Advertisement

ಮಾಧ್ಯಮಗಳಿಗೆ ಮಸಾಲೆ ನೀಡಬೇಡಿ: ಪ್ರಧಾನಿ ಮೋದಿ

06:00 AM Apr 23, 2018 | |

ನವದೆಹಲಿ: ಪದೇ ಪದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟುಮಾಡುತ್ತಿರುವ ಸದಸ್ಯರಿಗೆ ಪ್ರಧಾನಿ ಮೋದಿ ಅವರು ಎಚ್ಚರಿಕೆ ಸಂದೇಶ ರವಾನಿಸಿದ್ದು, ನಮ್ಮ ತಪ್ಪುಗಳು ಮಾಧ್ಯಮಗಳಿಗೆ ಮಸಾಲೆಯಾಗದಂತೆ ನೋಡಿಕೊಳ್ಳಿ ಎಂದು ಖಡಕ್‌ ಸೂಚನೆ ನೀಡಿದ್ದಾರೆ.

Advertisement

ಭಾನುವಾರ ನರೇಂದ್ರ ಮೋದಿ ಆ್ಯಪ್‌ ಮೂಲಕ ಬಿಜೆಪಿ ಶಾಸಕರು, ಜನಪ್ರತಿನಿಧಿಗಳ ಜತೆ ಸಂವಾದ ನಡೆಸಿದ ಪ್ರಧಾನಿ, ವಿವಾದಾತ್ಮಕ ಹೇಳಿಕೆಗಳಿಂದ ದೂರವಿರುವಂತೆ ಸಲಹೆ ನೀಡಿದ್ದಾರೆ. “ನಾವು ತಪ್ಪುಗಳನ್ನು ಮಾಡುವ ಮೂಲಕ ಮಾಧ್ಯಮಗಳಿಗೆ ಮಸಾಲೆಯನ್ನು ಒದಗಿಸುತ್ತಿದ್ದೇವೆ. ನಾವೇ ದೊಡ್ಡ ಸಾಮಾಜಿಕ ವಿಜ್ಞಾನಿಗಳಂತೆ, ತಜ್ಞರಂತೆ ಕೆಲವೊಂದು ವಿಚಾರಗಳನ್ನು ವಿಶ್ಲೇಷಿಸುತ್ತೇವೆ. ಕ್ಯಾಮೆರಾ ಕಂಡೊಡನೆ ಮಾತನಾಡಲು ಆರಂಭಿಸುತ್ತೇವೆ. ಹೀಗಾದಾಗಲೇ ಅರ್ಧ ಬೆಂದ ವಿಚಾರಗಳು ಹೊರಬರಲು ಆರಂಭವಾಗುತ್ತವೆ. ಹಾಗಾಗಿ, ಇಂಥದ್ದರಿಂದ ದೂರವಿರಿ’ ಎಂದು ಹೇಳಿದ್ದಾರೆ.

ಇತ್ತೀಚೆಗೆ ಬಿಜೆಪಿ ನಾಯಕರು ನೀಡಿರುವ ಹಲವು ಹೇಳಿಕೆಗಳು ವಿವಾದಕ್ಕೆ ತಿರುಗಿ, ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಮೋದಿ ಅವರ ಮಾತುಗಳು ಮಹತ್ವ ಪಡೆದಿದೆ. ಅತ್ಯಾಚಾರ ಪ್ರಕರಣಗಳು, ಬಿಹಾರದಲ್ಲಿನ ಆರ್‌ಜೆಡಿ ಗೆಲುವು ಕುರಿತು ಬಿಜೆಪಿ ನಾಯಕರ ಹೇಳಿಕೆಗಳು, ಡಾರ್ವಿನ್‌ ಸಿದ್ಧಾಂತದ ಬಗ್ಗೆ ಕೇಂದ್ರ ಸಚಿವ ಸತ್ಯಪಾಲ್‌ ಸಿಂಗ್‌ ಆಡಿದ್ದ ಮಾತು, ಇಂಟರ್ನೆಟ್‌ ಕುರಿತು ತ್ರಿಪುರ ಸಿಎಂ ಬಿಪ್ಲಬ್‌ ದೇಬ್‌ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು.

