Advertisement

ನಾವಿದ್ದಲ್ಲಿಗೇ ನೀವು ಬರಬೇಕು

08:17 AM Jun 16, 2019 | mahesh |

ಕೋಲ್ಕತಾ/ಹೊಸದಿಲ್ಲಿ:‘ನೀವು ಕರೆದಲ್ಲಿಗೆ ನಾವು ಬರಲಾಗದು. ಬೇಕಿದ್ದರೆ, ನೀವೇ ನಾವಿದ್ದಲ್ಲಿಗೆ ಬಂದು, ಕ್ಷಮೆ ಯಾಚಿಸಿ. ಅಲ್ಲಿಯವರೆಗೂ ನಾವು ಮುಷ್ಕರ ಕೈಬಿಡುವುದಿಲ್ಲ.’ ಇದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕೋಲ್ಕತಾದಲ್ಲಿ ಧರಣಿ ಕುಳಿತಿರುವ ಜೂನಿಯರ್‌ ವೈದ್ಯರು ಹಾಕಿರುವ ಸವಾಲು.

Advertisement

ರಾಜ್ಯ ಕಾರ್ಯಾಲಯದಲ್ಲಿ ಗೌಪ್ಯ ಮಾತುಕತೆಗೆ ಬರುವಂತೆ ಸೂಚಿಸಿ, ಮಮತಾ ಬ್ಯಾನರ್ಜಿ ನೀಡಿದ್ದ ಆಹ್ವಾನವನ್ನು ಈ ಮೇಲಿನ ಮಾತುಗಳ ಮೂಲಕ ಪ್ರತಿಭಟನನಿರತ ವೈದ್ಯರು ತಿರಸ್ಕರಿಸಿದ್ದಾರೆ. ಜತೆಗೆ, ನಾವು ಅಭದ್ರತೆಯಿಂದ ಬದುಕುತ್ತಿದ್ದೇವೆ. ಹಾಗಾಗಿ, ನೀವಿರುವಲ್ಲಿ ಬರಲು ಸಾಧ್ಯವಿಲ್ಲ. ನೀವೇ ಎನ್‌ಆರ್‌ಎಸ್‌ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಬಂದು, ಮುಕ್ತ ಮಾತುಕತೆ ನಡೆಸಿ. ಅಲ್ಲದೆ, ಪ್ರತಿಭಟನಾ ನಿರತರ ಬಗ್ಗೆ ಆಡಿರುವ ಹಗುರ ಮಾತುಗಳಿಗೆ ನೀವು ಮೊದಲು ಕ್ಷಮೆ ಯಾಚಿಸಿ ಮತ್ತು ನಮ್ಮ ಬೇಡಿಕೆ ಗಳನ್ನು ಈಡೇರಿಸಿ. ಅಲ್ಲಿಯವರೆಗೂ ನಾವು ಮುಷ್ಕರ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದೂ ವೈದ್ಯರು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಕೊನೆಗೆ ಪ್ರತಿಕ್ರಿಯಿಸಿರುವ ಮಮತಾ, ವೈದ್ಯರ ಬೇಡಿಕೆಗಳನ್ನು ಈಡೇರಿಸುವುದಾಗಿ ಘೋಷಿಸಿದರೂ, ವೈದ್ಯರು ಮಾತ್ರ ಮುಷ್ಕರ ನಿಲ್ಲಿಸುವ ನಿರ್ಧಾರ ಕೈಗೊಂಡಿಲ್ಲ.

5ನೇ ದಿನ ಪೂರೈಸಿದ ಮುಷ್ಕರ: ಶುಕ್ರವಾರ ರಾತ್ರಿಯೂ ದೀದಿ ಕರೆದಿದ್ದ ಮಾತುಕತೆಯ ಆಹ್ವಾನವನ್ನು ವೈದ್ಯರು ತಿರಸ್ಕರಿಸಿದ್ದರು. ಅನಂತರ ಶನಿವಾರ ಸಂಜೆಗೆ ಮತ್ತೂಂದು ಆಹ್ವಾನವನ್ನು ನೀಡಲಾಗಿತ್ತು. ಅದನ್ನೂ ತಿರಸ್ಕರಿಸಿರುವ ವೈದ್ಯರು, ದೀದಿಯೇ ನಾವಿದ್ದಲ್ಲಿಗೆ ಬರಲಿ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಆರಂಭವಾಗಿರುವ ಮುಷ್ಕರ ಶನಿವಾರ 5ನೇ ದಿನ ಪೂರೈಸಿದೆ.

ವರದಿ ಕೇಳಿದ ಕೇಂದ್ರ: ಪಶ್ಚಿಮ ಬಂಗಾಲದಲ್ಲಿ ನಡೆದಿರುವ ರಾಜಕೀಯ ಹಿಂಸಾಚಾರ ಹಾಗೂ ವೈದ್ಯರ ಮುಷ್ಕರಕ್ಕೆ ಸಂಬಂಧಿಸಿ ವರದಿ ನೀಡುವಂತೆ ಶನಿವಾರ ರಾಜ್ಯಕ್ಕೆ ಕೇಂದ್ರ ಸರಕಾರ ಸೂಚಿಸಿದೆ. ಕಳೆದ 4 ವರ್ಷಗಳಲ್ಲಿ ಬಂಗಾಲದಲ್ಲಿ ರಾಜಕೀಯ ಹಿಂಸಾಚಾರಕ್ಕೆ 160 ಮಂದಿ ಬಲಿಯಾಗಿದ್ದು, ಇಂಥ ಘಟನೆಗಳ ನಿಯಂತ್ರಣಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದೂ ಕೇಳಲಾಗಿದೆ.

