Advertisement

ಶಂಕಿತ ಡೆಂಗ್ಯೂ ಜ್ವರ:ಯುವಕ ಬಲಿ

09:57 AM Aug 02, 2019 | keerthan |

ಮಂಗಳೂರು: ಶಂಕಿತ ಡೆಂಗ್ಯೂ ಜ್ವರಕ್ಕೆ ಮಂಗಳೂರಿನಲ್ಲಿ ಮತ್ತೂಬ್ಬ ಯುವಕ ಬಲಿಯಾಗಿದ್ದು, ಸಾವಿನ ಸಂಖ್ಯೆ ಆರಕ್ಕೇರಿದೆ. ಈ ಪೈಕಿ ಮೂರು ಪ್ರಕರಣಗಳನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ.

Advertisement

ನಗರದ ಬೋಳಾರ ಮುಳಿಹಿತ್ಲು ನಿವಾಸಿ ಕಾರ್ತಿಕ್‌ ಶೆಟ್ಟಿ (24) ಮೃತ ಯುವಕ. ಜ್ವರದ ಹಿನ್ನೆಲೆಯಲ್ಲಿ ಜು. 24ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಸಾವನ್ನಪ್ಪಿದ್ದಾರೆ.

ಕಾರ್ತಿಕ್‌ ಸಾವಿಗೆ ಡೆಂಗ್ಯೂ ಜ್ವರ ಕಾರಣವೇ ಎಂಬ ಬಗ್ಗೆ ತಿಳಿದು ಬಂದಿಲ್ಲ. ವರದಿ ಬಂದ ಬಳಿಕ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ ಸ್ಪಷ್ಟಪಡಿಸಿದ್ದಾರೆ.

ಕಾರ್ತಿಕ್‌ ಅವರು ಮುಳಿಹಿತ್ಲು ಟೈಲರಿರೋಡ್‌ ನಿವಾಸಿಯಾಗಿದ್ದು, ಬಂದರಿನ ದ.ಕ- ಉಡುಪಿ ಮೀನು ಮಾರಾಟ ಸಹಕಾರಿ ಸಂಘದ ಡೀಸೆಲ್‌ ಬಂಕ್‌ನಲ್ಲಿ ಉದ್ಯೋಗಿಯಾಗಿದ್ದರು. ಇವರ ಸಹೋದರನೂ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿ, ಬಳಿಕ ಗುಣಮುಖರಾಗಿದ್ದರು.

ಉತ್ತಮ ಕ್ರಿಕೆಟ್‌ ಆಟಗಾರರಾಗಿದ್ದು, ಮುಳಿಹಿತ್ಲು ಶ್ರೀದೇವಿ ಕ್ರಿಕೆಟರ್ ತಂಡದ ಸದಸ್ಯರಾಗಿದ್ದರು. ಕಾರ್ತಿಕ್‌ ಸಹಿತ ಶಂಕಿತ ಡೆಂಗ್ಯೂ ಜ್ವರದಿಂದಾಗಿ ತಿಂಗಳ ಅವಧಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಖಾಸಗಿ ಸುದ್ದಿವಾಹಿನಿ ಕ್ಯಾಮರಾಮನ್‌ ನಾಗೇಶ್‌ ಪಡು, ವಿದ್ಯಾರ್ಥಿನಿ ಶ್ರದ್ಧಾ, ಕಡಬದ ವೀಣಾ ನಾಯಕ್‌ ಅವರ ಸಾವಿಗೆ ಡೆಂಗ್ಯೂ ಜ್ವರ ಕಾರಣ ಎಂಬುದು ದೃಢಪಟ್ಟಿದ್ದು, ಬಾಲಕ ಕೃಷ್‌ ಮತ್ತು ಕಡಬದ ಶ್ರೀಧರ ಗೌಡ ಅವರ ಸಾವಿಗೆ ಡೆಂಗ್ಯೂ ಕಾರಣವೇ ಎಂಬುದನ್ನು ಆರೋಗ್ಯ ಇಲಾಖೆ ದೃಢಪಡಿಸಿಲ್ಲ.

