ಮೈಸೂರು: ನೀವು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬನ್ನಿ, ಶಾಸಕ ಜಿ.ಟಿ.ದೇವೇಗೌಡರನ್ನು ನಿಮ್ಮ ಜತೆ ಸೇರಿಸಿಕೊಂಡು ಹುಣಸೂರು ಅಥವಾ ಪಿರಿಯಾಪಟ್ಟಣದಿಂದ ಎಂಎಲ್‌ಎ ಮಾಡಿ! ಇದು ಏಕಲವ್ಯ ನಗರ ಕೊಳಚೆಪ್ರದೇಶದ ನಿವಾಸಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ ಸಲಹೆ.
ಜೆ-ನರ್ಮ್ ಮನೆಗಳ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 3 ಎಲೆಕ್ಷನ್‌ನಲ್ಲಿ ತನಗೆ ಇವರೆಲ್ಲ ವೋಟ್ ಹಾಕವೆ ಎನ್ನುತ್ತಿದ್ದಂತೆ ಸಭಿಕರ ಮಧ್ಯೆ ಎದ್ದು ನಿಂತ ಮಹಿಳೆಯೊಬ್ಬರು ಈಗಲೂ ನಿಮಗೇ ಹಾಕ್ತೀವಿ ನಿಂತ್ಕೊಳ್ಳಿ ಎಂದು ಕೂಗಿ ಹೇಳಿದರು.
ಏಯ್ ಜಿ.ಟಿ.ದೇವೇಗೌಡ ಕೋಪಿಸ್ಕೋತಾನೆ ಸುಮ್ಮನಿರಮ್ಮ ಎಂದು ಆಕೆಯ ಬಾಯಿ ಮುಚ್ಚಿಸಲು ನೋಡಿದಾಗ ಇನ್ನೊಂದಷ್ಟು ಜನ ಎದ್ದು ನಿಂತು ಅವರನ್ನೂ ನಿಮ್ಮ ಜತೆ ಸೇರಿಸ್ಕೊಳ್ಳಿ, ಅವರಿಗೆ ಹುಣಸೂರು, ಪಿರಿಯಾಪಟ್ಟಣದಿಂದ ಎಂಎಲ್‌ಎ ಮಾಡಿಸಿ, ನೀವು ಇಲ್ಲಿ ನಿಂತ್ಕೊಳ್ಳಿ ಎಂದು ಸಲಹೆ ನೀಡಿದರು.
ಕುತೂಹಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ಚುನಾವಣೆಯಲ್ಲಿ ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರಿಂದ ಆ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು.
ಶುಕ್ರವಾರ ಆಲನಹಳ್ಳಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರು ವೇದಿಕೆಯಿಂದ ತೆರಳಿದ ನಂತರ ಆಗಮಿಸಿದ್ದ ಶಾಸಕ ಜಿ.ಟಿ.ದೇವೇಗೌಡ ಅವರು, ಶನಿವಾರ ಏಕಲವ್ಯ ನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ಸುಮಾರು 2 ಗಂಟೆ ಮುಂಚಿತವಾಗಿ ಬಂದು ಮುಖ್ಯಮಂತ್ರಿಗಳ ಬರುವಿಕೆಗಾಗಿ ಕಾದು ಕುಳಿತಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದಾಗ ಹೂಗುತ್ಛ ನೀಡಿ ಸ್ವಾಗತಿಸಿದ ಜಿಟಿಡಿಯವರು ವೇದಿಕೆಯಲ್ಲಿ ಅಂತರ ಕಾಯ್ದುಕೊಳ್ಳಲು ನೋಡಿದರು. ಇದನ್ನು ಗಮನಿಸಿದ ಸಚಿವ ಮಹದೇವಪ್ಪಅವರು ಜಿಟಿಡಿಯವರ ಕೈ ಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಕ್ಕದಲ್ಲಿ ಕೂರಿಸಿದರು. ಬಳಿಕ ಕೆಲ ಸಮಯ ಸಿದ್ದರಾಮಯ್ಯ ಹಾಗೂ ಜಿಟಿಡಿ ನಗುನಗುತ್ತ ಮಾತನಾಡುತ್ತಿದ್ದುದು ಎಲ್ಲರ ಗಮನ ಸೆಳೆಯಿತು.