Advertisement

ಮಾತಾರಿ ನಿನಗೂ ಒಂದು ಹೆಸರಿತ್ತಲ್ಲ..

11:40 AM Nov 14, 2019 | mahesh |

ಪ್ರತಿ ರವಿವಾರ ಮುಂಜಾನೆ ಹಿತ್ತಲಿನ ಬಾಗಿಲು ಬಾರಿಸುತ್ತಿದ್ದಂತೆ, ಓಡಿ ಹೋಗಿ ಬಾಗಿಲು ತೆಗೆದರೆ ,ಆರಡಿ ಎತ್ತರದ, ದಪ್ಪನೆ ಕೆಂಪಗಿನ, ದಪ್ಪ ಕನ್ನಡಕಕ್ಕೆ ಒಂದು ಕಡೆ ಬಟ್ಟೆ ತುಂಡು ಕಟ್ಟಿ ಅದನ್ನು ತನ್ನ ಚಿಕ್ಕ ಬೆಳ್ಳಿ ತುರುಬಿಗೆ ಸುತ್ತಿ ,ಕಚ್ಚೆ ಸೀರೆ ಉಟ್ಟುಕೊಂಡು ನಿಂತಿರುತ್ತಿದ್ದಳು ಮರಾಠಿ ಮಾತನಾಡುವ ಮಾತಾರಿ.
ಹಿತ್ತಲೊಳಗೆ ಕಾಲಿಡುತ್ತಿದ್ದಂತೆ, ಸಂಡಾಸ್‌ ತೊಳೆಯಲು ಪೇಪರ್‌ನಲ್ಲಿ ನಿರ್ಮಾ ಪುಡಿ, ತೆಂಗಿನ ನಾರನ್ನು ಕೊಟ್ಟರೆ ಮುಗಿಯಿತು. ಫ‌ಳಫ‌ಳನೆ ಹೊಳೆಯುವಂತಾದ ನಂತರವೇ ಹೊರಗೆ ಬರುತ್ತಿದ್ದದ್ದು. ಉಳಿದ ಸನ್‌ಲೈಟ್‌ ಸಾಬೂನಿನ ತುಂಡುಗಳನ್ನು ಕೊಟ್ಟು “ಚೆನ್ನಾಗಿ ಕೈ ಕಾಲು ತೊಳೆದುಕೋ’ ಎನ್ನುತ್ತ ಅವಳ ಕೈಗೆ, ಕಾಲಿಗೆಲ್ಲ ನೀರು ಹಾಕುತ್ತಿದ್ದಾಗ ಸಂತೋಷದಿಂದ ತನ್ನ ಬೊಚ್ಚುಬಾಯಿ ತೆಗೆದು ನಕ್ಕಾಗ ಕಾಣುತ್ತಿದ್ದುದು ಮುಂದಿನ ಎರಡೇ ಹಲ್ಲುಗಳು.

Advertisement

ನಿನ್ನೆಯ ಎರಡು ರೊಟ್ಟಿ, ಪಲ್ಲೆ ಕೊಟ್ಟಿದ್ದನ್ನು ತಿಂದು, ಬೊಗಸೆಯಲ್ಲಿ ನೀರು ಹಾಕುತ್ತಿದ್ದಂತೆ ಗಟಗಟನೆ ಕುಡಿಯುತ್ತಾ ಇನ್ನೂ ಜೋರಾಗಿ ನೀರು ಬಿಡುವಂತೆ ಗೋಣು ಹಾಕುತ್ತಿದ್ದಳು. ಎರಡು ರೂಪಾಯಿ ನೋಟು ಕೊಟ್ಟೊಡನೆ ಕೈ ಮುಗಿದು, “ಬಾಗಿಲು ಹಾಕೊಳ್ಳಿ’ ಎನ್ನುತ್ತಾ ಹೋಗುತ್ತಿದ್ದಳು.

ಆಮೇಲಾಮೇಲೆ ಮೊದಲು ಊಟ ಮಾಡು ಎನ್ನುವ ನನ್ನ ಮೊಂಡುತನಕ್ಕೆ ನಕ್ಕು ಊಟಮಾಡುತ್ತಿದ್ದದ್ದೂ ಉಂಟು. ಅಣ್ಣ ಮನೆಯಲ್ಲಿ ಇದ್ದರೆ ಅವಳಿಗೆ ಖುಷಿ. ಅವನಿಂದ ಅವಳಿಗೆ ಮೂರು ರೂಪಾಯಿ ಜಾಸ್ತಿ ಸಿಗುತ್ತಿತ್ತು. ಮಾತಾರಿ ಬಗ್ಗೆ ನನಗೆ ಎಂಥದೋ ಸೆಳೆತ . ಅವಳು ಕಾಲೇಜಿನ ಪಕ್ಕ ಆಗಾಗ ಕಂಡಾಗ ನಾನು ಓಡಿಹೋಗಿ, ತಂದಿರುತ್ತಿದ್ದ ತಿಂಡಿ ಕೊಡುತ್ತಿದ್ದೆ. ಒಣ ಅವಲಕ್ಕಿ ಕೊಡುವಾಗ, ಬೇಡವೇ ಬೇಡಾ ಹಲ್ಲಿಗೆ ಬರುವುದಿಲ್ಲ ಎನ್ನುತ್ತಿದ್ದಳು. ಬರುಬರುತ್ತಾ ಗೆಳತಿಯರೆಲ್ಲ ಆಕೆಯನ್ನು, “ಮಾತಾರಿ’ ಅನ್ನದೆ “ನಿನ್ನ ಫ್ರೆಂಡ್‌’ ಅನ್ನೋಕೆ ಶುರು ಮಾಡಿದರು.

