Advertisement
ದಕ್ಕದೇ ಹೋದ ಚೆಂಡು ಹೂವೆ,ನೀನು ನನ್ನನ್ನು ತಿರಸ್ಕರಿಸಿದ್ದು ಯಾಕೆ? ಅದಕ್ಕೂ ಮೊದಲು ಹಠಕ್ಕೆ ಬಿದ್ದವಳಂತೆ ಪ್ರೀತಿಸಿದ್ದು ಯಾಕೆ? ಆರಂಭದಲ್ಲಿ ನನ್ನ ಒಂದೊಂದೇ ಗೆಲುವಿಗೆ ಕಾರಣಳಾದವಳು, ಕಡೆಗೆ ಅಷ್ಟೆತ್ತರದಿಂದ ಪ್ರಪಾತಕ್ಕೆ ನೂಕಿಬಿಟ್ಟೆಯಲ್ಲ, ಯಾಕೆ? ಕಳೆದ ಎಂಟು ವರ್ಷಗಳಿಂದ ಈ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿಕೊಳ್ತಾನೇ ಇದ್ದೀನಿ. ಉಹುಂ, ಉತ್ತರ ಸಿಗುತ್ತಿಲ್ಲ. “ಛೆ, ಛೆ, ನನ್ನ ಹುಡುಗಿ ಕೆಟ್ಟವಳಲ್ಲ. ಅವಳಿಗೆ ದುರಾಸೆಯಿಲ್ಲ. ನನ್ಮೆಲೆ ಅಪನಂಬಿಕೆಯಿಲ್ಲ. ಯಾವುದೋ ಒತ್ತಡಕ್ಕೆ ಸಿಲುಕಿ ಆಕೆ ಹೀಗೆಲ್ಲ ಮಾಡಿಬಿಟ್ಟಿದ್ದಾಳೆ’.. ಇಂಥ ಮಾತುಗಳನ್ನು ನನಗೆ ನಾನೇ ಹೇಳಿಕೊಳ್ತೀನಿ. ಆದ್ರೂ ಸಮಾಧಾನ ಸಿಗ್ತಾ ಇಲ್ಲ!
Related Articles
Advertisement
ಈ ಬದುಕಿಂದ ನೀನು ಎದ್ದು ಹೋದೆಯಲ್ಲ ಚಿತ್ರಾ, ಅವತ್ತು ದುಃಖವಾದದ್ದು ನಿಜ. ಜೋರಾಗಿ ಅಳಬೇಕು ಅನಿಸಿದ್ದು ನಿಜ. ಸತ್ತು ಹೋಗಬೇಕು ಅನಿಸಿದ್ದೂ ನಿಜ. ಆದ್ರೆ ಡಿಯರ್, ಒಂದೇ ದಿನದ ನಂತರ ಆ ನಿರ್ಧಾರ ಬದಲಾಗಿತ್ತು. “ಇಲ್ಲ, ನಾನು ಸೋಲಬಾರದು. ನೋವಲ್ಲಿ ನರಳಬಾರದು. ಅವಳ ನೆನಪಲ್ಲೇ ಮೀಯಬಾರದು. ಅವಳೆದುರೇ ಎದ್ದು ನಿಲ್ಲಬೇಕು. ಅವಳಿಗಿಂತ ಚೆಂದದ ಹುಡುಗಿಯ ಹೆಗಲು ಮುಟ್ಟಬೇಕು. ಅವಳೊಂದಿಗೇ ಬದುಕು ಕಟ್ಟಬೇಕು…’ ನಾನು ಇಂಥ ಕನಸುಗಳ ಮೈದಾನದಲ್ಲಿ ನಡೆಯುತ್ತಿದ್ದಾಗಲೇ ಆ ಹುಡುಗಿ ಕಾಣಿಸಿಬಿಟ್ಟಳು.
