ಸಿರುಗುಪ್ಪ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚುತ್ತಿರುವ ಕೃಷಿ ಕಾರ್ಮಿಕರ ಅಭಾವ, ವ್ಯವಸಾಯದಲ್ಲಿ ಅತೀ ಹೆಚ್ಚಿನ ಖರ್ಚು ಹಾಗೂ ಸಕಾಲಕ್ಕೆ ಸಿಗದೆ ಇರುವ ಎತ್ತುಗಳ ಕೊರತೆಯಿಂದ ರೈತರು ಸಾಮಾನ್ಯವಾಗಿ ಯಂತ್ರೋಪಕರಣಗಳಿಗೆ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಈ ಹಿನ್ನೆಲೆಯಲ್ಲಿ ಬಿತ್ತನೆಗೆ, ಅಂತರ ಬೇಸಾಯಕ್ಕೆ ಮತ್ತು ಸಿಂಪಡಣೆಗಾಗಿ ಸಿದ್ಧಪಡಿಸಿರುವ ಅನೇಕ ಯಂತ್ರಗಳನ್ನು ಕೃಷಿ ಇಲಾಖೆಯ ಕೃಷಿ ಯಂತ್ರಧಾರೆ ಕೇಂದ್ರಗಳ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯಂತ್ರಧಾರೆಗಳನ್ನು ತೆರೆದಿದೆ.
ಆದರೂ ಸಕಾಲಕ್ಕೆ ಅಲ್ಲಿಯೂ ಎಲ್ಲ ರೈತರಿಗೆ ವಿವಿಧ ಯಂತ್ರಗಳು ಸಿಗುವುದು ಕಷ್ಟ. ಇದನ್ನು ಅರಿತ ಸಿರುಗುಪ್ಪದ ಮೆಕಾನಿಕಲ್ ಇಂಜಿನಿಯರ್ ಯುನೂಸ್ ತಮ್ಮ ವರ್ಕಶಾಪ್‌ನಲ್ಲಿ ನೂತನ ಕೃಷಿ ಯಂತ್ರೋಪಕರಣ ತಯಾರಿಸಿದ್ದಾರೆ. ಇಂಜಿನಿಯರ ಯುನೂಸ್ ಕೇರಳದ ವಿಜ್ಞಾನಿಗಳೊಂದಿಗೆ ಕೈಜೋಡಿಸಿ ಟ್ರಾಕ್ಟರ್ ಚಾಲಿತ ಔಷ ಧಿ ಸಿಂಪಡಣಾಯಂತ್ರವನ್ನು ಅಭಿವೃದ್ಧಿಪಡಿಸಿದ್ದು ಕೃಷಿ ಇಲಾಖೆ ಮತ್ತು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಸಮ್ಮುಖದಲ್ಲಿ ಯಂತ್ರಗಳ ಪ್ರಾತ್ಯಕ್ಷಿಕೆಯನ್ನು ರೈತರ ಹೊಲದಲ್ಲಿ ಮಾಡಲಾಯಿತು.
ಟ್ರಾಕ್ಟರ್ ಚಾಲಿತ ಔಷಧ ಸಿಂಪಡಣಾ ಯಂತ್ರವನ್ನು ಟ್ರಾಕ್ಟರ್‌ನ ಹಿಂಭಾಗದಲ್ಲಿ ಜೋಡೆತ್ತುಗಳಿಗೆ ಬಳಸಲಾಗುವ ನೊಗದ ರೀತಿಯಲ್ಲಿ ಕಬ್ಬಿಣದ ಪೈಪ್ ಅಳಪಡಿಸಿ ಅದಕ್ಕೆ 500ಲೀ ಸಾಮರ್ಥ್ಯದ ಕಬ್ಬಿಣದ ಟ್ಯಾಂಕರ್ ಮತ್ತು ಮುಂದೆ 200 ಲೀ ಸಾ.ಕಬ್ಬಿಣದ ಟ್ಯಾಂಕರ್‌ನ್ನು ಅಳವಡಿಸಲಾಗಿದೆ. ಬೆಳೆಗಳ ಸಾಲಿಗೆ ತಕ್ಕಂತೆ ಅಳವಡಿಸಿಕೊಳ್ಳಲು ಅವಕಾಶವಿದ್ದು, 10 ಸಾಲುಗಳಲ್ಲಿ ಏಕಕಾಲಕ್ಕೆ ಔಷಧಿ ಸಿಂಪಡಣೆಯನ್ನು ಮಾಡಬಹುದಾಗಿದೆ. ಒಂದು ದಿನಕ್ಕೆ ಸುಮಾರು ನೀರಿನ ಸೌಲಭ್ಯಗನುಗುಣವಾಗಿ 40-50 ಎಕರೆಯಷ್ಟು ಔಷಧ ಸಿಂಪಡಣೆ ಮಾಡಬಹುದು. ಒಂದು ಎಕರೆ ಔಷಧಿ ಸಿಂಪಡಣೆಗೆ ಕೇವಲ ರೂ. 100ರಿಂದ 150 ಖರ್ಚು ತಗುಲುತ್ತದೆ.
ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ನಾನು ತಯಾರಿಸಿರುವ ಕೃಷಿ ಯಂತ್ರದಿಂದ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳಿಗೆ ಔಷಧಿ ಸಿಂಪಡಣೆ ಮಾಡಲು ಅನುಕೂಲವಾಗುತ್ತದೆ.
ಯುನೂಸ್, ಯುವ ಇಂಜಿನಿಯರ್
ರೈತರು ಆಧುನಿಕ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ. ಯಂತ್ರೋಪಕರಣಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಅನಿವಾರ್ಯವಾಗಿದ್ದು, ರೈತರು ಕೃಷಿ ಕ್ಷೇತ್ರದಲ್ಲಿ ಯಂತೋಪಕರಣಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಕೆಲಸ ಪಡೆಯಲು ಸಾಧ್ಯವಾಗುತ್ತದೆ. ಯುವ ಇಂಜಿನಿಯರ್ ತಯಾರಿಸಿರುವ ಟ್ರಾಕ್ಟರ್ ಚಾಲಿತ ಔಷಧ ಸಿಂಪಡಣಾಯಂತ್ರದ ಬಳಕೆಯಿಂದ ಕಡಿಮೆ ಖರ್ಚಿನಲ್ಲಿ ರೈತರು ತಮ್ಮ ಕೃಷಿ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
ಡಾ| ಎಂ.ಎ. ಬಸವಣ್ಣೆಪ್ಪ, ಕೃಷಿ ವಿಜ್ಞಾನಿ
ರೈತರು ಕೃಷಿಯಲ್ಲಿ ಎತ್ತುಗಳನ್ನು ಬಳಸಿ ಕೃಷಿ ಮಾಡುವುದು ವಿರಳವಾಗಿದ್ದು, ಕೃಷಿಯಲ್ಲಿ ಆಧುನಿಕ ಯಂತ್ರಗಳ ಬಳಕೆ ಹೆಚ್ಚಾಗಿದ್ದು, ಯುವ ಇಂಜಿನಿಯರ್ ಯುನೂಸ್ ತಯಾರಿಸಿದ ಕೃಷಿ ಯಂತ್ರಗಳ ಬಳಕೆಯಿಂದ ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಕೆಲಸವನ್ನು ಮಾಡಬಹುದಾಗಿದೆ.
ನಜೀರ್ ಅಹಮ್ಮದ್,
ಸಹಾಯಕ ಕೃಷಿ ನಿರ್ದೇಶಕ
ಆರ್.ಬಸವರೆಡ್ಡಿ ಕರೂರು