Advertisement

ಬದುಕ ಬಾಗಿಲ ತೆರೆದ ಎಟಿಎಸ್‌

12:30 AM Feb 11, 2019 | Team Udayavani |

ಮುಂಬೈ: ಎರಡು ವರ್ಷಗಳ ಹಿಂದೆ ಕೊಂಚ ಯಾಮಾರಿದ್ದರೆ, ಐಸಿಸ್‌ ಭಯೋತ್ಪಾದಕ ಸಂಘಟನೆಯ ಕಬಂಧ ಬಾಹುಗಳಲ್ಲಿ ಸಿಲುಕಿ ನಲುಗಿ ಹೋಗಬೇಕಿತ್ತು ಈ ಯುವಕನ ಬಾಳು. ಆದರೆ, ಈಗ ಅದೇ ಹುಡುಗ ಮಹಾರಾಷ್ಟ್ರ ಬೀಡ್‌ ಜಿಲ್ಲೆಯಲ್ಲಿ ಸ್ವಂತ ಉದ್ಯಮ ಸ್ಥಾಪಿಸಿ ಸಂತೃಪ್ತ ಜೀವನ ನಡೆಸುತ್ತಿದ್ದಾನೆ. ಇದು ಒಬ್ಬ ಯುವಕನ ಕತೆಯಲ್ಲ; ಮಹಾರಾಷ್ಟ್ರದಲ್ಲಿ ದಾರಿ ತಪ್ಪಿದ್ದ ಇಂಥ ನೂರಾರು ಯುವಕರು ಈಗ ಹೊಸ ಬದುಕು ಕಂಡುಕೊಂಡಿದ್ದಾರೆ.ಇದೆಲ್ಲವೂ ಮಹಾರಾಷ್ಟ್ರ ಉಗ್ರ ನಿಗ್ರಹ ದಳ(ಎಟಿಎಸ್‌)ದ ಸತತ ಪ್ರಯತ್ನದ ಫ‌ಲ.

Advertisement

35 ವರ್ಷದ ಜಮೀಲ್‌ ಅನ್ಸಾರಿ (ಹೆಸರು ಬದಲಿಸಲಾಗಿದೆ) 2016ರಲ್ಲಿ ಉದ್ಯೋಗ ಕಳೆದುಕೊಂಡ ಬಳಿಕ, ಹೆಚ್ಚಿನ ಸಮಯವನ್ನು ಆನ್‌ಲೈನ್‌ನಲ್ಲಿ ಕಳೆಯುತ್ತಿದ್ದರು. ಅಲ್ಲಿ ಐಸಿಸ್‌ ಪರ ಮೃದುಧೋರಣೆ ಹೊಂದಿದವರ ಸಂಪರ್ಕ ಹೊಂದುವ ಮೂಲಕ ಅನ್ಸಾರಿ ಕೂಡ ತೀವ್ರಗಾಮಿಯಾಗಿ ಬದಲಾಗತೊಡಗಿದರು. ಇವರ ಆನ್‌ಲೈನ್‌ ಚಟುವಟಿಕೆ ಮೇಲೆ ನಿಗಾ ಇಟ್ಟಿದ್ದ ಎಟಿಎಸ್‌ಗೆ, ಅನ್ಸಾರಿ ಐಸಿಸ್‌ನ ದಾಳಕ್ಕೆ ಬಲಿಯಾಗುತ್ತಿದ್ದಾರೆ ಎಂಬ ಶಂಕೆ ಮೂಡಿತು. ಕೂಡಲೇ ಆತನನ್ನು ಸಂಪರ್ಕಿಸಿ, ಆಪ್ತ ಸಮಾಲೋಚನೆ ನೀಡಿದರು. ಹೀಗಾಗಿ, ಸಾವಿರಾರು ಕಿಲೋ ಮೀಟರ್‌ ದೂರದ ಇರಾಕ್‌ನಲ್ಲಿ ಐಸಿಸ್‌ ಎಂಬ ರಕ್ತಪಿಪಾಸುಗಳ ಸಮೂಹಕ್ಕೆ ಸೇರಿ, ಕುಟುಂಬಕ್ಕೂ, ದೇಶಕ್ಕೂ ಕುಖ್ಯಾತಿ ತರುವ ಹಂತದಲ್ಲಿದ್ದ ಯುವಕ ಈಗ ಮೊಬೈಲ್‌ ಫೋನ್‌ ರಿಪೇರಿ ಮಾಡುತ್ತಾ, ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.

