್ನು ಬದಲಿಸಿಕೊಂಡಂತೆ ಭಾಸವಾಗುತ್ತಿದ್ದು, ಹಣವೆಂಬ ಬಿಸಿಲ್ಗುದುರೆಯ ಹಿಂದೆ ಬಿದ್ದಿದ್ದಾನೆ.
Related Articles
Advertisement
ಈ ಅಹಂಕಾರಗಳ ಬೇಗುದಿಯಲ್ಲಿ ನೊಂದು ಬೆಂದ ಎಷ್ಟೋ ತಂದೆ ತಾಯಂದಿರು ಇಂದು ವೃದ್ಧಾಶ್ರಮಕ್ಕೆ ಹೋಗುತ್ತಿದ್ದಾರೆ. ಪಿತ್ರಾರ್ಜಿತ ಆಸ್ತಿಯ ಒಂದು ಪೈಸಾ ಕಡಿಮೆ ಆದರೂ ಸಹಿಸಲಾರದ ವ್ಯಕ್ತಿಗಳು, ಆ ಆಸ್ತಿ ಸಂಪಾದಿಸಿದ ಪಿತೃವಿನ ವಾತ್ಸಲ್ಯವನ್ನೇ ಮರೆತು ನ್ಯಾಯಲಯಕ್ಕೆ ಹೋಗುವ ಎಷ್ಟೋ ನಿದರ್ಶನಗಳಿವೆ.
ಹೀಗೆ, ಆಸ್ತಿ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದ ಯುವಕನೊಬ್ಬನನ್ನು ಏನಯ್ನಾ, “ಜನ್ಮ ಕೊಟ್ಟ ತಂದೆ-ತಾಯಿಯ ಗೌರವವಿಲ್ಲವೇ’ ಎಂದು ಪ್ರಶ್ನಿಸಿದ್ದಕ್ಕೆ ಆತ “ಅವರೇನು ಜನ್ಮ ಕೊಡಬೇಕು ಅಂತ ಏನೂ ಕೊಟ್ಟಿಲ್ಲ ಬಿಡಿ. ಅವರ ತೆವಲಿಗೆ ನಾನು ಸೃಷ್ಟಿಯಾದೆ ಅಷ್ಟೇ’ ಎಂದು ಅವರ ತಂದೆ-ತಾಯಿಯ ಮುಂದೆಯೇ ತೀರಾ ನಿಕೃಷ್ಠನಾಗಿ ಮಾತನಾಡಿದ್ದ.
ಹೆತ್ತವರದ್ದೂ ತಪ್ಪಿದೆ!: ಇನ್ನೂ ಕೆಲವು ಕುಟುಂಬಗಳಲ್ಲಿ ಮಕ್ಕಳನ್ನು ಬೆಳೆಸುವ ರೀತಿಯೇ ವಿಚಿತ್ರವಾಗಿರುತ್ತದೆ. ಬೆಂಗಳೂರಿನಲ್ಲಿ ನನಗೆ ಗೊತ್ತಿರುವ ಕುಟುಂಬವೊಂದಿದೆ. ಅಪ್ಪ-ಅಮ್ಮ ಇಬ್ಬರೂ ತ್ರಿಬಲ್ ಡಿಗ್ರಿ ಪದವೀಧರರು. ದೊಡ್ಡ ಹುದ್ದೆಯಲ್ಲಿದ್ದವರು. ಬಡತನ ಹಿನ್ನೆಲೆಯಲ್ಲಿ ಬಂದ ಅವರು, ಮಕ್ಕಳನ್ನು ಭಾರೀ ಶಿಸ್ತಿನಿಂದ ಬೆಳೆಸಿದರು. ಉದಾಹರಣೆಗೆ, ಅವರ ಕೆಲಸವನ್ನು ಅವರೇ ಮಾಡಿಕೊಳ್ಳಬೇಕು. ಬಟ್ಟೆ ತೊಳೆದು ಕೊಳ್ಳುವುದು, ಊಟ ಬಡಿಸಿಕೊಳ್ಳುವುದು ಮುಂತಾದ ಕೆಲಸಗಳಿಂದ ಹಿಡಿದು ಅವರಿಗೆ ಜ್ವರ ಬಂದರೂ ಅಪ್ಪ-ಅಮ್ಮನ ಹತ್ತಿರ ಬರಬಾರದು. ತಾವೇ ಖುದ್ದಾಗಿ ಡಾಕ್ಟರ ಬಳಿಗೆ ಹೋಗಬೇಕು ಎಂಬಂತೆ ಬೆಳೆಸಿದರು. ಸಂಪೂರ್ಣ ಸ್ವಾವಲಂಬಿ ಜೀವನ ರೂಢಿ ಮಾಡಿಸಬೇಕೆಂಬ ಧಾವಂತದಲ್ಲಿ ಅವರು ಮರೆತಿದ್ದು ಒಂದೇ ವಿಚಾರವೆಂದರೆ ಅದು ತಂದೆ-ತಾಯಿಯ ವಾತ್ಸಲ್ಯವನ್ನು ನೀಡುವುದು!
