ಹೈದರಾಬಾದ್: ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೂಫಾನ್ (ಚಂಡಮಾರುತ) ನಂಥ ಬೆಂಬಲ ವ್ಯಕ್ತವಾಗಲಿದೆ. ಬಿಆರ್‌ಎಸ್ ಹೀನಾಯ ಸೋಲನ್ನು ಅನುಭವಿಸಲಿದೆ ಎಂದು ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ತೆಲಂಗಾಣದ ಐದು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್‌ಶೋ, ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯ ಭ್ರಷ್ಟಾಚಾರವೇ ತುಂಬಿಹೋಗಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಚಂಡಮಾರುತದಂಥ ಬೆಂಬಲ ವ್ಯಕ್ತವಾಗಲಿದೆ. ಕೆ.ಚಂದ್ರಶೇಖರ ರಾವ್ ಅವರ ಪಕ್ಷ ಮರೆಯಾಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಂಚಾಯತ್ ರಾಜ್‌ನಲ್ಲಿ ಒಬಿಸಿ ಮೀಸಲನ್ನು ಶೇ.23ರಿಂದ ಶೇ.42ಕ್ಕೆ ಏರಿಕೆ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.
ಕೇಂದ್ರಕ್ಕೆ ಖರ್ಗೆ ಸವಾಲು:
ಕೇಂದ್ರ ಸರ್ಕಾರಕ್ಕೆ ಧೈರ್ಯವಿದ್ದರೆ ಪರಿಶಿಷ್ಟ ಜಾತಿಗಳನ್ನು ವರ್ಗೀಕರಣಗೊಳಿಸುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿ ಕ್ರಮ ಕೈಗೊಳ್ಳಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ. ಹತ್ತು ವರ್ಷಗಳಿಂದ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ. ಇಂಥ ಕ್ರಮ ಕೈಗೊಳ್ಳುವುದು ಬೇಡ ಎಂದು ತಡೆದಿರಲಿಲ್ಲ. ಹೀಗಿದ್ದರೂ, ಎಸ್‌ಸಿಗಳ ವರ್ಗೀಕರಣದ ಬಗ್ಗೆ ಮೌನ ವಹಿಸಿದ್ದೀರಿ. ಸಾಧ್ಯವಿದ್ದರೆ ಈ ಬಗ್ಗೆ ಸುಗ್ರೀವಾಜ್ಞೆ ಮೂಲಕ ಅದನ್ನು ಜಾರಿ ಮಾಡಿ ಎಂದು ಸವಾಲು ಹಾಕಿದ್ದಾರೆ.
ಪರಿಶಿಷ್ಟ ಜಾತಿಗಳ (ಎಸ್‌ಸಿ) ವರ್ಗೀಕರಣಕ್ಕೆ ಸಂಬಂಧಿಸಿದಂತೆ ಮಾದಿಗರ ಸಬಲೀಕರಣಕ್ಕಾಗಿ ಸಮಿತಿ ರಚಿಸುವ ಕುರಿತು ಇತ್ತೀಚೆಗೆ ಪ್ರಧಾನಿ ಮೋದಿ ಭರವಸೆ ನೀಡಿದ್ದಕ್ಕೆ ಖರ್ಗೆ ಈ ತಿರುಗೇಟು ನೀಡಿದ್ದಾರೆ.