Advertisement
ಕಂಪ್ಲಿ ಭಾಗದಲ್ಲಿ ನಾಟಿ ಮಾಡಿರುವ ಹಿಂಗಾರು ಭತ್ತದ ಬೆಳೆಯು ತೆನೆ ಕಟ್ಟಿಕೊಳ್ಳುವ ಹಂತದಲ್ಲಿದೆ. ಈ ಸಮಯದಲ್ಲಿ ಬೆಳೆಗೆ ನೀರು ಹರಿಸುವುದು ಅಗತ್ಯವಾಗಿದೆ. ಆದರೆ ಮಾ.30ರಿಂದ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ತಾಲೂಕಿನ ಬೆಳಗೋಡು ಹಾಳು, ದೇವಸಮುದ್ರ, ಮೆಟ್ರಿ, ದೇವಲಾಪುರ ಹಂಪಾದೇವನಹಳ್ಳಿ ಭಾಗಗಳಲ್ಲಿ ರೈತರು ತಮ್ಮ ಭತ್ತದ ಬೆಳೆಯನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರನ್ನು ಹರಿಸಲು ಮುಂದಾಗಿದ್ದಾರೆ.
ಕಂಪ್ಲಿ, ಕುರುಗೋಡು, ಕೋಳೂರು ವ್ಯಾಪ್ತಿಯಲ್ಲಿ ಕಾಲುವೆ ನೀರು ಆಧರಿಸಿ ಸುಮಾರು 80 ಸಾವಿರ ಎಕರೆಯಲ್ಲಿ ರೈತರು
ಭತ್ತ ಬೆಳೆಯಲಾಗಿದೆ. ಕಾಲುವೆಗೆ ನೀರು ಸ್ಥಗಿತಗೊಳಿಸದ ನಂತರ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ನೀರು ಹರಿಸುವಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಲುವೆಗೆ ನೀರು ಬಿಡದಿದ್ದರೆ ಅಂದಾಜು 600 ರಿಂದ 700 ಕೋಟಿ ರೂ. ನಷ್ಟ ಸಂಭವಿಸಲಿದೆ ಎಂದು ಅಂದಾಜಿಸಲಾಗಿದೆ. ಕೆಲವರು ಕೊಳವೆಬಾವಿ ಅವಲಂಭಿಸಿ ಭತ್ತ ನಾಟಿ ಮಾಡಿದ್ದಾರೆ. ಆದರೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ರೈತರು ಜನರೇಟರ್ ಬಾಡಿಗೆಗೆ ಪಡೆದು ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಒಂದು ತಿಂಗಳು ಕಾಲುವೆಗೆ ನೀರು ತಡವಾಗಿ ಪೂರೈಸಿದ್ದರಿಂದ ಭತ್ತದ ಬೆಳೆಗೆ ಸಕಾಲಕ್ಕೆ ನೀರು ಸಿಗದೆ ರೈತರು ತೊಂದರೆ ಅನುಭವಿಸುವಂತಾಯಿತು. ಇದೀಗ ಮತ್ತೆ ಹಿಂಗಾರಿನಲ್ಲಿ ನೀರು ಸ್ಥಗಿತಗೊಳಿಸಿದ್ದರಿಂದ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕನಿಷ್ಠ 10 ದಿನಗಳಾದರೂ ಕಾಲುವೆಗೆ ಹಾಗೂ ವಿತರಣಾ ನಾಲೆಗಳಿಗೆ ನೀರು ಹರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.