ಸರಿ. ಆ ಮಕ್ಕಳು ದೊಡ್ಡವರಾದರು. ಅಪ್ಪ-ಅಮ್ಮ ಮುದುಕರಾದರು, ಹಾಸಿಗೆ ಹಿಡಿದರು. ಈಗ, ಆ ಮಕ್ಕಳು ತಾವು ಕಲಿತ ಸ್ವಾವಲಂಬಿ ಜೀವನವನ್ನು ಅಪ್ಪ-ಅಮ್ಮನಿಗೆ ಹಿಂದಕ್ಕೆ ಕಲಿಸುತ್ತಿದ್ದಾರೆ! ಅವರ ಅನಾರೋಗ್ಯಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ದುಡ್ಡೊಂದನ್ನು ಬಿಸಾಕುತ್ತೇವೆ ವೈದ್ಯರಲ್ಲಿ ಹೋಗಿ ತೋರಿಸಿಕೊಂಡು ಬನ್ನಿ. ಅಡುಗೆಯವರನ್ನು ಇಟ್ಟಿದ್ದೇವೆ ಏನು ಬೇಕೋ ಮಾಡಿಸಿಕೊಂಡು ತಿನ್ನಿ. ನನ್ನ, ಸಂಸಾರದ ಎಂಜಾಯ್‌ಮೆಂಟ್‌ಗೆ ಅಡ್ಡಿಯಾಗಬೇಡಿ ಎನ್ನುತ್ತಿದ್ದಾರೆ. ಅಪ್ಪ-ಅಮ್ಮನಿಗೆ ತಾವು ಮಾಡಿದ ತಪ್ಪಿನ ಅರಿವು ಈಗ ಆಗುತ್ತಿದೆ!
ಈ ಮೇಲಿನ ಎಲ್ಲಾ ವಿಚಾರಗಳನ್ನು ಅವಲೋಕಿಸಿದಾಗ, ಸಂಸ್ಕಾರ, ಆದರ್ಶ ಮೌಲ್ಯ ಉತ್ತಮ ಯೋಚನೆಗಳು, ರೀತಿ ನೀತಿ, ಸಂಬಂಧಗಳ ಆದ್ಯತೆ, ಅವಶ್ಯತೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸದಿದ್ದರೆ ಎಂಥಾ ಅನಾಹುತವಾಗುತ್ತದೆ ಎಂಬುದಕ್ಕೆ ಇದಕ್ಕಿಂತ ಮತ್ತೂಂದು ಉದಾಹರಣೆ ಬೇಕಿಲ್ಲ. ಇಂಥ ಯುವಜನರೇ ನಾಳೆ ಪತ್ನಿಯು ಸರಿ ಹೊಂದದಿದ್ದರೆ, ಪತಿ ಸರಿ ಹೊಂದದಿದ್ದರೆ ಒಂದು ಕ್ಷುಲ್ಲಕ ಕಾರಣಕ್ಕೂ ಅವಳು ಅಥವಾ ಅವನು ಬೇಡ ಎಂಬ ನಿರ್ಧಾರಕ್ಕೆ ಬಂದುಬಿಡುವುದು. ಹಾಗಾಗಿಯೇ, ಯುವ ಜನರಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ!
