Advertisement

ನಿನಗೆ ನೀನೇ ಸೈನಾ

02:33 PM Apr 24, 2018 | |

ಬ್ಯಾಡ್ಮಿಂಟನ್‌ ಆಟಗಾರ್ತಿಯರ ಪಾಲಿಗೆ 28 ಎಂಬುದು ನಿವೃತ್ತಿಯ ವಯಸ್ಸು. ಅಂಥ ವಯಸ್ಸಿನಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಟಿನ್ನದ ಪದಕ ಗೆದ್ದವಳು ಸೈನಾ ನೆಹ್ವಾಲ್‌, ಕ್ರೀಡಾಕೂಟ ಆರಂಭಕ್ಕೂ ಮೊದಲು ಕೇಳಿಬಂದ ಟೀಕೆಗಳು, ಜೊತೆಯಾದ ಕಷ್ಟಗಳು, ಅವುಗಳನ್ನು ಮೆಟ್ಟಿ ನಿಂತ ಬಗೆಯ ವಿವರ ಇಲ್ಲಿದೆ. ಬದುಕೆಂಬ ಕ್ರೀಡಾಂಗಣದಲ್ಲಿ ಎದುರಾಗುವ ಸವಾಲುಗಳಿಗೆ ಇದು ಸ್ಪೂರ್ತಿಯಾಗಬಹುದು…

Advertisement

“ಅವತ್ತು 2018, ಜನವರಿ 1- ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಸಂಕಲ್ಪವೆಂದು, ನನಗೆ ನಾನೇ ಹೇಳಿಕೊಂಡೆ: ಈ ವರ್ಷ ನಾನು ಹೆಚ್ಚು ಪ್ರಶಸ್ತಿ ಗೆಲ್ಲಬೇಕು. ಆದರೆ, ನಾವು ಅಂದುಕೊಂಡಂತೆಯೇ ಎಲ್ಲವೂ ನಡೆಯುವುದಿಲ್ಲ ಎಂಬ ಕಟುಸತ್ಯವನ್ನೂ ಇಷ್ಟು ವರ್ಷಗಳ ಬದುಕು ನನಗೆ ಕಲಿಸಿತ್ತು. ಆ ವೇಳೆಗಾಗಲೇ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯಲಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಬ್ಯಾಡ್ಮಿಂಟನ್‌ ತಂಡ ಹೋಗುವುದು ಖಚಿತವಾಗಿತ್ತು.

“ಒಂದಷ್ಟು ಪದಕಗಳು ಬರುತ್ತವೆ. ಆದರೆ ಇಂತಿಂಥವರೇ ಗೆಲ್ಲುತ್ತಾರೆಂದು ಖಡಕ್‌ ಆಗಿ ಹೇಳಲಾಗದು’ ಎಂಬುದೇ ಎಲ್ಲರ ಮಾತಾಗಿತ್ತು. ಹೀಗಿರುವಾಗಲೇ ಒಂದಷ್ಟು ಜನ ನನಗೆ ಕೇಳಿಸುವಂತೆಯೇ ಮಾತಾಡಿಕೊಂಡರು: “ಹಳೇ ಕಥೇನ ಬಿಟಾØಕಿ. ಅದೆಲ್ಲಾ ಒಂದು ಮಿರಾಕಲ್‌ ಥರಾ ನಡೆದುಹೋಯ್ತು. ಈಗ ಎದುರಾಗುತ್ತೆ ನೋಡಿ; ಅದು ನಿಜವಾದ ಛಾಲೆಂಜು. ಏನೇ ಹೇಳಿ: ಈ ಬಾರಿ ಸೈನಾ ಗೆಲ್ಲೋದು ಕಷ್ಟ. ಮುಖ್ಯವಾಗಿ ಆಕೆಗೆ ವಯಸ್ಸಾಯ್ತು.

ಪದೇಪದೆ ಜೊತೆಯಾಗುವ ಗಾಯದ ಸಮಸ್ಯೆ, ಕಿರಿಯರಿಂದ ಎದುರಾಗುವ ಸವಾಲುಗಳು ಆಕೆಯನ್ನು ಮಾನಸಿಕವಾಗಿ ಹೈರಾಣಾಗಿಸಿವೆ. ಎಂಟು ವರ್ಷಗಳ ಹಿಂದೆ ಆಕೆಯ ದೇಹ ಸ್ಪ್ರಿಂಗ್‌ನ ಥರಾ ಪುಟಿಯುತ್ತಿತ್ತು. ಈಗ ಖಂಡಿತ ಅಂಥಾ ಪರಿಸ್ಥಿತಿಯಿಲ್ಲ. ಈಗೇನಿದ್ರೂ ಸಿಂಧೂದೇ ಆಟ ಅನ್ಸುತ್ತೆ…’ ಊಹುಂ, ಈ ಬಗೆಯ ಮಾತುಗಳಿಗೆಲ್ಲ ತಲೆಕೆಡಿಸಿಕೊಳ್ಳಬಾರದು ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ.