ಇದೇ ವೇಳೆ, ಕೌಶಲ್ಯಾಭಿವೃದ್ಧಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಕಾರ್ಯಕ್ರಮಗಳ ಕುರಿತೂ ಸಂಸದರು, ಶಾಸಕರೊಂದಿಗೆ ಪ್ರಧಾನಿ ಚರ್ಚಿಸಿದ್ದಾರೆ. ಜನರೊಂದಿಗೆ ಸಂಪರ್ಕ ಸಾಧಿಸುವ ನಿಮ್ಮ ಪ್ರಯತ್ನದಿಂದಾಗಿ ಪಕ್ಷದ ಶಕ್ತಿ ಇನ್ನಷ್ಟು ಹೆಚ್ಚಾಗಿದೆ ಎಂದೂ ಹೇಳಿದ್ದಾರೆ.

ಅತ್ಯಾಚಾರ ಘಟನೆಗಳನ್ನೇಕೆ ದೊಡ್ಡ ವಿಷಯ ಮಾಡುತ್ತೀರಿ?
“ನಮ್ಮ ಮಾತುಗಳು ಮಾಧ್ಯಮಗಳಿಗೆ ಆಹಾರವಾಗುವುದು ಬೇಡ’ ಎಂದು ಪ್ರಧಾನಿ ಮೋದಿ ಅವರು ಎಚ್ಚರಿಕೆ ನೀಡಿದ ದಿನವೇ ಬಿಜೆಪಿ ನಾಯಕ, ಕೇಂದ್ರ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ಅತ್ಯಾಚಾರ ಕುರಿತು ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ. ಭಾನುವಾರ ಮಾತನಾಡಿದ ಸಚಿವ ಗಂಗ್ವಾರ್‌, “ಇಷ್ಟು ದೊಡ್ಡ ದೇಶದಲ್ಲಿ, ಒಂದೆರಡು ಅತ್ಯಾಚಾರ ಪ್ರಕರಣಗಳು ವರದಿಯಾದರೆ, ಅದನ್ನು ಯಾರೂ ದೊಡ್ಡ ವಿಷಯವನ್ನಾಗಿ ಮಾಡಬೇಕಾಗಿಲ್ಲ. ಇಂಥ ಘಟನೆಗಳು ನಿಜಕ್ಕೂ ದುರದೃಷ್ಟಕರ. ಆದರೆ, ಇಂಥದ್ದನ್ನು ನಿಯಂತ್ರಿಸುವುದು ಬಹಳ ಕಷ್ಟದ ಕೆಲಸ’ ಎಂದು ಹೇಳಿದ್ದಾರೆ. ಕಥುವಾ, ಉನ್ನಾವ್‌, ಸೂರತ್‌ ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ನಡುವೆಯೇ ಸಚಿವರು ಈ ರೀತಿಯ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

Advertisement

ಕ್ರಿಶ್ಚಿಯನ್‌ ಮಿಷನರಿಗಳು ಏಕತೆಗೆ ಅಪಾಯ
ಮತ್ತೂಂದೆಡೆ, ಕ್ರಿಶ್ಚಿಯನ್‌ ಮಿಷನರಿಗಳು ದೇಶದ ಏಕತೆಗೆ ಮತ್ತು ಸಮಗ್ರತೆಗೆ ಅಪಾಯಕಾರಿ ಎಂದು ಬಿಜೆಪಿ ಸಂಸದ ಭರತ್‌ ಸಿಂಗ್‌ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಅನ್ನು ನಿಯಂತ್ರಿಸುತ್ತಿರುವುದೇ ಕ್ರಿಶ್ಚಿಯನ್‌ ಮಿಷನರಿಗಳು. ರಾಹುಲ್‌ಗಾಂಧಿ ಅವರ ತಾಯಿ ಸೋನಿಯಾಗಾಂಧಿ ಇದೇ ಮಿಷನರಿಗಳ ನಿರ್ದೇಶನದಂತೆ ಕೆಲಸ ಮಾಡುತ್ತಾರೆ. ಇವರು ದೇಶದ ಏಕತೆ, ಸಮಗ್ರತೆಗೆ ಅತಿದೊಡ್ಡ ಅಪಾಯವಾಗಿದ್ದಾರೆ. ದೇಶದ ಈಶಾನ್ಯ ಭಾಗಗಳಲ್ಲಿ ಹಲವರು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರವಾದ ಕಾರಣ, ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡಿದೆ ಎಂದೂ ಬಲ್ಲಿಯಾ ಸಂಸದ ಸಿಂಗ್‌ ಹೇಳಿದ್ದಾರೆ. ಜತೆಗೆ, ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆ ಧ್ವಂಸದ ಹಿಂದೆ ಇದೇ ಮಿಷನರಿಗಳ ಕೈವಾಡವಿತ್ತು ಎಂದೂ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next