ಹೊಸದಿಲ್ಲಿ : ನೀವು ಮೊದಲೇ ಬುಕ್ ಮಾಡಿದ್ರೆ ನಿಮ್ಮ ಮನೆಗೇ ಪೆಟ್ರೋಲ್, ಡೀಸಿಲ್ ಮತ್ತಿತರ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ವಿಶಿಷ್ಟ ಯೋಜನೆಯೊಂದು ಇದೀಗ ಸರಕಾರದ ಪರಿಶೀಲನೆಯಲ್ಲಿದೆ.ಈ ವಿಷಯದ ಬಗ್ಗೆ ಪೆಟ್ರೋಲಿಯಂ ಸಚಿವಾಲಯ ಟ್ವೀಟ್ ಮಾಡಿದೆ.
ಪೆಟ್ರೋಲ್ ಸ್ಟೇಶನ್‌ಗಳ ಮುಂದೆ ದೀರ್ಘ ಕ್ಯೂ ತಪ್ಪಿಸುವುದಕ್ಕಾಗಿ ತಾನು ಈ ನೂತನ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿರುವುದಾಗಿ ಪೆಟ್ರೋಲಿಯಂ ಸಚಿವಾಲಯ ಹೇಳಿದೆ.
ಅಂದ ಹಾಗೆ ಮುಂದಿನ ಮೇ 1ರಿಂದ ಗ್ರಾಹಕರು ದಿನನಿತ್ಯ ಪರಿಷ್ಕರಣಗೊಳ್ಳುವ ದರದ ಮೇಲೆ ಪೆಟ್ರೋಲ್ ಮತ್ತು ಡೀಸಿಲ್ ಖರೀದಿಸಬೇಕಾಗುತ್ತದೆ. ಹೆಚ್ಚಿನ ಮುಂದುವರಿದ ದೇಶಗಳ ಪೆಟ್ರೋಲಿಯಂ ಮಾರುಕಟ್ಟೆಗಳಲ್ಲಿ ಕಂಡು ಬರುವ ಹಾಗೆ ಭಾರತದಲ್ಲೂ ದಿನವಹಿ ಪೆಟ್ರೋಲ್ ಮತ್ತು ಡೀಸಿಲ್ ದರಗಳು ಅಂತಾರಾಷ್ಟ್ರೀಯ ದರಕ್ಕೆ ಅನುಗುಣವಾಗಿ ಬದಲಾಗುತ್ತಲೇ ಇರುತ್ತವೆ.
ಆರಂಭದಲ್ಲಿ ಪ್ರಾಯೋಗಿಕವಾಗಿ ಈ ದಿನವಹಿ ದರ ಪರಿಷ್ಕರಣೆಯು ಪುದುಚೇರಿ ಮತ್ತು ವಿಶಾಖಪಟ್ಟಣ (ದಕ್ಷಿಣ), ಉದಯಪುರ (ಪಶ್ಚಿಮ) , ಜಮ್‌ಶೇದ್‌ಪುರ (ಪೂರ್ವ) ಮತ್ತು ಚಂಡೀಗಢ (ಉತ್ತರ) ದಲ್ಲಿ ಜಾರಿಗೆ ಬರಲಿದೆ.
ರಾಜ್ಯಗಳು ಪ್ರಕೃತ ಪೆಟ್ರೋಲ್ ಮತ್ತು ಡೀಸಿಲ್ ದರಗಳನ್ನು ಪ್ರತೀ ತಿಂಗಳ 1 ಮತ್ತು 16ರಂದು ಪರಿಷ್ಕರಿಸುತ್ತಿವೆ. ಇದು ಅಂತಾರಾಷ್ಟ್ರೀಯ ದರದ ಸರಾಸರಿ ನೆಲೆಯಲ್ಲಿ ಆಗಿರುತ್ತದೆ.