Advertisement

ಯುವಕರು ದುಶ್ಚಟಗಳಿಗೆ ದಾಸರಾಗಬೇಡಿ

11:24 AM Jun 27, 2018 | Team Udayavani |

ಬಳ್ಳಾರಿ: ಯುವಕರು ಮಾದಕ ವಸ್ತುಗಳಿಂದ ದೂರವಿರಬೇಕು. ಪಾಲಕ -ಪೋಷಕರು ಸಹ ತಮ್ಮ ಮಕ್ಕಳ ಮೇಲೆ ನಿಗಾ ವಹಿಸಿ ಮತ್ತು ಮಕ್ಕಳು ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ದಾಸರಾಗದಂತೆ ನೋಡಿಕೊಳ್ಳಬೇಕೆಂದು ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಎಸ್‌.ಬಿ.ಹಂದ್ರಾಳ್‌ ಹೇಳಿದರು.

Advertisement

ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ದುರ್ಬಳಕೆ ಹಾಗೂ ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮದ್ಯಪಾನ, ತಂಬಾಕು, ಗಾಂಜಾ ಇತ್ಯಾದಿಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತಹ ವ್ಯಸನದ ವಸ್ತುಗಳು. ಆದರೆ ಇತ್ತೀಚಿನ ದಿನಗಳಲ್ಲಿ ದ್ರಾವಕ ವ್ಯಸನ ವೈಟನರ್‌, ಪೆಟ್ರೋಲ್‌, ಉಗುರಿಗೆ ಹಚ್ಚುವ ಬಣ್ಣವನ್ನು ತೆಗೆಯಲು ಬಳಸುವ ದ್ರವ ಇನ್ನೂ ಮುಂತಾದ ದ್ರಾವಕಗಳನ್ನು ಮಕ್ಕಳು ಹಾಗೂ ಹದಿಹರೆಯದವರು ವ್ಯಸನಕ್ಕಾಗಿ ಬಳಸುತ್ತಿದ್ದಾರೆ.

ಈ ದುಶ್ಚಟ ವಸ್ತುಗಳಿಂದ ಅವರ ದೈಹಿಕ, ಮಾನಸಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಜೀವನ ಕಳೆದುಕೊಳ್ಳುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳ ದಿನನಿತ್ಯದ ಚಟುವಟಿಕೆ, ಆಟ-ಪಾಠಗಳ ಮೇಲೆ ಸೂಕ್ಷ್ಮ ನಿಗಾವಹಿಸಬೇಕು. ಅವರ ವರ್ತನೆಯಲ್ಲಿ ಏನಾದರೂ ಬದಲಾವಣೆ ಕಂಡು ಬಂದಲ್ಲಿ, ಕೂಡಲೇ ಅವರೊಂದಿಗೆ ವಿಶ್ವಾಸದಿಂದ ಮಾತನಾಡಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌ ಮಾತನಾಡಿ, ದುಶ್ಚಟಗಳಿಗೆ ಯುವಕರು ದಾಸರಾಗದೆ ತಾವಿಟ್ಟುಕೊಂಡಿರುವ ಗುರಿ ತಲುಪುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

Advertisement

ಈ ಸಂದರ್ಭದಲ್ಲಿ ಡಿಎಚ್‌ಒ ಡಾ| ಜಿ.ರಮೇಶ್‌ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಎನ್‌.ಬಸರೆಡ್ಡಿ, ಜಿಲ್ಲಾ ಮಾನಸಿಕ ಆರೋಗ್ಯ ಹಾಗೂ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ|ರಾಜಶೇಖರರೆಡ್ಡಿ, ಜಿಲ್ಲಾ ಆರ್‌.ಸಿ.ಎಚ್‌ ಅಧಿಕಾರಿ ಡಾ| ಎಂ.ಎಚ್‌. ರವೀಂದ್ರನಾಥ್‌, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ|ನಿಜಾಮುದ್ದೀನ್‌, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ| ವಿಜಯಲಕ್ಷ್ಮೀ , ಜಿಲ್ಲಾ ಸರ್ವೇಲೆನ್ಸ್‌ ಅಧಿಕಾರಿ ಡಾ| ಅನಿಲ್‌ ಕುಮಾರ್‌, ಮಾನಸಿಕ ತಜ್ಞ ಡಾ| ಸಲೀಮ್‌, ಡಾ| ಸಂತೋಷ್‌, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್‌ದಾಸಪ್ಪನವರ ಹಾಗೂ ಇತರೆ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು ಇದ್ದರು.

ನಂತರ ಜಾಥಾವು ಜಿಲ್ಲಾ ಆಸ್ಪತ್ರೆಯಿಂದ ಪ್ರಾರಂಭವಾಗಿ, ಡಾ|ರಾಜ್‌ ಕುಮಾರ್‌ ರಸ್ತೆ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು. ಜಾಥಾದಲ್ಲಿ ನಗರ ಆರೋಗ್ಯ ಕೇಂದ್ರಗಳ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು, ಮುನ್ಸಿಪಲ್‌ ಕಾಲೇಜಿನ ಎನ್‌ ಎಸ್‌ಎಸ್‌ ವಿದ್ಯಾರ್ಥಿಗಳು, ಪೊಲೀಸ್‌ ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next