ಮುಸ್ಸಂಜೇಲಿ ಕಡಲಂಚಿನ ಕಲ್ಲು ಬೆಂಚಿಗೊರಗಿ ಒಂಟಿಯಾಗಿ ಅದೇನೋ ಯೋಚನೆಯಲ್ಲಿದ್ದೇನೆ. ನೆನಪಿನ ಲೋಕದ ಕದ ತೆರೆದರೆ, ಯಾರೊಂದಿಗೂ ಹಂಚಿಕೊಳ್ಳಲಾಗದ ಸಾವಿರ ನೆನಪುಗಳಿವೆ ಅಲ್ಲಿ. ಆ ನೆನಪುಗಳ ರಾಶಿಯ ತುಂಬೆಲ್ಲಾ ನೀನೇ ತುಂಬಿಕೊಂಡಿದ್ದೀಯ. ಬರೀ ನೀನು…
ಕಡಲ ರಾಶಿಯಿಂದ ಎದ್ದು ನನ್ನೆಡೆಗೆ ಬರುತ್ತಿರುವ ಅಲೆಗಳು, ಎದೆಯೊಳಗಿನ ಭಾವನೆಗಳ ಹೊಯ್ದಾಟಕ್ಕೆ ಹೆಚ್ಚುತ್ತಿರುವ ಹೃದಯ ಬಡಿತ… ಎರಡರ ಅಬ್ಬರವೂ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಮನಸ್ಸು ಮತ್ತೆ ಕಾಲೇಜು ದಿನಗಳತ್ತ ಓಡುತ್ತಲಿದೆ…
ಅನಿಯಂತ್ರಿತವಾಗಿ ಬಿರಿಯುತ್ತಿದ್ದ ಒಲವ ಗುಲಾಬಿಯನ್ನು ಬಿರಿಯಗೊಡದೆ ನಾನು ಅನುಭವಿಸಿದ ನೋವು, ನನ್ನ ಪರಿಸ್ಥಿತಿ ನೋಡಿ ಗಾಬರಿಯಾದ ಗೆಳೆಯರು ಹುಡುಗಿ ಯಾರೆಂದು ಹರಸಾಹಸ ಪಟ್ಟಿದ್ದು, ನಿನ್ನ ಕಣ್ತಪ್ಪಿಸಲು ದಿನವೂ ಕಷ್ಟಪಡುತ್ತಿದ್ದ ನಾನು… ಏನೇನೆಲ್ಲಾ ಇವೆ ನೆನಪ ಬುಟ್ಟಿಯೊಳಗೆ.
ನಿನ್ನನ್ನು ನೇರವಾಗಿ ದಿಟ್ಟಿಸುವ ಧೈರ್ಯವಿಲ್ಲದೇ ಕಣ್ಣಕೊನೆಯಲ್ಲೇ ದಿನವೂ ನಿನ್ನನ್ನು ಗಮನಿಸುತ್ತಿದ್ದೆ. ಅಚಾನಕ್ಕಾಗಿ ನೀನು ನನ್ನೆಡೆಗೆ ನೋಡಿದಾಗ, ಮುಖ ತಿರುಗಿಸಿಬಿಡುತ್ತಿದ್ದೆ. ಉಹೂಂ, ಕಣ್ಣಲ್ಲಿ ಕಣ್ಣಿಡುವಷ್ಟು ಎದೆಗಾರಿಕೆ ಇರಲಿಲ್ಲ. ನಿನ್ನ ನೋಟದ ತೀಕ್ಷ್ಣತೆಗೆ ಮೂಛೆì ಹೋದೇನೆಂಬ ಭಯ! ಹೃದಯದಾಳದ ನವಿರಾದ ಭಾವತಂತುಗಳ ಮೀಟುವಿಕೆ ನಿನಗೆ ಕೇಳಿಸಿಬಿಟ್ಟರೆ? ಹಾಗಾಗಿಯೇ, ಅದುಮಿಟ್ಟ ಭಾವಗಳನ್ನು ಮರೆಮಾಚಲು ನಿನ್ನಿಂದ ಕಣ್ತಪ್ಪಿಸಿಕೊಳ್ಳುತ್ತಿದ್ದೆ.