ನಿರುದ್ಯೋಗವೇ ಪ್ರಮುಖ ಕಾರಣ: ನಿರುದ್ಯೋಗಿಗಳಾಗಿರುವ, ಉದ್ಯೋಗ ಕಳೆದುಕೊಂಡು ಆನ್‌ಲೈನ್‌ನಲ್ಲಿ ಜಾಲಾಡುತ್ತಿರುವವರೇ ಉಗ್ರರ ಟಾರ್ಗೆಟ್ ಆಗಿರುತ್ತಾರೆ. ಇಂಥವರನ್ನು ಆನ್‌ಲೈನ್‌ ಮೂಲಕ ತೀವ್ರಗಾಮಿಗಳಾಗಿ ಪರಿವರ್ತಿಸಿ, ತನ್ನ ಟ್ರ್ಯಾಪ್‌ಗೆ ಬೀಳಿಸುವ ತಂತ್ರ ಐಸಿಸ್‌ನದ್ದು.

ಕಂಡುಕೊಂಡ ಪರಿಹಾರವೇನು?: ಐಸಿಸ್‌ ಪ್ರಭಾವಕ್ಕೊಳಗಾದ ಯುವಕರನ್ನು ಮತ್ತೆ ಸಹಜ ಜೀವನಕ್ಕೆ ಕರೆತರುವುದು ಸವಾಲಿನ ಕೆಲಸವೇ ಆಗಿತ್ತು. ಧೃತಿಗೆಡದ ಅಧಿಕಾರಿಗಳು, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಡಿ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಗಳನ್ನು ಸಂಪರ್ಕಿಸಿ, ಈ ಯುವಕರಿಗೆ ಉದ್ಯೋಗದ ತರಬೇತಿ ನೀಡಿದರು. 2 ವರ್ಷಗಳಲ್ಲಿ 400 ಯುವಕರನ್ನು ಪತ್ತೆಹಚ್ಚಿ, ಉದ್ಯೋಗ ತರಬೇತಿ ನೀಡಲಾಗಿದೆ ಎನ್ನುತ್ತಾರೆ ಎಟಿಎಸ್‌ ಮುಖ್ಯಸ್ಥ ಅತುಲ್‌ಚಂದ್ರ ಕುಲಕರ್ಣಿ.

ಬ್ಯಾಂಕ್‌ ಜತೆ ಮಾತುಕತೆ
ಎಟಿಎಸ್‌ ಅಧಿಕಾರಿಗಳೇ ಸಿಂಡಿಕೇಟ್ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್ ಮಹಾರಾಷ್ಟ್ರದ ಜೊತೆಗೆ ಮಾತುಕತೆ ನಡೆಸಿ, ಇಂಥ ಯುವಕರಿಗೆ ಸಾಲ ಸೌಲಭ್ಯ ಒದಗಿಸುವಂತೆ ಕೇಳಿಕೊಂಡಿದೆ. ಅದಕ್ಕೆ ಬ್ಯಾಂಕುಗಳು ಒಪ್ಪಿದ್ದು, ತರಬೇತಿ ಪಡೆದು ಸಿದ್ಧರಾದ ಯುವಕರಿಗೆ ಸಾಲ ನೀಡಲು ಮುಂದೆ ಬಂದಿವೆ. ಈಗಾಗಲೇ 270 ಯುವಕರಿಗೆ ಮೊಬೈಲ್‌ ಫೋನ್‌ ರಿಪೇರಿ ತರಬೇತಿ ನೀಡಲಾಗಿದೆ. ಇನ್ನೊಂದು ತಂಡವು ಎಲೆಕ್ಟ್ರಿಕ್‌ ವೈರ್‌ ಫಿಟ್ಟಿಂಗ್‌ ತರಬೇತಿ ಪಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next