ನಿಜ ಹೇಳಿ ಬಿಡ್ತೀನಿ. ನಂಗೆ ಏನಾಗಿದೆ ಅಂತಲೇ ಗೊತ್ತಿಲ್ಲ. ಸದಾ ನಿನ್ನ ಯೋಚನೆಯಲ್ಲಿಯೇ ಇರ್ತೀನಿ. ಸ್ನೇಹಿತರ ಮಧ್ಯೆ ಇರೋವಾಗ, ಕೆಲಸದಲ್ಲಿ ಮಗ್ನವಾಗಿದ್ದಾಗ, ಅಷ್ಟೇ ಯಾಕೆ? ಮನೇಲಿದ್ರೂ ನಿನ್ನದೇ ಧ್ಯಾನ. ಈಗ ನೀನು ಏನು ಮಾಡ್ತಾ ಇದ್ದೀಯ, ಹೇಗಿದ್ದೀಯ? ಗೊತ್ತಿಲ್ಲ. ಆದ್ರೂ, ನನ್ನ ನೆನಪು ಮಾಡ್ಕೊಳ್ತೀಯೊ ಇಲ್ವೊ ಅಂತೆಲ್ಲ ಹುಚ್ಚುಚ್ಚಾಗಿ ಯೋಚನೆ ಮಾಡಿದ್ದೂ ಇದೆ.
Of course, ನಿನಗೂ ನನ್ನ ನೆನಪು ಆಗುತ್ತೆ ಅಂತ ಗೊತ್ತು. ಯಾವಾಗ್ಲೂ ಕೇಳ್ತಿದ್ದೆಯಲ್ಲ, ನನ್ನಲ್ಲಿ ಏನು ಇಷ್ಟ ಆಯ್ತು ಅಂತ.. ನಿನ್ನಲ್ಲಿ ನಾ ಇಷ್ಟಪಟ್ಟದ್ದು ನಿನ್ನ ಡಿಂಪಲ್ ಹೌದು ಕಣೇ, ಗುಳಿ ಕೆನ್ನೆ ಚೆಲುವೆ ನೀನು, ಮೊದಲನೇ ಸಲ ನೋಡಿದಾಗ ನಾ ಮೊದಲು ಗಮನಿಸಿದ್ದು ನಿನ್ನ ಗುಳಿಕೆನ್ನೆಯನ್ನೇ. ನಿಜ ಹೇಳಲಾ, ನೀ ನಕ್ಕರೆ ಮುತ್ತು ಉದುರುವಂತೆ ಅನಿಸಿದ್ದು ಸುಳ್ಳಲ್ಲ. ಸದಾ ನಿನ್ನ ಸಾಮೀಪ್ಯವನ್ನ ನಾ ಬಯಸುತ್ತೀನಿ. ಅಷ್ಟು ಬಿಟ್ರೆ ಬೇರೆ ಯಾವ ಉದ್ದೇಶವೂ ಇಲ್ಲ ಕಣೇ.
ನನ್ನ ಹೃದಯದಲ್ಲಿ ನೀನು ಬಿತ್ತಿದ ಪ್ರೀತಿಯ ಬೀಜ ಮೊಳಕೆಯೊಡೆದು ಹಸಿರಾಗಿದೆ. ಆ ಪ್ರೀತಿಗೆ ನೀರೆರೆದು ಪೋಷಿಸುತ್ತೀಯ ಅನ್ನೋ ನಂಬಿಕೆ ನನಗಿದೆ. ಕೊನೆಯದಾಗಿ ಒಂದು ಮಾತು: ಆ ಚಂದ್ರನ ಸಾಮೀಪ್ಯ ಬಯಸಿ ಉಪಗ್ರಹಗಳು ನಭಕ್ಕೆ ಹಾರಿ ಲ್ಯಾಂಡ್ ಆಗುತ್ತವಲ್ಲ, ಹಾಗೇ, ನಾನೂ ನಿನ್ನ ಕಕ್ಷೆಯಲ್ಲಿ ಸುತ್ತಿ ನಿನ್ನ ಹಾರ್ಟಿನಲ್ಲಿ ಲ್ಯಾಂಡ್ ಆಗಿದ್ದೇನೆ. ಇನ್ನು ಸದಾ ಕಾಲ ನಿನ್ನ ಬೆಚ್ಚಗಿನ ಅಪ್ಪುಗೆಯೊಳಗೆ ಇರಿಸಿ ನನ್ನನ್ನು ಹುಷಾರಾಗಿ ನೋಡಿಕೋ.
ಇಂತಿ ನಿನ್ನ
ಪಿ.ವಿ