ಬೆಂಗಳೂರು: ಅಪಾರ್ಟ್‌ಮೆಂಟ್‌ವೊಂದರ 13ನೇ ಮಹಡಿಯಿಂದ ಜಿಗಿದು ಪಿಯುಸಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯಲಕ್ಷ್ಮೀ (17) ಮೃತ ಯುವತಿ. ಜ್ಞಾನಜ್ಯೋತಿನಗರ ನಿವಾಸಿಯಾಗಿರುವ ವಿಜಯಲಕ್ಷ್ಮೀ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಪಿಯುಸಿ ಓದುತ್ತಿದ್ದಳು.
ಸೆ.20ರಂದು ಸಂಜೆ 6.15ರ ಸುಮಾರಿಗೆ ನಾಯಂಡಹಳ್ಳಿ ರಸ್ತೆಯ ಬಿಎಚ್‌ಇಎಲ್ ಬಳಿಯ ಅಪಾರ್ಟ್‌ಮೆಂಟ್‌ವೊಂದಕ್ಕೆ ಹೋಗಿದ್ದಾಳೆ. ಗೇಟ್ ಬಳಿಯೇ ಸೆಕ್ಯೂರಿಟಿ ಗಾರ್ಡ್ ತಡೆದು ವಿಚಾರಿಸಿದ್ದಾರೆ. ಆಗ 13 ಮಹಡಿಗೆ ಹೋಗಬೇಕೆಂದು ಹೇಳಿದ್ದಾಳೆ. ಹೀಗಾಗಿ 13ನೇ ಮಹಡಿಯಲ್ಲಿ ವಾಸವಾಗಿದ್ದವರಿಗೆ ಕರೆ ಮಾಡಿ ವಿಷಯ ತಿಳಿಸಿದ ಸೆಕ್ಯೂರಿಟಿ ಗಾರ್ಡ್‌ಗೆ, ಫ್ಲ್ಯಾಟ್ ನಿವಾಸಿಗಳು ಪರಿಚಯಸ್ಥರು ಇರಬಹುದು ಎಂದು ಭಾವಿಸಿ, ಕಳುಹಿಸಿ ಎಂದಿದ್ದಾರೆ.
ಈ ನೆಪದಲ್ಲಿ 13 ಮಹಡಿಗೆ ಹೋಗಿ ಜಿಗಿದಿದ್ದಾಳೆ. ಆದರೆ, ಮೃತದೇಹ ಕಿರಿದಾದ ಖಾಲಿ ಜಾಗದಲ್ಲಿ ಬಿದ್ದಿದ್ದರಿಂದ ಸೆ.21ರ ಬೆಳಗ್ಗೆವರೆಗೂ ಯಾರು ಗಮನಕ್ಕೆ ಬಂದಿಲ್ಲ. ಆ ನಂತರ ಸ್ಥಳೀಯರು ವಾಯುವಿಹಾರ ಮಾಡುವಾಗ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾನಸಿಕ ಖಿನ್ನತೆ ಕಾರಣ?: ಕೌಟುಂಬಿಕ ಕಾರಣಕ್ಕೆ ವಿಜಯಲಕ್ಷ್ಮೀ ತಂದೆ-ತಾಯಿ ದೂರವಾಗಿದ್ದು, ಪ್ರತ್ಯೇಕವಾಗಿ ವಾಸವಾಗಿದ್ದಾರೆ. ತಾಯಿ ಜತೆ ವಿಜಯಲಕ್ಷ್ಮೀ ವಾಸವಾಗಿದ್ದಳು. ಮನೆ ಮತ್ತು ಕಾಲೇಜಿನಲ್ಲಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಸೆ.19ರಂದು ಬೆಳಗ್ಗೆ ಕಾಲೇಜಿಗೆ ಹೋದ ವಿಜಯಲಕ್ಷ್ಮೀ ಮನೆಗೆ ಬಂದಿರಲಿಲ್ಲ. ಹೀಗಾಗಿ ಆಕೆಯ ತಾಯಿ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಹುಡುಕಾಟ ಆರಂಭಿಸಿದ್ದರು. ಆದರೆ, ವಿಜಯಲಕ್ಷ್ಮೀ ಮೊಬೈಲ್ ಬಳಸುತ್ತಿರಲಿಲ್ಲ. ಹೀಗಾಗಿ ಆಕೆಯ ಸುಳಿವು ಸಿಕ್ಕಿರಲಿಲ್ಲ. ಮಾನಸಿಕ ಖನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದರು.
ಆತ್ಮಹತ್ಯೆಗೂ ಮುನ್ನಧರ್ಮಸ್ಥಳ ಪ್ರವಾಸ: ಸ್ಥಳಕ್ಕೆ ಬಂದ ಪೊಲೀಸರು ವಿಜಯಲಕ್ಷ್ಮೀ ಬ್ಯಾಗ್‌ನಲ್ಲಿದ್ದ ಗುರುತಿನ ಚೀಟಿ ಪರಿಶೀಲಿಸಿದಾಗ ಆಕೆಯ ಹೆಸರು ಗೊತ್ತಾಗಿದೆ. ಬ್ಯಾಗ್‌ನಲ್ಲಿದ್ದ ಮತ್ತೂಂದು ಬಳಿ ಚೀಟಿಯಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಧರ್ಮಸ್ಥಳದ ಹರೀಶ್ ಎಂಬುವರು ಕರೆ ಸ್ವೀಕರಿಸಿದ್ದಾರೆ. ಸೆ.20ರಂದು ಮುಂಜಾನೆ 4 ಗಂಟೆ ಸುಮಾರಿಗೆ ವಿಜಯಲಕ್ಷ್ಮೀ ಒಬ್ಬರೇ ಧರ್ಮಸ್ಥಳದ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಅದನ್ನು ಗಮನಿಸಿದ ಹರೀಶ್ ಎಂಬುವರು ತಮ್ಮ ಸಹೋದರಿಯ ಜತೆ ವಿಚಾರಿಸಿ ಆಕೆಗೆ ಬೆಂಗಳೂರಿನ ಬಸ್ ಹತ್ತಿಸಿ ಕಳುಹಿಸಿದ್ದಾರೆ. ಅಲ್ಲದೆ, ಏನಾದರೂ ಸಮಸ್ಯೆಯಾದರೆ ಕರೆ ಮಾಡುವಂತೆ ತಮ್ಮ ಮೊಬೈಲ್ ನಂಬರ್ ಅನ್ನು ಚೀಟಿಯಲ್ಲಿ ಬರೆದು ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.