ಅಡಹಳ್ಳಿ: ಲಕ್ಷ್ಮಣ ಸವದಿ ಅವರನ್ನು ಸೋಲಿಸಿ ನೀವು ದೊಡ್ಡ ತಪ್ಪು ಮಾಡಿದಿರಿ. ಅಂದು ಗೆಲ್ಲಿಸಿದ್ದರೆ ಇಂದು ನೀವು ಅವರನ್ನು ನನಗಿಂತ ಬಹುದೊಡ್ಡ ಹುದ್ದೆಯಲ್ಲಿ ನೋಡಬಹುದಿತ್ತು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಸಮೀಪದ ಕೊಟ್ಟಲಗಿ ಗ್ರಾಮದಲ್ಲಿ ಅಥಣಿಯಿಂದ ಕೊಟ್ಟಲಗಿವರೆಗೆ 35 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ 27 ಕಿ.ಮೀ ಡಾಂಬರೀಕರಣ ಕಾಮಗಾರಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿ, ಗೆಳೆತನಕ್ಕೆ ಹೇಳಿ ಮಾಡಿದ ವ್ಯಕ್ತಿ ಅಂದರೆ ಲಕ್ಷ್ಮಣ ಸವದಿ. ನಮ್ಮದೊಂದು ಗೆಳೆಯರ ಬಳಗ ಇದೆ. ಅದರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಇದ್ದಾರೆ. ಲಕ್ಷ್ಮಣ ಸವದಿ ಮತ್ತು ಮುಖ್ಯಮಂತ್ರಿಗಳು ಹಾಗೂ ನಾನು ಮೂವರು ಸೇರಿ ರಾಜ್ಯದ ಅಭಿವೃದ್ಧಿ ಬಗ್ಗೆ
ಹಲವಾರು ವಿಷಯಗಳನ್ನು ಚರ್ಚಿಸುತ್ತೇವೆ. ಲಕ್ಷ್ಮಣ ಸವದಿ ಅವರ ಕೋರಿಕೆಯಂತೆ 35 ಕೋಟಿ ಹಣವನ್ನು ಒಂದೇ ಕಾಮಗಾರಿಗೆ ನೀಡಲಾಗಿದೆ ಎಂದರು.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ನಾನು ಸಿ.ಸಿ ಪಾಟೀಲ, ಸಿಎಂ ಬೊಮ್ಮಾಯಿ ಆಪ್ತ ಸ್ನೇಹಿತರು. ಬಿಜೆಪಿ ಅಥವಾ ಕೆಜಿಪಿ ಎಂಬ ದ್ವಂದ್ವದಲ್ಲಿದ್ದಾಗ ಎಲ್ಲರೂ ಚರ್ಚೆ ಮಾಡಲು ಒಂದೆಡೆ ಸೇರಿದ್ದೆವು. ಆ ದಿನ ಮರಳಿ ಮನೆಗೆ ಬಂದಾಗ. ಸಿ.ಸಿ ಪಾಟೀಲಗೆ ಆಕಸ್ಮಿಕವಾಗಿ ಗುಂಡು ತಗುಲಿ ಗಂಭೀರ ಗಾಯವಾಗಿತ್ತು. ತುರ್ತು ನಿಗಾ ಘಟಕದಲ್ಲಿದ್ದ ಸಿ.ಸಿ ಪಾಟೀಲ ನನ್ನೆಡೆಗೆ ಮಾತ್ರ ಕೈ ಬೀಸಿದ್ದರು. ಎಂದು ಸ್ಮರಿಸಿ ಭಾವುಕರಾದರು. ಅಲ್ಲದೇ ರಡ್ಡೆರಟ್ಟಿ ಗ್ರಾಮದಿಂದ ನಾಗನೂರವರೆಗೆ ರಸ್ತೆ ಡಾಂಬರೀಕರಣಕ್ಕೆ 5 ಕೋಟಿ ಅನುದಾನ ನೀಡಬೇಕು ಎಂದು ಕೋರಿದರು.
ಅಥಣಿಯ ಶಿವಬಸವ ಮುರುಘರಾಜೇಂದ್ರ ಸ್ವಾಮೀಜಿ, ಶೇಗುಣಸಿಯ ಮಹಾಂತ ಸ್ವಾಮೀಜಿ, ಹಣಮಾಪೂರದ ಅಮರೇಶ್ವರ ಮಹಾರಾಜರು, ತೆಲಸಂಗದ ವೀರೇಶ್ವರ ದೇವರು, ಸೊಲ್ಲಾಪೂರದ ಅಭಿನವ ಶಿವಪುತ್ರ ಸ್ವಾಮೀಜಿ, ಸಂಸದ ಅಣ್ಣಾಸಾಬ ಜೊಲ್ಲೆ ಮಾತನಾಡಿದರು. ಯುವ ನಾಯಕ ಚಿದಾನಂದ ಸವದಿ, ಅಧೀಕ್ಷಕ ಅಭಿಯಂತರ ಪ್ರಶಾಂತ ಪಾಟೀಲ, ವಿ.ಎನ್.ಪಾಟೀಲ, ಜೆ.ಎ.ಹಿರೇಮಠ, ಜಿ.ಎಮ್.ಗೂಳಪ್ಪನವರ, ಎ.ಜಿ.ಮುಲ್ಲಾ, ತಹಶೀಲ್ದಾರ ಸುರೇಶ ಮುಂಜೆ, ಇಒ ಶೇಖರ ಕರಿಬಸಪ್ಪಗೋಳ, ವಿ.ಎ.ವಾಲಿ. ಸುರೇಶ ಗೂಳಪ್ಪನವರ, ಗಿರೀಶ ಸಜ್ಜನ ಸೇರಿದಂತೆ ಅನೇಕರು ಇದ್ದರು.