ಯಾಕಂದ್ರೆ, ಈ ಪ್ರೀತಿಯ ಸಸಿ ಮರವಾಗಿ ಬೆಳೆದು, ಫಲ ಕೊಡುವುದಿಲ್ಲ ಎಂಬ ಅರಿವು ನನಗಿತ್ತು. ಆದರೂ ಅದ್ಯಾಕೋ ನಿನ್ನ ಕಣ್ಣೋಟದಲ್ಲಿ, ಎದೆ ಮೀಟುವ ಉತ್ಕಟ ಒಲವಿನ ಸೆಳೆತವಿತ್ತು. ತರಗತಿಯೊಳಗೆ ಹೆಜ್ಜೆಯಿಟ್ಟ ಕೂಡಲೇ ನಿನ್ನ ಮುಖ ಕಂಡರೆ, ನಿನ್ನ ಧ್ವನಿ ಕಿವಿಗೆ ಬಿದ್ದರೆ ಮನಸ್ಸಿಗೆ ಅದೇನೋ ತೃಪ್ತಿ. ಮರುಕ್ಷಣವೇ, ಸಮಾಜದ ನೂರಾರು ಕಟ್ಟಳೆಗಳ ಅರಿವಿದ್ದ ಮನಸ್ಸು, ಬುದ್ಧಿ ಎಚ್ಚೆತ್ತುಕೊಳ್ಳುತ್ತಿತ್ತು. ಎಳೆ ಚಿಗುರನ್ನು ಹೆಮ್ಮರವಾಗುವ ಮೊದಲೇ ಚಿವುಟಬೇಕೆಂಬ ಅರಿವಾಗಿ, ಒಲವ ಹೂವು ಅರಳುವ ಮುನ್ನವೇ ಹೃದಯದ ಕದ ಮುಚ್ಚಿಬಿಡುತ್ತಿದ್ದೆ.
ಬೇಡ, ಈ ಸಲಿಗೆ ಬೇಡ. ಪ್ರೀತಿ-ಪ್ರೇಮದ ಹುಚ್ಚಾಟಕ್ಕೆ ನನ್ನೊಂದಿಗೆ ಇರುವ ಉಸಿರುಗಳ ಬಲಿ ಕೊಡಲಾರೆ ಅಂತ ಗಟ್ಟಿ ಮನಸ್ಸು ಮಾಡಿ, ನಿರ್ಭಾವುಕನಾಗಿ ಎದೆಯೊಳಗೆ ಹಾರುತ್ತಿದ್ದ ಪತಂಗದ ರೆಕ್ಕೆ ಕತ್ತರಿಸಿದ್ದೆ. ಒಡಲಾಳದಲಿ ಹುಟ್ಟಿದ ಭಾವಗಳನ್ನೆಲ್ಲಾ ಕೈಯಾರೆ ಉಸಿರುಗಟ್ಟಿಸಿ, ನಿರ್ಲಿಪ್ತನಾಗಿ ನಡೆದು ಬಂದಿದ್ದೆ.
ಇದೆಲ್ಲಾ ನಡೆದು ಎಷ್ಟೋ ವರ್ಷಗಳಾಗಿವೆ. ಆದರೂ, ನಿನ್ನನ್ನು ಮರೆಯುವುದು ಸಾಧ್ಯವಾಗಿಲ್ಲ. ಹಳೆಯ ನೆನಪುಗಳೆಲ್ಲ ಹಳೆಯ ಗಾಯಗಳಂತೆ, ಹಿತವಾದ ನೋವು ನೀಡುತ್ತಿವೆ. ಆ ನೋವಿನಲ್ಲೇ ಒಂಥರಾ ಸುಖವಿದೆ…
-ಲಕ್ಷ್ಮೀಕಾಂತ್ ಎಲ್.ವಿ.