ಆದರೂ, ಏಕಾಗ್ರತೆ ಸಾಧಿಸಲು ಆಗುತ್ತಿರಲಿಲ್ಲ. ಹೀಗಿದ್ದಾಗಲೇ, ಆಗಿರುವ ಗಾಯಕ್ಕೆ ಉಪ್ಪು ಸವರುವ ರೀತಿಯಲ್ಲಿ ಪತ್ರಿಕೆಗಳಲ್ಲಿ ಹೊಸದೊಂದು ಸುದ್ದಿ ಕಾಣಿಸಿಕೊಂಡಿತು. “ಸೈನಾ ನೆಹ್ವಾಲ್‌ಗಿಂತ ಸಿಂಧು ಮೇಲೆ ಹೆಚ್ಚು ಭರವಸೆ ಇಡಬಹುದು. ನನ್ನ ಪ್ರಕಾರ- ಸೈನಾಳನ್ನು ಸೋಲಿಸುವುದು ಸುಲಭ. ಸಿಂಧೂ ವಿರುದ್ಧ ಗೆಲ್ಲುವುದು ಕಷ್ಟ!’- ಈ ಹೇಳಿಕೆ ನೀಡಿದ್ದವಳು ಚೀನಾದ ತಾಯ್‌ ಝಿ ಇಂಗ್‌. ಈಕೆ, ವಿಶ್ವದ ನಂಬರ್‌ ಒನ್‌ ಬ್ಯಾಡ್ಮಿಂಟನ್‌ ಆಟಗಾರ್ತಿ.

Advertisement

ಅಲ್ಲಿಗೆ, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸೈನಾ ನೆಹ್ವಾಲ್‌ ಎಂಬ ಹೆಸರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಈ ಜನ ತಾವೇ ನಿರ್ಧರಿಸಿಬಿಟ್ಟಿದ್ದರು. ಈ ಕಾರಣಗಳಿಂದಲೇ ನಾನು ಮಾನಸಿಕವಾಗಿ ಹಣ್ಣಾಗಿದ್ದೆ. ಹದಿನೈದು ನಿಮಿಷ ಆಡುವ ವೇಳೆಗೆ ಕಾಲುಗಳಲ್ಲಿ ನಡುಕ ಶುರುವಾಗುತ್ತಿತ್ತು. ಅದನ್ನು ಗಮನಿಸಿ, ನನ್ನ ಕೋಚ್‌ ಗೋಪಿಚಂದ್‌ ಹೇಳಿದ್ದರು: “ಯಾರೊಬ್ಬರ ಮಾತಿಗೂ ತಲೆಕೆಡಿಸ್ಕೋ ಬೇಡ. ಒಂದೊಂದೇ ಮ್ಯಾಚ್‌ ಗೆಲ್ಲಬೇಕು ಎಂಬುದಷ್ಟೇ ನಿನ್ನ ಗುರಿಯಾಗಲಿ…’ ಅವರ ಮಾತುಗಳನ್ನು ಮತ್ತೆಮತ್ತೆ ನೆನಪು ಮಾಡಿಕೊಳ್ಳುತ್ತಲೇ ದೇವರಲ್ಲಿ ಮೊರೆಯಿಟ್ಟೆ: ಭಗವಂತಾ, ನನಗೆ ಶಕ್ತಿ ಕೊಡು…
* * * * *
ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ, ಪದಕ ಗೆಲ್ಲಲು ಪ್ರಯತ್ನಿಸಬೇಕು ಎಂಬುದಷ್ಟೇ ಎಲ್ಲಾ ಕ್ರೀಡಾಪಟುಗಳ ಆಸೆಯಾಗಿತ್ತು. ಆದರೆ ಗೆಲ್ಲಲೇಬೇಕು ಎಂಬ ಒತ್ತಡ ಇರಲಿಲ್ಲ. ಹೆಚ್ಚಿನ ನಿರೀಕ್ಷೆಗಳು ಇಲ್ಲದಿದ್ದಾಗ ಆಡುವುದು ಸುಲಭ. ನನ್ನ ವಿಷಯದಲ್ಲೂ ಹೀಗೇ ಆಯಿತು; ಸೈನಾಗೆ ಈಗಾಗ್ಲೆ 28 ವರ್ಷ ಆಗೋಗಿದೆ. ಕ್ರೀಡಾಪಟುವಿಗೆ, ಅದರಲ್ಲೂ ಬ್ಯಾಡ್ಮಿಂಟನ್‌ ಆಟಗಾರರಿಗೆ ಇದು ನಿವೃತ್ತಿಯ ವಯಸ್ಸು.