ಮನೆಗೆ ಬಂದಾಗಲೊಮ್ಮೆ ಆವಾಗಾವಾಗ ಅವಳ ಕುಟುಂಬದ ಬಗ್ಗೆ ಅಷ್ಟಿಷ್ಟು ಕೇಳಿ ತಿಳಿದುಕೊಂಡಿದ್ದೆ. ಒಮ್ಮೆ ಮಾತನಾಡುವಾಗ, “ಹಸಿವು ,ನೋವು ಇವು ಎರಡೂ ಮನಷ್ಯನ ಸೊಕ್‌R ಮುರಿತಾವ ತಂಗಿ’ ಅಂದಾಗ, ಹಸಿವು ಕೂಡ ಅಷ್ಟು ಭಯಾನಕವೇ ಎಂದೆನಿಸಿತ್ತು.

ಅಪ್ಪನ ವರ್ಗಾವಣೆಯಿಂದಾಗಿ ನಾವು ಬೇರೆ ಊರಿಗೆ ಹೋದಾಗ, ಒಂದು ಮರಾಠಿ ಕುಟುಂಬದಿಂದ “ಮಾತಾರಿ’ ಅಂದರೆ ಮುದುಕಿ ಎಂದು ತಿಳಿದಾಗ ಬಹಳ ನೋವಾಯಿತು. ಅಷ್ಟು ವರ್ಷವೂ ಅದು ಅವಳ ಹೆಸರೆಂದೇ ತಿಳಿದಿದ್ದೆ ನಾನು!

Advertisement

ಮಾತಾರಿ, ನಿನಗೂ ಒಂದು ಹೆಸರಿತ್ತು ಅಲ್ಲವೇ? ನೀನೇಕೆ ನಿನ್ನ ಹೆಸರನ್ನು ಒಮ್ಮೆಯೂ ಹೇಳಲೇ ಇಲ್ಲ?
ಈಗ ಟಿ.ವಿ.ಯ ಜಾಹೀರಾತುಗಳಲ್ಲಿ ಸ್ಟೈಲ್‌ ಆಗಿ ಜೀನ್ಸ್‌ ತೊಟ್ಟು ಟಾಯ್ಲೆಟ್‌ ತೊಳೆಯುವವರು, ಲಿಕ್ವಿಡ್‌ ಹಾಕಿದ ಕೆಲವು ಸೆಕೆಂಡ್‌ಗಳಲ್ಲೇ ಮಿರಿ ಮಿರಿ ಮಿಂಚುವ ಅವರ ಟಾಯ್ಲೆಟ್‌, ಆ ಲಿಕ್ವಿಡ್‌, ಸೋಪು ಪುಡಿಯನ್ನೆಲ್ಲಾ ಹಾಕಿ ಸರ್ಕಸ್‌ ಮಾಡಿ ತೊಳೆಯುವಾಗ…..ಅದೇ ಮಾತಾರಿ ನೆನಪಾಗುತ್ತಾಳೆ. ನಿನಗೊಂದು ಹೆಸರೇ ಇರಲಿಲ್ಲವೇ ಮಾತಾರಿ, ನೀನೇಕೆ ನಿನ್ನ ಹೆಸರು ಹೇಳಲಿಲ್ಲ, ಎಲ್ಲರೂ ನಿನ್ನ ಮಾತಾರಿ ( ಮುದುಕಿ )ಎಂದು ಕೂಗುವಾಗ ನೀನೇಕೆ ಬೇಸರಿಸಿಕೊಳ್ಳಲಿಲ್ಲ ಅಂತೆಲ್ಲಾ ಕೇಳಬೇಕು ಅನ್ನಿಸುತ್ತದೆ.

ಅಕ್ಕಾ ,ಆಂಟಿ ಎಂದಾಕ್ಷಣ ಸಿಡಿಮಿಡಿಗೊಳ್ಳುವವರ ಮಧ್ಯೆ ಮತ್ತೆ ಮತ್ತೆ ಮಾತಾರಿ ನೀ ಕಾಡುವೆಯಲ್ಲ…

-ಶೋಭಾ ದೇಸಾಯಿ

Advertisement

Udayavani is now on Telegram. Click here to join our channel and stay updated with the latest news.

Next