ಯಾರೆಂದರೆ ಯಾರೂ ಜೊತೆಯಲ್ಲಿಲ್ಲದ ಹೊತ್ತು ಬಳಿ ಬಂದು “ನಿನ್ನ ಜೊತೆ ನಾನಿರ್ತೀನಿ… ನೀನು ಗೆಲ್ಲಬೇಕು ಭುವನ್’ ಎಂದವಳು ನೀನು. ಬದುಕು ಬಹು ದೊಡ್ಡ ಅಚ್ಚರಿಯನ್ನು ನನ್ನ ಕೈಗಿತ್ತು ಖೀಲ್ಲನೆ ನಕ್ಕಿತ್ತು…. ನಿನ್ನ ಮೇಲೆ ನನಗೆ ಒಂದಿಷ್ಟೂ ಕೋಪ, ದ್ವೇಷ, ಮೋಸ ಮಾಡಿದೆಯೆಂಬ ಭಾವ ಯಾವ ಕ್ಷಣದಲ್ಲೂ ಹುಟ್ಟಲೇ ಇಲ್ಲ. ದೇವತೆ ನೀನು, ಬಡವನ ಬದುಕಿಗೆ ಬಲಗಾಲಿಟ್ಟು ಸ್ವರ್ಗವಾಗಿಸಿದವಳು. ನಿನ್ನ ಸಹಾಯದಿಂದಲೇ ಮೂರು ಜೀವಗಳು ಹೊಸ ಉಸಿರು ಪಡೆದುಕೊಂಡಿವೆ. ಎಲ್ಲಿಯೇ ಇದ್ದರೂ, ನೀನು ಚೆನ್ನಾಗಿರಬೇಕು…!
ಯಾರ ತೆಕ್ಕೆಗೂ ಸಿಗದ ಭಾವಗಳನ್ನು ಬೊಗಸೆ ಕಂಗಳಲ್ಲಿ ತುಂಬಿಕೊಂಡು ಬೆಚ್ಚಗೆ ಕಾಪಿಟ್ಟುಕೊಂಡವಳು. ಲೆಕ್ಕಕ್ಕೇ ಸಿಗದ ಎದೆಯ ನೋವುಗಳನ್ನೆಲ್ಲ ಮುಗುಳ್ನಗೆಯಲ್ಲಿಯೇ ನೇವರಿಸಿ, ಸಾಂತ್ವನದ ಜೀವ ತುಂಬಿದವಳು. ಹೃದಯದ ಪಾಳು ದೇಗುಲದಲ್ಲಿ ಪ್ರೇಮದ ಘಂಟಾನಾದ ಮೊಳಗಿಸಿ, ಒಲವ ಚಿಗುರ ಬಿತ್ತಿ ಬೆಳೆದು ಉಸಿರಾಗಿ ಉಳಿದುಕೊಂಡವಳು. ಸೋತ ಹೆಜ್ಜೆಗಳಿಗೂ ಕುಸಿದು ಕೂರದ ಪಾಠ ಹೇಳಿಕೊಟ್ಟವಳು. ಸೊರಗಿದ ಕಣ್ಣುಗಳಲ್ಲಿ ಕನಸುಗಳ ಕಾಮನಬಿಲ್ಲು ಬರೆದವಳು. ಒಂಟಿ ಬದುಕಿಗೆ ಆಸರೆ ನೀಡಿ ಜೊತೆ ಜೊತೆಯಲ್ಲಿಯೇ ತೋಳ ತಬ್ಬಿ ನೆರಳಾದವಳು.
ಇಂದು ನೀನು ನನ್ನ ಜೊತೆಯಲ್ಲಿಲ್ಲ ಎನ್ನುವ ಒಂದೇ ಒಂದು ನೆಪವೊಡ್ಡಿ ನಿನ್ನ ಮೇಲೆ ಆರೋಪಗಳ ಸುರಿಮಳೆಗರೆಯುವುದು ಪರಮ ಸ್ವಾರ್ಥಿಯೊಬ್ಬನ ದುರಹಂಕಾರವಾದೀತು. ಯಾರೆಂದರೆ ಯಾರೂ ಜೊತೆಯಲ್ಲಿಲ್ಲದ ಹೊತ್ತು ಬಳಿಬಂದು “ನಿನ್ನ ಜೊತೆ ನಾನಿರಿನಿ… ನೀನು ಗೆಲ್ಲಬೇಕು ಭುವನ್’ ಎಂದವಳು ನೀನು. ಬದುಕು ಬಹು ದೊಡ್ಡ ಅಚ್ಚರಿಯನ್ನು
ನನ್ನ ಕೈಗಿತ್ತು ಖೀಲ್ಲನೆ ನಕ್ಕಿತ್ತು. ಮನಸಿಗೆ ಹುಚ್ಚುಗುದುರೆಯ ವೇಗ. ಕಿತ್ತು ತಿನ್ನುವ ಬಡತನ, ಖಾಯಿಲೆ ಬಿದ್ದ ತಾಯಿ, ಬದುಕಿನ ಅರ್ಧದಲ್ಲಿಯೇ ಬಿಟ್ಟೆದ್ದು ನಡೆದ ಅಪ್ಪ, ಹಣವಿಲ್ಲದೆ ಓದನ್ನು ತೊರೆದ ತಂಗಿ, ಊರ ತುದಿಯಲ್ಲಿ ಈಗಲೋ, ಆಗಲೋ ಕಳಚಿ ಬೀಳುವಂತಿರುವ ಪುಟ್ಟ ಗುಡಿಸಲು, ಇಷ್ಟು ನನ್ನ ಆಸ್ತಿ. ಹೇಗಾದರೂ ಮಾಡಿ ಬದುಕಲ್ಲಿ ಗೆಲ್ಲಬೇಕೆಂದು ನಿರ್ಧರಿಸಿ, ಗೊತ್ತಿದ್ದ ಡ್ರೈವಿಂಗ್ ಕೆಲಸದಲ್ಲಿಯೇ ಹೊಟ್ಟೆ ಹೊರೆಯುತ್ತಿದ್ದೆ. ಅಚಾನಕ್ಕಾಗಿ ನಿನ್ನ ಭೇಟಿ, ನೋವುಗಳ ವಿಲೇವಾರಿ, ದುಃಖಕ್ಕೆ ನೀನು ಕಣ್ಣೀರಾದ ಪರಿ, ಸಹಾಯ ಮಾಡುವ ನಿನ್ನ ದೊಡ್ಡ ಮನಸು, ಆತ್ಮಸ್ಥೆçರ್ಯ ತುಂಬುವ ಮಾತು, ಹೀಗೆ… ನೋವುಗಳಿಂದಲೇ ನಾವು ತೀರಾ ಹತ್ತಿರವಾದದ್ದು ನನಗಿಂದಿಗೂ ಸೋಜಿಗ.
