ಮುಂಬೈ: ಕಂಗನಾ ರಣಾವತ್ ಮತ್ತು ರಾಜಕಾರಣಿ ಸಂಜಯ್ ರಾವತ್ ನಡುವೆ ಮಾತಿನ ಯುದ್ದ ತಾರಕಕ್ಕೇರಿದೆ. ಏತನ್ಮಧ್ಯೆ ಶಿವಸೇನಾ ನಾಯಕ ಸಂಜಯ್ ಹೇಳಿಕೆಗೆ ಕಂಗನಾ ಪ್ರತಿಕ್ರಿಯೆ ನೀಡಿದ್ದು, ನೀವು ಇಡೀ ಮಹಾರಾಷ್ಟ್ರವನ್ನು ಪ್ರತಿನಿಧಿಸುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಂಜಯ್ ರಾವತ್ ಜಿ, ನಾನು ಮುಂಬೈ ಪೊಲೀಸ್ ಅಥವಾ ನಿಮ್ಮನ್ನು ಟೀಕಿಸಿದರೆ, ಇಡೀ ಮಹಾರಾಷ್ಟ್ರವನ್ನೇ ಅವಮಾನ ಮಾಡಿದಳೆಂದು ಹೇಳುವುದು ಬೇಡ, ನೀವು ಮಹಾರಾಷ್ಟ್ರಿಗರಲ್ಲ ಎಂದು ಕಂಗನಾ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ದಿನಕ್ಕೆ ಎಷ್ಟು ಮಂದಿ ಬಾಲಕಿಯರು ಅತ್ಯಾಚಾರಕ್ಕೀಡಾಗುತ್ತಿದ್ದಾರೆ ಎಂದು ತಿಳಿದಿದೆಯೇ ? ಕೆಲವೊಮ್ಮೆ ಎಷ್ಟೋ ಮಹಿಳೆಯರು ತಮ್ಮ ಗಂಡನಿಂದ ಹಿಂಸೆಗೊಳಗಾಗಿ ಬಲಿಯಾಗುತ್ತಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ ಎಂದು ತಿಳಿದಿದೆಯೇ ? ನಿಮ್ಮ ಮನಸ್ಥಿತಿಯನ್ನು ಇಡೀ ದೇಶದ ಮುಂದೆ ನಾಚಿಕೆಯಿಲ್ಲದೆ ಪ್ರದರ್ಶಿಸುತ್ತಿದ್ದೀರಿ. ಈ ದೇಶದ ಹೆಣ್ಣು ಮಕ್ಕಳು ನಿಮ್ಮನ್ನೆಂದು ಕ್ಷಮಿಸುವುದಿಲ್ಲ ಎಂದು ಕಂಗನಾ, ಸಂಜಯ್ ರಾವತ್ ಗೆ ತಿಳಿಸಿದ್ದಾರೆ.
‘ಆಕೆ ಮುಂಬೈಗೆ ಹಿಂದಿರುಗಿದ ನಂತರ ತನ್ನ ಟೀಕೆಗಳಿಗೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ‘ ಎಂಬ ಸಂಜಯ್ ರಾವತ್ ಎಚ್ಚರಿಕೆಗೆ ಉತ್ತರಿಸಿದ ನಟಿ. “ನಿಮ್ಮ ಜನರು ನನಗೆ ಬೆದರಿಕೆ ಹಾಕುತ್ತಿದ್ದಾರೆ, ಆದರೂ ನಾನು ಸೆಪ್ಟೆಂಬರ್ 9ರಂದು ಮುಂಬೈಗೆ ಬರುತ್ತೇನೆ’ ಎಂದು ಹೇಳಿದರು.
ಗುರುವಾರ ಕಂಗನಾ ತಮ್ಮ ಟ್ವೀಟ್ ನಲ್ಲಿ, ಮುಂಬೈ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ನಾನು ಮುಂಬೈಯ ಡ್ರಗ್ ಮಾಫಿಯಾ, ಚಲನ ಚಿತ್ರ ಮಾಫಿಯಾ ದಂಧೆ ಬಗ್ಗೆ ಮಾತನಾಡಿದ್ದೇನೆ, ನನಗೆ ಮುಂಬೈ ಪೊಲೀಸರ ಬಗ್ಗೆ ನಂಬಿಕೆಯಿಲ್ಲ. ತನ್ನನ್ನು ಸಾಯಿಸಲು ನೋಡುತ್ತಿದ್ದಾರೆ. ಸುಶಾಂತ್ ಸಿಂಗ್ ಹೇಳಿದ್ದರೂ ಪೊಲೀಸರು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನನಗೆ ಅಸುರಕ್ಷತೆ ಎನಿಸಿದರೆ ಅದರರ್ಥ ಬಾಲಿವುಡ್, ಮುಂಬೈಯನ್ನು ದ್ವೇಷ ಮಾಡುತ್ತೇನೆಂದೇ ಎಂದು ಕಂಗನಾ ಟ್ವೀಟ್ ನಲ್ಲಿ ಕೇಳಿದ್ದರು.
ತದನಂತರ ಮುಂಬೈಯನ್ನು ಮಿನಿ ಪಾಕಿಸ್ತಾನ ಎಂದು ಹೇಳಿರುವ ನಟಿ ಕಂಗನಾ ರಣಾವತ್ ಮಹಾರಾಷ್ಟ್ರದ ಜನತೆಯ ಮುಂದೆ ಕ್ಷಮೆಯಾಚಿಸಿದರೆ. ನಾನು ಕೂಡ ಆಕೆಯ ಕ್ಷಮೆ ಕೇಳುತ್ತೇನೆ ಎಂದು ಶಿವಸೇನೆ ಪಕ್ಷದ ನಾಯಕ ಸಂಜಯ್ ರಾವತ್ ಪ್ರತಿಕ್ರಿಯೆ ನೀಡಿದ್ದರು.