ಹಿಂದೊಂದು ಕಾಲವಿತ್ತು. ಶಾಲೆಯಲ್ಲಿ ಶಿಕ್ಷಕರಿಗೆ “ನಮ್ಮ ಮಕ್ಕಳು ತಪ್ಪು ಮಾಡಿದರೆ ಮುಖ ಮುಲಾಜಿಲ್ಲದೆ ನಾಲ್ಕು ಬಿಗಿಯಿರಿ’ ಎಂದು ಹೆತ್ತವರೇ ಬಂದು ಹೇಳುತ್ತಿದ್ದರು. ಅಕ್ಕಪಕ್ಕದ ಮನೆಯವರು ದೂರು ಕೊಟ್ಟರೆ ತಕ್ಕ ಶಾಸ್ತಿ ಮಾಡುತ್ತಿದ್ದರು. ಇದೆಲ್ಲದರ ಹಿಂದೆ ಮಕ್ಕಳು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿ ಮುಂದೆ ಬಾಳುವಂತಾಗಲಿ ಎಂಬ ಆಶಯ ಇರುತ್ತಿತ್ತಷ್ಟೆ. ಇಂದು ಕಾಲ ಬದಲಾಗಿದೆ. ಮಕ್ಕಳನ್ನು ಇಂದು ಶಿಕ್ಷಕರು ದಂಡಿಸಿದರೆ ಅಪ್ಪ-ಅಪ್ಪ ಪೊಲೀಸರಿಗೆ ದೂರು ಕೊಡುತ್ತಾರೆ. ಅಕ್ಕಪಕ್ಕದ ಮನೆಯವರು ಬೈದರೆ ಮಕ್ಕಳದ್ದು ತಪ್ಪಿದ್ದರೂಅವರ ಪರವಾಗಿ ಜಗಳಕ್ಕೆ ನಿಲ್ಲುತ್ತಾರೆ. ಇಂಥ ಕೆಟ್ಟ ಹೆತ್ತವರಿಂದ ಬೆಳೆಯುವ ಮಕ್ಕಳಿಗೆ ಯಾವ ಸಂಬಂಧಗಳ ಬಗ್ಗೆ ತಾನೇ ಬೆಲೆಯಿರುತ್ತದೆ ನೀವೇ ಹೇಳಿ?
ಕಚೇರಿಯಲ್ಲೂ ಬಾಂಧವ್ಯವಿಲ್ಲ!: ಮೇಲಿನದ್ದೆಲ್ಲಾ ಕೌಟುಂಬಿಕ ವಿಚಾರಗಳಾದವು. ಇನ್ನು, ಉದ್ಯೋಗ ಕಾಂಡಕ್ಕೆ ಬರೋಣ. ಅನ್ನ ಕೊಡುವ ತಾಣವಾದ ಉದ್ಯೋಗ ಸ್ಥಳಗಲ್ಲಾದರೂ ಇಂದಿನ ಯುವಜನತೆ ನಯದಿಂದ, ಉತ್ಸಾಹದಿಂದ, ವಿಧೇಯತೆಯಿಂದ ಕೆಲಸ ಮಾಡುತ್ತಿದ್ದಾರೆಯೇ? ಉಹೂಂ. ಅದೂ ಇಲ್ಲ.