ನಿನಗೆ ಪರಿಚಯವಿದ್ದವರ ದೊಡ್ಡ ಕಂಪನಿಯಲ್ಲಿ ಕೆಲಸ ಕೊಡಿಸಿದ್ದೆ. ಅರ್ಧಕ್ಕೆ ನಿಂತ ತಂಗಿಯ ಓದಿಗೆ ಚಾಲನೆ ಕೊಟ್ಟೆ. ತಾಯಿಯ ಆಸ್ಪತ್ರೆಯ ಖರ್ಚು ನೋಡಿಕೊಂಡೆ. ಗುಡಿಸಲಿನಿಂದ ಬಾಡಿಗೆ ಮನೆಗೆ ಬದುಕು ಶಿಫ್ಟ್ ಆಯಿತು. ಎಲ್ಲವೂ ನೀನಿತ್ತ ಭಿಕ್ಷೆ ಪ್ರತೀಕ್ಷಾ. ಎಲ್ಲವೂ ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ನಿನ್ನಾಗಮನದಿಂದ ಬಾಳಿಗೆ ವಸಂತದ ಕಳೆ. ‘ಈ ಬಡವನ ಮೇಲೇಕೆ ಇಷ್ಟೊಂದು ಪ್ರೀತಿ ನಿನಗೆ?’ ಅಂತ ಕೇಳಿದ್ದಕ್ಕೆ ‘ಬಡವರಲ್ಲಿಯೇ ಕಪಟವಿಲ್ಲದ ನಿಜವಾದ ಪ್ರೀತಿ ಸಿಗೋದು. ಹಣ ಎಷ್ಟು ದಿನ ನಮ್ಮ ಬಳಿ ಇರುತ್ತೆ ಭುವನ್? ಒಲ್ಲದೆ ಬದುಕು ಶೂನ್ಯ’ ಎಂದವಳಿಗೆ ಕೊಡಲು ಕಣ್ಣೀರಿನ ವಿನಃ ನನ್ನ ಬಳಿ ಏನೂ ಇರಲಿಲ್ಲ.
ಅದ್ಯಾರ ಕೇಡಿಗಣ್ಣು ಬಿತ್ತೋ ಸುಧಾರಿಸುತ್ತಿದ್ದ ನನ್ನ ಬದುಕಿನ ಮೇಲೆ? ಇದ್ದಕ್ಕಿದ್ದಂತೆ ನೀನು ಕಣ್ಮರೆ. ಹುಡುಕಿ, ಹುಡುಕಿ ಕಣ್ಣುಗಳು ಹತಾಶವಾದವು. ಹುಚ್ಚ…. ಕೋಟ್ಯಾಧೀಶರ ಮಗಳು ಅವಳು. ಹೋಗಿ, ಹೋಗಿ ನಿನ್ನಂಥ ಭಿಕಾರಿಯನ್ನು ಪ್ರೀತಿಸುತ್ತಾಳಾ? ಅವಳಿಗೆ ದೊಡ್ಡ ಶ್ರೀಮಂತನೊಂದಿಗೆ ಮದುವೆ ನಿಶ್ಚಯವಾಗಿದೆ. ಮೋಸ ಹೋದೆ ನೀನು… ಎಂದು ಗೇಲಿ ಮಾಡುವ ಗೆಳೆಯರ ಮಾತುಗಳು ಎದೆಯನ್ನು ಇರಿಯುತ್ತಿದ್ದವು. ಊಹುಂ… ನಿನ್ನ ಮೇಲೆ ನನಗೆ ಒಂದಿಷ್ಟೂ ಕೋಪ, ದ್ವೇಷ, ಮೋಸ ಮಾಡಿದೆಯೆಂಬ ಭಾವ ಯಾವ ಕ್ಷಣದಲ್ಲೂ ಹುಟ್ಟಲೇ ಇಲ್ಲ. ದೇವತೆ ನೀನು, ಬಡವನ ಬದುಕಿಗೆ ಬಲಗಾಲಿಟ್ಟು ಸ್ವರ್ಗವಾಗಿಸಿದವಳು. ನಿನ್ನ ಸಹಾಯದಿಂದಲೇ ಮೂರು ಜೀವಗಳು ಹೊಸ ಉಸಿರು ಪಡೆದುಕೊಂಡಿವೆ. ಎಲ್ಲಿಯೇ ಇದ್ದರೂ, ನೀನು ಚೆನ್ನಾಗಿರಬೇಕು…!
ನಾಗೇಶ್ ಜೆ. ನಾಯಕ