Advertisement

ಯುವ ಗಾಯಕಿಯರ ಗಾನಾರ್ಚನೆ

05:49 PM Jul 04, 2019 | mahesh |

ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಯುವ ಪ್ರತಿಭೆಗಳಾದ ಸುರೇಖಾ ಪರ್ಕಳ ಹಾಗೂ ಹೇಮಲತಾ ಇವರಿಂದ ಗಾನಾರ್ಚನೆ ನಡೆಯಿತು. ಹೆಚ್ಚಿನೆಲ್ಲಾ ಹಾಡುಗಳು ಯುಗಳ ಕಂಠದಿಂದ ಹೊಮ್ಮಿದರೂ ಏಕಕಂಠದಲ್ಲಿ ಪ್ರಸ್ತುತವಾದಂತೆನಿಸಿ ಗಾಯಕಿಯರೀರ್ವರೂ ಒಬ್ಬರಿಗೊಬ್ಬರು ಪೂರಕವಾಗಿ ಸಾಥ್‌ ನೀಡಿದರು. ಮೈಸೂರು ಜಯಚಾಮರಾಜೇಂದ್ರ ಒಡೆಯರ ಕೃತಿ ಶ್ರೀ ಜಾಲಂಧರಮಾಶ್ರಯಮಾಮ್‌ ಅನ್ನು ಗಂಭೀರಕಾನಡ ರಾಗ ಆದಿತಾಳದಲ್ಲಿ ಜೊತೆಯಾಗಿ ಪ್ರಸ್ತುತ ಪಡಿಸಿದರು. ಮುಂದೆ ಷಣ್ಮುಖಪ್ರಿಯ ರಾಗದಲ್ಲಿ ಮಧ್ಯಮ ಕಾಲದ ಸಿದ್ಧಿವಿನಾಯಕಂ ಕೃತಿಯನ್ನು ಲಘು ಆಲಾಪನೆಯೊಂದಿಗೆ ಆದಿತಾಳದಲ್ಲಿ ಸಾದರಪಡಿಸಿದರು. ಮುಂದೆ ಆನಂದ ಭೈರವಿ ರಾಗ ತ್ರಿಶ್ರತ್ರಿಪುಟ ತಾಳದಲ್ಲಿ ಕಮಲಾಂಬಾ ಸಂರಕ್ಷತುಃ ನವಾವರಣ ಕೃತಿ ಸರಾಗವಾಗಿ ಹರಿದುಬಂತು. ಶಾಸ್ತ್ರೀಯ ಸಂಗೀತದಿಂದ ದಾಸರ ಪದಗಳತ್ತ ಹೊರಳಿದ ಗಾಯಕಿಯರು ವಾದಿರಾಜರ ಎಂಥಾ ಪಾವನ ಪಾದವೋ ಎನ್ನುವ ಕೃಷ್ಣಾವತಾರ ಕುರಿತಾದ ದೇವರ ನಾಮವನ್ನು ಆದಿತಾಳದಲ್ಲಿ ಅರ್ಪಿಸಿದರು. ಹರಿಯು ಸರ್ವೋತ್ತಮನೆಂದು ಸಾರುವ ವೆಂಕಟೇಶ್ವರನ ಕುರಿತಾದ ಅಣ್ಣಮಾಚಾರ್ಯರ ಮೇರುಕೃತಿ ಬ್ರಹ್ಮ ಮುಕ್ಕಟೆ ಭೂಪಾಳಿರಾಗ ಹಾಗೂ ಏಕತಾಳದಲ್ಲಿ ಮೂಡಿ ಬಂತು. ಪೂರ್ಣಿಮಾ ಜನಾರ್ದನ್‌ ರಚಿಸಿದ ಕೊಡವೂರು ಶಂಕರನಾರಾಯಣ ಮೇಲಿನ ದರ್ಬಾರ್‌ಕಾನಡ ರಾಗದಲ್ಲಿನ ಸ್ತುತಿ ಹಾಡನ್ನು ಹಾಗೂ ಅಗ್ರಹಾರ ಭಾಸ್ಕರ ಭಟ್‌ ಇವರ ಕೃತಿ ಕೊಡವೂರು ಕ್ಷೇತ್ರದಿ ಎನ್ನುವ ಕೃತಿಯನ್ನು ಬೃಂದಾವನ ಸಾರಂಗ ರಾಗ ಖಂಡಛಾಪು ತಾಳದಲ್ಲಿ ಹಾಡುವ ಮೂಲಕ ಗಾಯಕಿಯರೀರ್ವರೂ ಶಂಕರನಾರಾಯಣನಿಗೆ ಗಾನಾರ್ಚನೆ ಮಾಡಿದರು.

Advertisement

ಕಮಲೇಶ ವಿಠಲದಾಸರ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕುರಿತಾದ ಶರಣರ ಸುರಭೋಜ ಗುರುರಾಜ ದೇವರ ನಾಮವನ್ನು ಅಭೋಗಿ ರಾಗದಲ್ಲಿ ಆದಿತಾಳದಲ್ಲಿ ಮನಮುಟ್ಟುವಂತೆ ಹಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ವೀಣಾಕುಪ್ಪಯ್ಯರ್‌ ರಚನೆ ಎಂತೋ ಪ್ರೇಮ ತೋನೆಯನ್ನು ಭಾವಪೂರ್ಣವಾಗಿ ಹಾಡಿ ತಮ್ಮ ಕಲಾಫೌÅಡಿಮೆಯನ್ನು ಸಾದರಪಡಿಸಿದರು. ಚಾರುಕೇಶಿ ರಾಗ ಆದಿತಾಳದಲ್ಲಿ ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ ಹಾಡಿನಿಂದ ಶ್ರೀ ಹರಿಯ ಸೇವೆ ಮಾಡುವ ಸೌಭಾಗ್ಯ ವರ್ಣಿಸಿದರು. ಫ‌ರಸ್‌ರಾಗ ಆದಿತಾಳದಲ್ಲಿ ತನೋಂತನತದಿರನಾ ತಿಲ್ಲಾನ ಭಾವಪೂರ್ಣವಾಗಿ ನಿರೂಪಿಸಿ ಸಂಗೀತ ಕಛೇರಿಯ ಘನತೆಯನ್ನು ಎತ್ತಿ ಹಿಡಿದರು. ಹಂಸಧ್ವನಿರಾಗದಲ್ಲಿ ದೇವರನಾಮ ನಾರಾಯಣ ಎನ್ನಿರೋ ಎನ್ನುವ ಹಾಡಿನ ಮೂಲಕ ಹರಿಸ್ಮರಣೆಯ ಔನ್ನತ್ಯವನ್ನು ಸಾರಿದರು. ಸಹೋದರಿಯರೀರ್ವರು ಹಾಡುತ್ತಿರವರೇನೋ ಎನ್ನುವ ಭ್ರಮೆ ಹುಟ್ಟಿಸಿದ ಗಾಯಕಿಯರಿಗೆ ಪಕ್ಕವಾದ್ಯದಲ್ಲಿ ಅನಂತರಾಮ ರಾವ್‌ (ಮೃಂದಗ) ಹಾಗೂ ವೈಭವ್‌ ಪೈ (ವಯಲಿನ್‌) ಉತ್ತಮ ಸಹಕಾರವಿತ್ತರು.

ಜನನಿ ಭಾಸ್ಕರ ಕೊಡವೂರು

Advertisement

Udayavani is now on Telegram. Click here to join our channel and stay updated with the latest news.

Next