ಕೇಂದ್ರ ಸಚಿವರ ಭೇಟಿ: ಶನಿವಾರ ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ)ಯ ನಿಯೋಗವೊಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ರನ್ನು ಭೇಟಿಯಾಗಿ, ಮುಷ್ಕರಕ್ಕೆ ಸಂಬಂಧಿಸಿ ಮಾತುಕತೆ ನಡೆಸಿದೆ. ಇದೇ ವೇಳೆ, ವೈದ್ಯ ಕೀಯ ವೃತ್ತಿಯಲ್ಲಿ ಇರುವವರನ್ನು ಹಿಂಸಾಚಾರದಿಂದ ರಕ್ಷಿಸುವ ಕುರಿತ ಕಾನೂನು ಜಾರಿ ಮಾಡುವ ಬಗ್ಗೆ ಪರಿಶೀಲಿಸುವಂತೆ ಎಲ್ಲ ರಾಜ್ಯ ಗಳಿಗೂ ಸಚಿವ ಹರ್ಷವರ್ಧನ್‌ ಪತ್ರ ಬರೆದಿದ್ದಾರೆ. ಇನ್ನೊಂದೆಡೆ, ದೇಶಾದ್ಯಂತ ಹಲವು ಆಸ್ಪತ್ರೆಗಳಲ್ಲಿ ವೈದ್ಯರು ಶನಿವಾರ ಪ್ರತಿಭಟನಾ ಮೆರವಣಿಗೆಗಳಲ್ಲಿ ಭಾಗವಹಿಸಿದ್ದಾರೆ.

Advertisement

ದೀದಿಗೆ 48 ಗಂಟೆಗಳ ಗಡುವು
ಕೋಲ್ಕತಾದಲ್ಲಿ ವೈದ್ಯರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಶನಿವಾರ ಕರ್ತವ್ಯವನ್ನು ಬಹಿಷ್ಕರಿಸಿರುವ ಏಮ್ಸ್‌ ಮತ್ತು ಸಫ್ದಾರ್‌ಜಂಗ್‌ ಆಸ್ಪತ್ರೆಗಳ ವೈದ್ಯರು, ಪ.ಬಂಗಾಲ ಸಿಎಂ ಮಮತಾಗೆ 48 ಗಂಟೆಗಳ ಗಡುವು ವಿಧಿಸಿದ್ದಾರೆ. 48 ಗಂಟೆಗಳ ಒಳಗಾಗಿ ವೈದ್ಯರ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ, ನಾವೆಲ್ಲರೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತೇವೆ ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

ವೈದ್ಯರಿಗೆ ಮಣಿದ ದೀದಿ: ಬೇಡಿಕೆ ಈಡೇರಿಸಲು ಒಪ್ಪಿಗೆ
ಸಹೋದ್ಯೋಗಿಗಳ ಮೇಲಿನ ಹಲ್ಲೆ ಖಂಡಿಸಿ, ಸತತ 5 ದಿನಗಳಿಂದ ಮುಷ್ಕರ ನಡೆಸುತ್ತಾ ಬಂದಿರುವ ವೈದ್ಯರ ಮುಂದೆ ಕೊನೆಗೂ ದೀದಿ ಮಂಡಿಯೂರಿದ್ದಾರೆ. ಶನಿವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಸಿಎಂ ಮಮತಾ ಬ್ಯಾನರ್ಜಿ, ವೈದ್ಯರ ಎಲ್ಲ ಬೇಡಿಕೆಗಳನ್ನೂ ಈಡೇರಿಸುವುದಾಗಿ ಘೋಷಿಸಿದ್ದಾರೆ.

•ನಾವು ನಿಮ್ಮ(ವೈದ್ಯರ) ಎಲ್ಲ ಬೇಡಿಕೆಗಳನ್ನೂ ಈಡೇರಿಸಲು ಬದ್ಧವಾಗಿದ್ದೇವೆ. ಇನ್ನೂ ಏನಾದರೂ ಬೇಡಿಕೆಯಿದ್ದರೆ ತಿಳಿಸಿ, ಅವುಗಳನ್ನೂ ಈಡೇರಿಸುತ್ತೇನೆ.

•ನಮ್ಮ ಸಚಿವರು, ಪ್ರಧಾನ ಕಾರ್ಯದರ್ಶಿಗಳನ್ನು ವೈದ್ಯರೊಂದಿಗೆ ಮಾತುಕತೆ ನಡೆಸಲು ಕಳುಹಿಸಿದ್ದೇನೆ. ವೈದ್ಯರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು

•ನಾವು ವೈದ್ಯರ ನಿಯೋಗವನ್ನು ಭೇಟಿಯಾಗಲು ಶುಕ್ರವಾರ ಮತ್ತು ಶನಿವಾರ 5 ಗಂಟೆ ಕಾಲ ಕಾದಿದ್ದೇವೆ. ಆದರೂ ಅವರು ಬರಲಿಲ್ಲ. ಸಾಂವಿಧಾನಿಕ ಸಂಸ್ಥೆಗೆ ನೀವು ಗೌರವ ನೀಡಬೇಕು.

•ರಾಜ್ಯದಲ್ಲಿ ಎಸ್ಮಾ ಜಾರಿ ಮಾಡಲು ನಾನು ಬಯಸುವುದಿಲ್ಲ. ನಾವು ಒಬ್ಬನೇ ಒಬ್ಬ ವ್ಯಕ್ತಿಯನ್ನೂ ಬಂಧಿಸಿಲ್ಲ. ಯಾವ ಕಠಿಣ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಆರೋಗ್ಯ ಸೇವೆಗಳು ಸ್ಥಗಿತಗೊಳ್ಳಬಾರದು ಅಷ್ಟೆ.

Advertisement

Udayavani is now on Telegram. Click here to join our channel and stay updated with the latest news.

Next