ಮೈಸೂರು: ಇಂದಿನ ಯುವಜನತೆ ಅಪಾರ ಜ್ಞಾನ ಮತ್ತು ತಂತ್ರಜ್ಞಾನದ ಅರಿವನ್ನು ಹೊಂದಿದ್ದು, ದೇಶದ ಸೌಂದರ್ಯವನ್ನು ಹೆಚ್ಚಿಸುವ ಜತೆಗೆ ಬಲಿಷ್ಠ ಭಾರತದ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ತುಮಕೂರು ವಿಶ್ವದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಹೇಳಿದರು.
ಮೈಸೂರು ವಿಶ್ವದ್ಯಾನಿಲಯದ ಕಾನೂನು ಅಧ್ಯಯನ ವಿಭಾಗ ಮಾನಸಗಂಗೋತ್ರಿ ಗಣಿತಶಾಸ್ತ್ರ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಆಯೋಜಿಸಿದ್ದ “ಮಾಧ್ಯಮ, ಕಾನೂನು ಮತ್ತು ಅಭಿವೃದ್ಧಿ’ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಕೊಡುಗೆ ಅಪಾರ: ಇಂದಿನ ಯುವ ಪೀಳಿಗೆ “ಯೂಸ್ ಲೆಸ್ ಅಲ್ಲ, ಯೂಸ್ಡ್ ಲೆಸ್’ ಆಗಿದ್ದಾರೆ. ಯುವಜನತೆ ಅಪಾರ ಜ್ಞಾನ, ತಂತ್ರಜ್ಞಾನದ ಅರಿವು ಹೊಂದಿದ್ದಾರೆ. ಇದು ಭಾರತದ ಸೌಂದರ್ಯವನ್ನು ಹೆಚ್ಚಿಸುವ ಜತೆಗೆ ಬಲಿಷ್ಠ ಭಾರತದ ನಿರ್ಮಾಣಕ್ಕೆ ಸಹಕಾರಿಯಾಗಿವೆ. ಪ್ರತಿಯೊಂದು ಕ್ಷೇತ್ರದಲ್ಲೂ ಇಂದು ಇಡೀ ಜಗತ್ತಿಗೆ ಭಾರತದವರ ಕೊಡುಗೆಯೇ ಹೆಚ್ಚಾಗಿದೆ ಎಂಬುದು ಗಮನಾರ್ಹ ವಿಷಯ ಎಂದು ಹೇಳಿದರು.
ಬದಲಾವಣೆ: ಜವಾಬ್ದಾರಿಯುತ ಸಮಾಜ ಬದಲಾವಣೆಯ ಫಲಿತಾಂಶವನ್ನೂ ನಿರೀಕ್ಷಿಸುತ್ತದೆ. ಆದರೆ ಸಮಾಜದ ಬದಲಾವಣೆ ಹಾಗೂ ಅಭಿವೃದ್ಧಿಯಲ್ಲಿ ಮಾಧ್ಯಮ ಯಾವ ರೀತಿಯ ಪಾತ್ರ ವಹಿಸುತ್ತದೆ ಎಂಬುದನ್ನು ಸಮಾಜ ನಿರೀಕ್ಷಿಸುತ್ತದೆ. ಹೀಗಾಗಿ ಸಮಾಜದಲ್ಲಿ ವೈಯುಕ್ತಿಕ ಅಭಿಪ್ರಾಯಕ್ಕಿಂತ ಜನಾಭಿಪ್ರಾಯವೂ ಮುಖ್ಯವಾಗುತ್ತದೆ.
ಸಕಾರಾತ್ಮಕ ವ್ಯಕ್ತಿತ್ವ ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣವಾಗುತ್ತದೆ. ಮಾಧ್ಯಮಗಳು ಅಭಿವೃದ್ಧಿಯ ಸಂದರ್ಭ ತಲೆದೋರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಬೇಕು. ಆಗ ಮಾತ್ರ ಗುರುತರವಾದ ವ್ಯಕ್ತಿತ್ವವನ್ನು ಗುರುತಿಸಲು ಸಾಧ್ಯವಾಗಲಿದೆ. ಜತೆಗೆ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯೂ ಆಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್, ಕಾನೂನು ವಿಭಾಗದ ನಿರ್ದೇಶಕ ಡಾ.ರಮೇಶ್, ವಿಭಾಗದ ಡೀನ್ ಪ್ರೊ.ಸಿ.ಬಸವರಾಜು ಇನ್ನಿತರರು ಹಾಜರಿದ್ದರು.