ಇನ್ನೂ ಉದ್ಯೋಗಕ್ಕಾಗಿ ಅಲೆದಾಡುತ್ತಿರುವವರದ್ದು ಮತ್ತೂಂದು ವರಸೆ. ಕೆಲಸದ ಸಂದರ್ಶನಕ್ಕೆ ಹೋಗದಿದ್ದರೂ ಅವರಿಗೆ ಅವರು ಕುಳಿತಲ್ಲಿಂದಲೇ ಸಂಬಳದ ಬಗ್ಗೆ ಕರಾರುವಾಕ್ ಮಾಹಿತಿ ಬೇಕು. ತಾವು ಹೋಗಿ ಸೇರಬಯಸುವ ಕಚೇರಿ ಜಾಸ್ತಿ ದೂರ ಇರಬಾರದು. ದೈನಂದಿನ ಸೇವಾವಧಿ, ರಜೆಗಳು, ವಾರದ ಆಫ್ಗಳು, ಇನ್ಸೆಂಟಿವ್‌ಗಳು ಕಾಲಕಾಲಕ್ಕೆ ಸರಿಯಾಗಿ ಸಿಗುವಂತಿರಬೇಕು. ಅಷ್ಟೇ ಅಲ್ಲ, ಇಷ್ಟು ಸಂಬಳ ಸಿಕ್ರೆ ಹೋಗೋದು. ಇಲ್ಲ ಅಂದ್ರೆ ಇಲ್ಲ ಎನ್ನುವಂಥ ಹಠ. ಇಲ್ಲಿ, ಅನುಭವ ಗಳಿಸಿ, ಕೆಲಸ ಕಲಿತು ಅದರ ಆಧಾರದಲ್ಲಿ ಏರಿಕೆ ಕಾಣುವುದೇ ನಿಜವಾದ ಔದ್ಯೋಗಿಕ ಬೆಳವಣಿಗೆ ಎಂಬ ಸತ್ಯ ಅವರಿಗೆ ಅರ್ಥವಾಗುವುದು ಯಾವಾಗ?
ನಾನತ್ವದ ಸಮರ್ಪಕ ವಿಮರ್ಶೆ: ಹಾಗಾದರೆ, ಅಹಂ ಎನ್ನುವುದು ಬೇಡವೇ? ಹೌದು ಬೇಕು. ಆದರೆ, ಅದು ನಮ್ಮ ಆಂತರಿಕ ಬೆಳವಣಿಗೆಗೆ ಪೂರಕವಾಗಿರಬೇಕು. ಅಭಿವೃದ್ಧಿಯ ಹೆಸರಲ್ಲಿ ಮದಗಜದಂತೆ ವರ್ತಿಸಲು ಅಲ್ಲ. ಅರಿಷಡ್ವರ್ಗಗಳ ದಾಸರಾಗಲು ಅಲ್ಲ. ಇದನ್ನೇ, ಆದಿ ಶಂಕರ ಚಾರ್ಯರು, ಸ್ವಾಮಿ ವಿವೇಕಾನಂದರು ಹೇಳಿದ್ದು. ನಾನು ಮುಂದುವರಿಯಬೇಕು. ನಾನು ಸಾಧಿಸಬೇಕು ಎಂಬ ಛಲದಲ್ಲೂ ನಾನತ್ವ ಇದೆ. ನಾನೊಬ್ಬನೇ ಮುಂದುವರಿಯಬೇಕು. ನನ್ನ ಸಮಾನ ಯಾರಿಲ್ಲ ಎಂಬುದರಲ್ಲೂ ನಾನತ್ವ ಇದೆ. ಇದರಲ್ಲಿ ಯಾವ ನಾನತ್ವ ಒಳ್ಳೆಯದು ಎಂಬುದನ್ನು ಇಂದಿನ ಯುವ ಜನತೆಯೇ ಆರಿಸಿಕೊಳ್ಳಬೇಕಿದೆ. ಹಾಗೆ ಆರಿಸಿಕೊಳ್ಳುವ ಪ್ರಜ್ಞೆ ಅವರಿಗಿದೆ. ಆ ಬಗ್ಗೆ ಅವರು ಮನಸ್ಸು ಮಾಡಬೇಕಷ್ಟೆ.
ವೀರಭದ್ರ ಶಾಸ್ತ್ರಿ