Advertisement
ಯುವಕ ಪ್ರಶಾಂತ್ ಪೂಜಾರಿಯವರು ಉತ್ತರಕ್ರಿಯೆ, ವೈಕುಂಠ ಸಮಾರಾಧನೆಗೆ ಕಾಗೆ ಬೇಕಿದ್ದರೆ ಸಂಪರ್ಕಿಸಿ ಎಂದು ಫೇಸ್ ಬುಕ್ ನಲ್ಲಿ ಹಾಕಿದ್ದು ವೈರಲ್ ಆಗಿತ್ತು. ಇದು ಬಹುಚರ್ಚೆಗೆ ಕಾರಣವಾಗಿತ್ತು. ಸುದ್ದಿ ಹರಿದಾಡುತ್ತಿದ್ದಂತೆ ಮಂಗಳೂರು – ಉಡುಪಿಯ ಪ್ರಾಣಿ ದಯಾ ಸಂಘ, ಪಕ್ಷಿ ಸಲಹಾ ಸಮಿತಿಗಳು ಅರಣ್ಯ ಇಲಾಖೆಗೆ ದೂರು ನೀಡಿದ್ದವು. ಅದರಂತೆ ಉಡುಪಿ ರೇಂಜ್ ಆಫೀಸರ್ ಕ್ಲಿಫರ್ಡ್ ಲೋಬೋ ಅವರ ಸೂಚನೆ ಮೇರೆಗೆ ಶನಿವಾರ ಬೆಳಗ್ಗೆ ಪ್ರಶಾಂತ್ ಮನೆಗೆ ಅರಣ್ಯ ಇಲಾಖೆ ಸಿಬಂದಿ ಆಗಮಿಸಿ ಕಾಗೆ ವಶಕ್ಕೆ ಪಡೆದಿದ್ದಾರೆ. ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಪಿಲಾರು ಖಾನ ಕಾಡಲ್ಲಿ ಬಿಟ್ಟಿದ್ದಾರೆ.
ಮನೆ ಸಮೀಪ ತೆಂಗಿನ ಮರದಿಂದ ಮೂರು ಕಾಗೆ ಮರಿಗಳು ಬಿದ್ದಿದ್ದು ಅವುಗಳನ್ನು ಪ್ರಶಾಂತ್ ಸಾಕಿದ್ದರು. ಎರಡು ಸತ್ತು ಹೋಗಿದ್ದು, ಒಂದು ಬದುಕಿತ್ತು. ಮೊದಲಿಂದಲೂ ಪ್ರಾಣಿ ಪ್ರಿಯರಾಗಿದ್ದರಿಂದ ಕಾಗೆಯನ್ನು ಪ್ರೀತಿಯಿಂದ ಸಾಕಿದ್ದರು. ಉತ್ತರಕ್ರಿಯೆಯೊಂದಕ್ಕೆ ತೆರಳಿದ್ದಾಗ ಜನ ಕಾಗೆಗೆ ಕಾದು ಕುಳಿತು ಸುಸ್ತಾಗಿದ್ದನ್ನು ಕಂಡ ಅವರು ತಾವು ಸಾಕಿದ ಕಾಗೆಯನ್ನು ಜನ ಬಯಸಿದಲ್ಲಿ ಕಾರ್ಯಕ್ರಮಕ್ಕೆ ಕೊಡಬಹುದು ಎಂದುಕೊಂಡಿದ್ದರಂತೆ. ಅಪರಕ್ರಿಯೆ ಅನಂತರ ಬಡಿಸಿದ ಅನ್ನ ಕಾಗೆ ಮುಟ್ಟಿದರೆ ಸದ್ಗತಿ ಸಿಗುತ್ತದೆ ಎಂಬ ನಂಬಿಕೆಯಿಂದ ನಾನು ಸಾಕಿದ್ದ ಕಾಗೆ ಇಂತಹ ಸಂದರ್ಭ ಬಳಸಬಹುದು ಎಂದು ಆಲೋಚಿಸಿದ್ದೆ. ವ್ಯವಹಾರಕ್ಕೆ ಬಳಸುವ ಉದ್ದೇಶ ಇರಲಿಲ್ಲ. ಕಾಗೆ ಅಗತ್ಯವಿದ್ದವರು ಸಂಪರ್ಕಿಸಿ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದು, ಅದನ್ನು ನೋಡಿದವರು ಅರಣ್ಯ ಇಲಾಖೆಗೆ ದೂರು ನೀಡಿದ್ದು ಅವರು ಕೊಂಡೊಯ್ದಿದ್ದಾರೆ.
– ಪ್ರಶಾಂತ್ ಪೂಜಾರಿ, ಕೊಂಬಗುಡ್ಡೆ, ಕಾಪು
ರೇಂಜ್ ಆಫೀಸರ್ ಸೂಚನೆ ಮೇರೆಗೆ ಪ್ರಶಾಂತ್ ಮನೆಗೆ ತೆರಳಿದಾಗ ಕಾಗೆ ಗೂಡಿನಲ್ಲಿರುವುದು ಪತ್ತೆಯಾಗಿತ್ತು. ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ಕಾಡಿಗೆ ಬಿಡಲಾಗಿದೆ. ಕಾಗೆ ಸಾಕುವುದು ತಪ್ಪು ಎಂದು ತಿಳಿದಿರಲಿಲ್ಲ ಎಂದು ಮನೆಯವರು ಹೇಳಿದ್ದಾರೆ.
– ಮಂಜುನಾಥ್, ಅರಣ್ಯ ರಕ್ಷಕ, ಕಾಪು