Advertisement

ಫೇಸ್‌ಬುಕ್‌ನಲ್ಲೂ ಸಲ್ಲಿಸಬಹುದು ಅಹವಾಲು!

11:41 AM Jul 23, 2019 | Suhan S |

ಶಿವಮೊಗ್ಗ: ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣ ಬಳಸಿಕೊಂಡು ಜನರ ಅಹವಾಲುಗಳಿಗೆ ಕಿವಿಯಾಗುವ ಮೂಲಕ ಶಿವಮೊಗ್ಗ ಜಿಲ್ಲಾಡಳಿತ ಹಲವು ಜನಪರ ಕಾರ್ಯಕ್ಕೆ ಮುಂದಾಗಿದೆ.

Advertisement

ಜಿಲ್ಲಾಧಿಕಾರಿ ಅವರ ಫೇಸ್‌ಬುಕ್‌ ಪೇಜ್‌(deputycommissioner.shivamogga) ನಿರಂತರ ಚಟುವಟಿಕೆ ಗಳಿಂದ ಕೂಡಿದ್ದು, ಜಿಲ್ಲಾಡಳಿತದ ಪ್ರತಿಯೊಂದು ಕಾರ್ಯಚಟುವಟಿಕೆಗಳ ಮಾಹಿತಿಯನ್ನು ಸಾರ್ವಜನಿಕರು ಇಲ್ಲಿ ಸುಲಭವಾಗಿ ಪಡೆಯುವುದು ಸಾಧ್ಯವಾಗಿದೆ.

‘ಪ್ರತಿನಿತ್ಯ ಜಿಲ್ಲಾಧಿಕಾರಿ ಕಚೇರಿಗೆ ನೂರಾರು ಮಂದಿ ಹಲವಾರು ಅಹವಾಲುಗಳೊಂದಿಗೆ ಆಗಮಿಸುತ್ತಾರೆ. ಅವರೆಲ್ಲರ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ಇದರೊಂದಿಗೆ ಫೇಸ್‌ಬುಕ್‌ ಮೂಲಕ ಸಹ ಅಹವಾಲು, ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ಮಲೆನಾಡಿನಂತಹ ಊರಿನಲ್ಲಿ ಸಾಮಾಜಿಕ ಜಾಲತಾಣ ಸಮರ್ಪಕವಾಗಿ ಬಳಸಿಕೊಂಡು ಜನರ ಅಹವಾಲುಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಸಾಧ್ಯವಿದೆ ಎಂಬುವುದು ಇಲ್ಲಿ ಅರಿವಾಗಿದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ.

ಭಾವೈಕ್ಯದ ತಾಣವಾದ ಹಣಗರಕಟ್ಟೆಯಲ್ಲಿ ನೈರ್ಮಲ್ಯ, ಮೂಲಸೌಕರ್ಯಗಳ ಕೊರತೆ ಇತ್ಯಾದಿಗಳ ಕುರಿತು ವಾಟ್ಸಾಪ್‌ ಗ್ರೂಪಿನಲ್ಲಿ ಬಂದ ಪೋಸ್ಟಿಂಗ್‌ ಗಮನಿಸಿ ಅಂದೇ ಜಿಲ್ಲಾಧಿಕಾರಿ ಅವರು ಅಲ್ಲಿಗೆ ಭೇಟಿ ನೀಡಿದ್ದರು. ಆ ಬಳಿಕ ಅಲ್ಲಿನ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿತ್ತು. ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಸ್ಥಳೀಯ ಅಂಗಡಿಗಳಿಗೆ ಭೇಟಿ ನೀಡಿ ಮನವಿ ಹಾಗೂ ಎಚ್ಚರಿಕೆಯನ್ನು ಸ್ವತಃ ಜಿಲ್ಲಾಧಿಕಾರಿ ಅವರು ಮಾಡಿದ್ದರು. ಈ ಎಲ್ಲಾ ಕಾರಣದಿಂದ ಹಣಗರಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ದೊರೆತಿತ್ತು.

ವಸತಿ ನಿಲಯಗಳ ಬಗ್ಗೆ ನಿರಂತರ ಅಹವಾಲುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸ್ವೀಕರಿಸುತ್ತಿದ್ದ ಜಿಲ್ಲಾಧಿಕಾರಿ ಅವರು ನಿಯಮಿತವಾಗಿ ಅಂತಹ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಸ್ಥಿತಿ ಸುಧಾರಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.

Advertisement

ನಗರ ವ್ಯಾಪ್ತಿಯಲ್ಲಿರುವ ಮನೆಗಳಲ್ಲಿ ನೀರಿನ ಸಮರ್ಪಕೆ ಬಳಕೆ, ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಾಣ ಉತ್ತೇಜಿಸಲು ಜಿಲ್ಲಾಡಳಿತ ಆರಂಭಿಸಿರುವ ಪರಿಸರ ಸ್ನೇಹಿ ಕುಟುಂಬ ಪ್ರಶಸ್ತಿ ಯೋಜನೆಗೂ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿದಿನ ಅಂತಹ ಒಂದು ಮನೆಯನ್ನು ಗುರುತಿಸಿ ಸ್ವತಃ ಜಿಲ್ಲಾಧಿಕಾರಿ ಅವರು ಮನೆಗೆ ಭೇಟಿ ನೀಡಿ, ಜಿಲ್ಲಾಡಳಿತದ ವತಿಯಿಂದ ಪರಿಸರ ಸ್ನೇಹಿ ಕುಟುಂಬದ ಪ್ರಮಾಣ ಪತ್ರ ನೀಡುವ ಯೋಜನೆ ಇದಾಗಿದೆ. ಈ ಯೋಜನೆಯ ವಿಡಿಯೋಗಳನ್ನು ಲಕ್ಷಾಂತರ ಮಂದಿ ಫೇಸ್‌ಬುಕ್‌ನಲ್ಲಿ ವೀಕ್ಷಿಸಿದ್ದಾರೆ. ‘ಜನಸಾಮಾನ್ಯರನ್ನು ತಲುಪಲು ಫೇಸ್‌ಬುಕ್‌ ಸುಲಭ ಮಾಧ್ಯಮ ವಾಗಿದ್ದು, ಜನರ ನಾಡಿಮಿಡಿತವನ್ನು ತಕ್ಷಣ ಅರಿತುಕೊಳ್ಳಲು ಸಾಧ್ಯವಿದೆ. ಪರಿಸರ ಸ್ನೇಹಿ ಕುಟುಂಬ ಪ್ರಶಸ್ತಿಯಂತಹ ಕಾರ್ಯಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಮಂದಿಯಾದರೂ ಪ್ರೇರಣೆ ಪಡೆದರೆ ಅದುವೇ ಯಶಸ್ಸು’ ಎನ್ನುತ್ತಾರೆ ಜಿಲ್ಲಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next