Advertisement

170 ಮಂದಿಗೆ ಚಿಕಿತ್ಸೆ
ಜಿಲ್ಲೆಯಲ್ಲಿ ಈವರೆಗೆ 581 ಮಂದಿ ಚಿಕಿತ್ಸೆ ಪಡೆದಿದ್ದು, 380 ಮಂದಿ ಗುಣಮುಖರಾಗಿದ್ದಾರೆ. 170 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನೀರು ನಿಲ್ಲದಂತೆ ಎಚ್ಚರ ವಹಿಸಿ ನಾಗರಿಕರು ಮನೆಯ ಒಳಗೆ ಎಲ್ಲಿಯೂ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ನಿಂತ ನೀರಿನಲ್ಲಿ ಸೊಳ್ಳೆ ಸಂತಾನಾಭಿವೃದ್ಧಿಯಾಗುತ್ತದೆ. ಅಂತಹ ತಾಣಗಳನ್ನು ತೆರವುಗೊಳಿಸಿ ಎಂದು ಶಾಸಕ ವೇದವ್ಯಾಸ ಕಾಮತ್‌ ಮನವಿ ಮಾಡಿದ್ದಾರೆ.

ಶಾಸಕ ಕಾಮತ್‌ ಭೇಟಿ
ಕಾರ್ತಿಕ್‌ ಅವರ ಮನೆಗೆ ಶಾಸಕ ವೇದವ್ಯಾಸ ಕಾಮತ್‌ ಗುರುವಾರ ಬೆಳಗ್ಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಕರೆದು, ಪರಿಣಾಮಕಾರಿಯಾಗಿ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಸೂಚಿಸಿದರು.

ಡೆಂಗ್ಯೂ ನಿಯಂತ್ರಣ ಮತ್ತು ಲಾರ್ವಾ ಉತ್ಪತ್ತಿ ಯಾಗದಂತೆ ಜಾಗೃತಿ ಮೂಡಿಸುವ ಸಲುವಾಗಿ ಮಂಗಳೂರು ನಗರ ದಕ್ಷಿಣದಲ್ಲಿರುವ ಪ್ರತಿ
ವಾರ್ಡ್‌ನಲ್ಲಿ 50 ಜನರ ತಂಡಗಳನ್ನು ರಚಿಸಿದ್ದು, ಇದೇ ರವಿವಾರದಿಂದ ಕೆಲಸ ಪ್ರಾರಂಭಿಸಲಿವೆ. ವಾರ್ಡ್‌ಗಳ ಪ್ರತಿ ಮನೆಗಳಿಗೆ ತೆರಳಿ ಅಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದು ಶಾಸಕರು ಈ ವೇಳೆ ತಿಳಿಸಿದರು.

ಸಾಮಾನ್ಯ ಜ್ವರಕ್ಕೂ ಆಸ್ಪತ್ರೆಗೆ ದಾಖಲು!
ಡೆಂಗ್ಯೂ ಭಯದಿಂದಾಗಿ ಸಾಮಾನ್ಯ ಜ್ವರಕ್ಕೂ ಜನರು ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವುದು ಸಮಸ್ಯೆಯಾಗಿದೆ. ಇದರಿಂದ ದಾಖಲಾಗಲು ಅರ್ಹರಾದವರಿಗೆ ಸ್ಥಳಾವಕಾಶದ ಕೊರತೆ ಎದುರಾಗಿದೆ. ರಕ್ತಸ್ರಾವ, ತಲೆಸುತ್ತು ಕಾಣಿಸಿಕೊಂಡಲ್ಲಿ ಅಥವಾ ಇತರ ಕಾಯಿಲೆಗಳಿದ್ದು ಜ್ವರ ಬಂದವರು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು. ಈ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಅವಶ್ಯ ಎಂದು ಡಾ| ನವೀನ್‌ಕುಮಾರ್‌ ಮನವಿ ಮಾಡಿದ್ದಾರೆ.

5 ಸಾವಿರ ರೂ. ದಂಡ ವಸೂಲಿ
ಜಿಲ್ಲೆಯಲ್ಲಿ ವಿವಿಧ ಜ್ವರದ ಹಿನ್ನೆಲೆಯಲ್ಲಿ ಗುರುವಾರ 49 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಸೊಳ್ಳೆ ಉತ್ಪತ್ತಿಗೆ ಪೂರಕ ತಾಣಗಳ ಮೇಲೆ ಪಾಲಿಕೆ ಕಾರ್ಯಾಚರಣೆ ಮುಂದುವರಿದಿದ್ದು, ಗುರುವಾರ 5 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next