Advertisement
ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ನೂತನ ಸೇತುವೆಯಿಂದ ಏಕಾಏಕಿ ಯುವಕನೋರ್ವ ನದಿಗೆ ಹಾರಿದ್ದನ್ನು ಮಹಿಳೆಯೋರ್ವರು ನೋಡಿದ್ದಾರೆ ಎಂದು ಮೂಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ತತ್‌ಕ್ಷಣ ಪೊಲೀಸರು ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಹುಡುಕಾಡಿದರು ಆನಂತರ ಮಂಗಳೂರಿನಿಂದ ಬಂದ ಅಗ್ನಿಶಾಮಕ ದಳದವರು ಸಹ ತಮ್ಮ ಬೋಟ್‌ನಲ್ಲಿ ನಂದಿನಿ ನದಿಯ ಸುತ್ತಮುತ್ತ ಹಾಗೂ ಬೀಚ್‌ನ ವರೆಗೆ ಶೋಧ ಕಾರ್ಯ ನಡೆಸಿದರೂ ಫಲಕಾರಿಯಾಗಲಿಲ್ಲ ಎಂದು ತಿಳಿದು ಬಂದಿದೆ.
ನೀರಿಗೆ ಹಾರಿದವ ಬಿಳಿ ಟೀ ಶರ್ಟ್ ಧರಿಸಿದ್ದ ಸಾಧಾರಣ 25ರ ಹರೆಯದ ಯುವಕ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆತ ಸೇತುವೆಯ ಬಳಿಯಲ್ಲಿಯೇ ಬೆಳಗ್ಗೆಯಿಂದ ಕುಳಿತಿದ್ದು ಅನಂತರ ಹಾರಿದ್ದಾನೆ. ಎರಡು ಬಾರಿ ಮುಳುಗೆ ದ್ದಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕುತೂಹಲಿಗರು ಸೇರಿದ್ದರು. ಸಂಜೆ ವರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಸ್ಪಷ್ಟವಿಲ್ಲ…
ಈ ಬಗ್ಗೆ ಮೂಲ್ಕಿ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ಉದಯವಾಣಿ ಯೊಂದಿಗೆ ಮಾತನಾಡಿ, ಬೆಳಗ್ಗೆ ಸುಮಾರು 10 ಗಂಟೆಗೆ ಪೊಲೀಸ್ ಠಾಣೆಗೆ ಅಪರಿಚಿತ ಯುವಕ ನದಿಗೆ ಹಾರಿದ್ದಾನೆ ಎಂದು ದೂರವಾಣಿ ಕರೆಯೊಂದು ಬಂದಿತ್ತು. ಮಹಿಳೆಯೊಬ್ಬರು ನೋಡಿದ್ದಾರೆ ಎಂದು ಹೇಳಲಾಗಿತ್ತು. ಸ್ಥಳಕ್ಕೆ ಧಾವಿಸಿದಾಗ ಜನರು ಸಹ ಸೇರಿದ್ದರಾದರೂ ಮಹಿಳೆ ಯಾರು ಎಂದು ಗೊತ್ತಾಗಿಲ್ಲ. ದೂರವಾಣಿ ಕರೆ ಮಾಡಿದವರು ನೇರವಾಗಿ ನೋಡಿಲ್ಲ. ಬದಲಾಗಿ ಘಟನೆಯನ್ನು ಕೇಳಿ ಕರೆ ಮಾಡಿದ್ದರು. ಈ ಬಗ್ಗೆ ಸಂಜೆಯವರೆಗೆ ಸಾಕಷ್ಟು ಹುಡುಕಾಟ ನಡೆಸಿದ್ದೇವೆ. ಹಾರಿದ ಯುವಕನ ಬಗ್ಗೆ ಯಾವುದೇ ಪೂರಕವಾದ ಮಾಹಿತಿ ಸಿಕ್ಕಿಲ್ಲ. ಆದರೂ ಸ್ಥಳೀಯರಿಗೆ ಮಾಹಿತಿ ನೀಡಲು ತಿಳಿಸಿದ್ದೇವೆ ಎಂದರು.