ಮುಂಬಯಿ: ಆರ್‌ಸಿಬಿಯ ಘಾತಕ ಬೌಲರ್ ಹರ್ಷಲ್ ಪಟೇಲ್ ತೀವ್ರ ದುಃಖದಲ್ಲಿದ್ದಾರೆ. ಕಾರಣ, ಅಕ್ಕ ಅರ್ಚಿತಾ ಪಟೇಲ್ ಅವರ ಅಕಾಲಿಕ ನಿಧನ.
ಆರ್‌ಸಿಬಿ-ಮುಂಬೈ ನಡುವಿನ ಪಂದ್ಯದ ವೇಳೆ ಈ ಆಘಾತಕಾರಿ ಸುದ್ದಿ ಹರ್ಷಲ್‌ಗೆ ಬರಸಿಡಿಲಿನಂತೆ ಬಂದೆರಗಿತು. ಪಂದ್ಯ ಮುಗಿದ ಕೂಡಲೇ ಅವರು ಮನೆಗೆ ತೆರಳಿ ಅಕ್ಕನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಹೀಗಾಗಿ ಚೆನ್ನೈ ವಿರುದ್ಧ ಆಡಲು ಸಾಧ್ಯವಾಗಲಿಲ್ಲ.ವಿಧಿವಿಧಾನ ಪೂರ್ತಿಗೊಳಿಸಿ ಕ್ವಾರಂಟೈನ್‌ಗೆ ಒಳಗಾಗಿ ಅಷ್ಟೇ ಬೇಗ ಆರ್‌ಸಿಬಿ ತಂಡವನ್ನು ಕೂಡಿಕೊಂಡ ಹರ್ಷಲ್ ಪಟೇಲ್ ಡೆಲ್ಲಿ ವಿರುದ್ಧ ಆಡಲಿಳಿದು ಅಚ್ಚರಿ ಮೂಡಿಸಿದ್ದರು.
ಅಕ್ಕನ ನಿಧನ ಹೊಂದಿದ ಕೆಲವೇ ದಿನಗಳಲ್ಲಿ ಮೈದಾನಕ್ಕೆ ಇಳಿಯಲು ಪಟೇಲ್‌ಗೆ ಹೇಗೆ ಸಾಧ್ಯವಾಯಿತು? ಇದು ಎಲ್ಲರಲ್ಲೂ ಕುತೂಹಲ ಮೂಡಿಸಿದ ಪ್ರಶ್ನೆ. ಇದಕ್ಕೆ ಸ್ವತಃ ಹರ್ಷಲ್ ಪಟೇಲ್ ಅವರೇ ಉತ್ತರ ಕೊಟ್ಟಿದ್ದಾರೆ.
ಹೇಗೆಂದರೆ, ಅಗಲಿದ ಅಕ್ಕನಿಗೆ ಬರೆದ ಭಾವುಕ ಸಂದೇಶವೊಂದನ್ನು ರವಾನಿಸುವ ಮೂಲಕ! “ಪ್ರೀತಿಯ ಅಕ್ಕ, ನಮ್ಮ ಜೀವನದ ಅತ್ಯಂತ ಸಂತೋಷದಾಯಕ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ಕೊನೆಯ ಉಸಿರಿನ ತನಕ ನಗುತ್ತಲೇ ಬದುಕಿನ ಅನೇಕ ಕಷ್ಟಕಾರ್ಪಣ್ಯಗಳನ್ನು ಎದುರಿಸಿದಿರಿ. ನಾನು ಆಸ್ಪತ್ರೆಗೆ ಧಾವಿಸಿದಾಗ, ನೀನು ಆಟದ ಬಗ್ಗೆ ಗಮನ ಹರಿಸು… ನನ್ನ ಬಗ್ಗೆ ಚಿಂತಿಸಬೇಡ ಎಂದು ಹೇಳಿದ್ದೀರಿ. ನಿಮ್ಮ ಈ ಮಾತುಗಳೇ ನನಗೆ ಸ್ಫೂರ್ತಿ. ಹೀಗಾಗಿ ನಾನು ಬಹಳ ಬೇಗ ಅಂಗಳಕ್ಕೆ ಇಳಿಯಲು ಸಾಧ್ಯವಾಯಿತು. ನನ್ನ ಜೀವನದ ಪ್ರತಿಯೊಂದು ಕ್ಷಣದಲ್ಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ. ಲವ್ ಯೂ ಸೋ ಮಚ್. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ…’ ಎಂದು ಹರ್ಷಲ್ ಪಟೇಲ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.