ಮೊನ್ನೆಯವರೆಗೂ ಆಕೆ ಬೆಂಗಳೂರಿನ ವಿಮಲ್‌ಕುಮಾರ್‌ ಬಳಿ ತರಬೇತಿ ಪಡೀತಿದು. ಈಗ ಗೋಪಿಚಂದ್‌ ಗ್ರೂಪ್‌ ಸೇರಿದ್ದಾಳೆ. ಇದು ಕೂಡ ಆಕೆಯ ಆಟದ ಮೇಲೆ ಪರಿಣಾಮ ಬೀರುತ್ತೆ. ಆಕೆ ಐದು ಮ್ಯಾಚ್‌ ಗೆಲ್ಲಬಹುದು. ಆರನೇ ಅಥವಾ ಏಳನೇ ಮ್ಯಾಚ್‌ನಲ್ಲಿ ಸೋತುಹೋಗ್ತಾರೆ ಎಂದು ಹಲವರು ಭವಿಷ್ಯ ಹೇಳಿದ್ದರು. ಈ “ಅವಸರದ ಜ್ಯೋತಿಷಿ’ಗಳನ್ನು ಸೋಲಿಸುವುದಕ್ಕಾದರೂ ನಾನು ಗೆಲ್ಲಲೇಬೇಕು ಎಂದು ನಿರ್ಧರಿಸಿದ್ದೆ.

ಒಂದರ ಹಿಂದೊಂದರಂತೆ 6 ಮ್ಯಾಚ್‌ಗಳಲ್ಲಿ ಗೆದ್ದಾಗ, ಇನ್ನೂ 6 ಮ್ಯಾಚ್‌ಗಳನ್ನು ಆಡಿದರೂ ಗೆಲ್ಲಬಲ್ಲೆ ಎಂಬ ಆತ್ಮವಿಶ್ವಾಸ ಜೊತೆಯಾಯಿತು. ಕಡೆಗೆ ಏನಾಯಿತೆಂದರೆ- ಒಂದೂ ಮ್ಯಾಚ್‌ ಸೋಲದೆ ನಾನು ಫೈನಲ್‌ ತಲುಪಿದೆ. ಎದುರಾಳಿಯಾಗಿ, ನನ್ನದೇ ಊರಿನ ಸಿಂಧು ಇದ್ದಳು. ನಮ್ಮಿಬ್ಬರಿಗೂ ಕೋಚ್‌ ಆಗಿದ್ದವರು ಪಿ. ಗೋಪಿಚಂದ್‌. ಒಬ್ಬನೇ ಗುರುವಿನ ಬಳಿ ಕಲಿತಾಗ ಪರಸ್ಪರರ ಶಕ್ತಿ- ದೌರ್ಬಲ್ಯಗಳು ಇಬ್ಬರಿಗೂ ಗೊತ್ತಿರುತ್ತವೆ.

ಎಲ್ಲರಿಗೂ ಗೊತ್ತಿರುವಂತೆ, ಸಿಂಧೂ ನನಗಿಂತ ಚಿಕ್ಕವಳು, ನನಗಿಂತ ಉದ್ದವಿದ್ದಳು. ಅದೇ ಕಾರಣದಿಂದ ಅಂಗಳದ ಉದ್ದಕ್ಕೂ ಜಿಂಕೆಯಂತೆ ಓಡಾಡುವ ಶಕ್ತಿ ಆಕೆಗಿತ್ತು. ಮಿಗಿಲಾಗಿ, ಎತ್ತರದ ಕಾರಣದಿಂದಾಗಿ ಶಾಟ್‌ ಹೊಡೆಯುವುದು, ಡ್ರಾಪ್‌ ಹಾಕುವುದು ಆಕೆಗೆ ಸುಲಭವಾಗಿತ್ತು. ಈ ವಿಷಯದಲ್ಲಿ ಆಕೆಯನ್ನು ಹಿಮ್ಮೆಟ್ಟಿಸಲು ಏನಾದರೂ ಪ್ಲಾನ್‌ ಮಾಡಿಕೊಳ್ಳಬೇಕು ಅಂದುಕೊಂಡೆ.