ಸುಳ್ಳೇಕೆ? ಈಕೆ ನಿನಗಿಂತ ಬೆಳ್ಳಗಿದ್ದಳು, ಕುಳ್ಳಗಿದ್ದಳು ಮತ್ತು ತೆಳ್ಳಗಿದ್ದಳು. ಮೊದಲ ನೋಟಕ್ಕೇ ಇಷ್ಟವಾದಳು. ಮೂರನೇ ದಿನ ಮತ್ತೆ ಸಿಕ್ಕಾಗ ನಾನು ಹೇಳಿಯೇ ಬಿಟ್ಟೆ – “ಹುಡುಗೀ, ಐ ಲವ್ ಯೂ’. ಆಕೆ ಮಾತಾಡಲಿಲ್ಲ, ಮೋಹಕವಾಗಿ ನಕ್ಕಳು. ಗುಲಾಬಿ ಬಣ್ಣದ ಚೂಡಿದಾರ್‌ನಲ್ಲಿ ಆಕೆಯೇ ಒಂದು ಗುಲಾಬಿಯಂತೆ ಕಂಡಳು. ನನ್ನ ಕಥೆ ಹೇಳಿಕೊಂಡೆ. ಮೌನವಾಗಿ ಕೇಳಿಸಿಕೊಂಡಳು. ಸಂಕಟ ತೋಡಿಕೊಂಡೆ, ಸಮಾಧಾನ ಹೇಳಿದಳು. ನಿನ್ನ ನೆನಪಾಗಿ ಕಣ್ಣೀರಾದೆ, ಕಂಬನಿ ಒರೆಸಿ ಕೈ ಹಿಡಿದು ನಡೆದಳು!
ಈಗ, ನಾವು ನೆಮ್ಮದಿಯಿಂದಿದೀವಿ. ನಿಮ್ಮಷ್ಟು ಶ್ರೀಮಂತರಾಗಿಲ್ಲ. ತುಂಬ ಬಡತನದಲ್ಲೂ ಬದುಕ್ತಾ ಇಲ್ಲ. ನೀನೇ ನೋಡಿದೆಯಲ್ಲ ಮೊನ್ನೆ? ನಾನೀಗ ಸ್ವಲ್ಪ ದಪ್ಪಗಾಗಿದ್ದೇನೆ. ಒಂದಿಷ್ಟು ತಲೆಗೂದಲು ಉದುರಿವೆ. ಗಡ್ಡದಲ್ಲಿ ನಾಕಾರು ಬಿಳಿಕೂದಲು ನುಸುಳಿವೆ.
ಆಗೊಮ್ಮೆ, ಈಗೊಮ್ಮೆ ಮದುವೆಗಳಲ್ಲೋ, ಹುಟ್ಟು ಹಬ್ಬದ ಪಾರ್ಟಿಯಲ್ಲೋ, ಯಾರದೋ ಎಂಗೇಜ್‌ಮೆಂಟ್‌ನಲ್ಲೋ ನೀನು ಕಾಣಿಸಿಕೊಳ್ತೀಯ. ಮೊದಲಿನಂತೆಯೇ ಮಾತಾಡಿಸ್ತೀಯ ನಿಜ. ಆದ್ರೆ, ನಿನ್ನೆದುರು ನಿಂತಾಕ್ಷಣ ನಂಗೆ ಹಳೆಯ ಪ್ರೀತಿಯೇ ನೆನಪಾಗಿ ಬಿಡುತ್ತೆ. ಇನ್ನೊಂದ್ಸಲ “ಐ ಲವ್ ಯೂ’ ಅಂದುಬಿಡಬೇಕು ಅಂತ ಆಸೆಯಾಗಿಬಿಡುತ್ತೆ !
ಹೌದು ಚಿತ್ರಾ, ಇದೇ ಸತ್ಯ. ಎಷ್ಟೋ ದೂರದಲ್ಲಿರುವ ನಿನ್ನುಸಿರು ಈಗಲೂ ನನ್ನೆದೆಗೆ ಮೆತ್ತಿಕೊಂಡಿದೆ. ನಾವು ಹಿಂದೆಂದೋ ಆಡಿದ ಮಾತು ಮಂದಗಾಳಿಯಂತೆ ಕೇಳುತ್ತಲೇ ಇದೆ. ನಟ್ಟಿರುಳು ಮಳೆಯ ಸದ್ದಿನಂತೆ ಆ ಕ್ಷಣಗಳ ನೆನಪು ಬರುತ್ತಲೇ ಇದೆ. ನಾನು, ಆ ನೆನಪುಗಳ ಮಧ್ಯೆಯೇ ಸುಖೀಸುತ್ತಾ ನಿದ್ದೆ ಬಾರದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ಆದರೂ ಸುಖವಾಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದೇನೆ!
ಇದು, ಈವಾಗಿನ ನನ್ನ ಪಾಡು. ಹೇಳು, ನೀನು ಹೇಗಿದ್ದೀ?ಇಂತಿ ನಿನ್ನ, ಹಳೆಯ ಗೆಳೆಯ