ಖ್ಯಾತ ಟೆನಿಸ್‌ ಆಟಗಾರ ರೋಜರ್‌ ಫೆಡರರ್‌ ಹೇಳಿದ್ದಾರೆ: “ಯಾವುದೇ ಮಹತ್ವದ ಪಂದ್ಯಕ್ಕೂ ಮೊದಲು 10- 12 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಬೇಕು. ಆಗ ದೇಹ ಫ್ರೆಶ್‌ ಆಗುತ್ತದೆ. ದೇಹದ ಕಣಕಣವೂ ಆಟದ ಕುರಿತೇ ಯೋಚಿಸುತ್ತಿರುತ್ತದೆ ಅಲ್ಲವೆ? ಅದೇ ಕಾರಣದಿಂದ ಕೆಲವೊಮ್ಮೆ, ಹೇಗೆ ಆಡಿದರೆ ಮ್ಯಾಚ್‌ ಗೆಲ್ಲಬಹುದು ಎಂಬ ಸೂಚನೆ ಕನಸಿನಲ್ಲೂ ಸಿಗುವ ಸಾಧ್ಯತೆಯುಂಟು!’

“ಫೆಡರರ್‌ರ ಮಾತುಗಳನ್ನು ಫಾಲೋ ಮಾಡಬೇಕು. ಚೆನ್ನಾಗಿ ನಿದ್ರೆ ಮಾಡಬೇಕು. ಅಕಸ್ಮಾತ್‌ ಆಗಲೇ ಮ್ಯಾಚ್‌ಗೆ ಸಂಬಂಧಿಸಿದ ಕನಸು ಬಿದ್ದರೆ, ಅದನ್ನೇ ಪಾಯಿಂಟ್‌ ಬೈ ಪಾಯಿಂಟ್‌ ನೆನಪಿಟ್ಟುಕೊಳ್ಳಬೇಕು. ಆನಂತರ ಅರ್ಧ ಗಂಟೆ ಧ್ಯಾನ ಮಾಡಿ ಫೈನಲ್‌ ಪಂದ್ಯ ಆಡಲು ಹೋಗಬೇಕು’ – ಇದಿಷ್ಟೂ ನನಗೆ ನಾನೇ ಹೇಳಿಕೊಂಡ ಮಾತಾಗಿತ್ತು. ಆದರೆ ನಾನು ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ.

ಏಕೆಂದರೆ, ಐಡಿ ಕಾರ್ಡ್‌ ಮರೆತು ಬಂದಿದ್ದಾರೆ ಎಂಬ ಕಾರಣ ನೀಡಿ ನಮ್ಮ ತಂದೆಯನ್ನು ಕಾಮನ್‌ವೆಲ್ತ್‌ ಕ್ರೀಡಾಗ್ರಾಮದ ಆಚೆಯೇ ನಿಲ್ಲಿಸಲಾಗಿತ್ತು. “ನಾನು ಸೈನಾ ನೆಹ್ವಾಲ್‌ಳ ತಂದೆ. ನನ್ನ ಮಗಳು ಫೈನಲ್‌ ಪಂದ್ಯದಲ್ಲಿ ಆಡಲಿದ್ದಾಳೆ. ದಯಟ್ಟು ಒಳಗೆ ಕಳಿಸಿ’ ಎಂದು ಅಪ್ಪ ಎಷ್ಟೇ ಬೇಡಿಕೊಂಡರೂ ಅಧಿಕಾರಿಗಳು ಕರಗಲಿಲ್ಲ. ಪರಿಣಾಮ, ಅಪ್ಪ ಕ್ರೀಡಾಗ್ರಾಮದ ಹೊರಗೇ ಎರಡು ದಿನಗಳನ್ನು ಕಳೆಯಬೇಕಾಗಿ ಬಂದಿತ್ತು.

ಅಪ್ಪ ದಿಕ್ಕುತೋಚದೆ, ಏಕಾಂಗಿಯಾಗಿ ಕುಳಿತಿದ್ದಾರೆ ಎಂದು ಗೊತ್ತಾದ ನಂತರ ನಾನು ನಿಶ್ಚಿಂತೆಯಿಂದ ನಿದ್ರಿಸುವುದು ಹೇಗೆ? ಕಣ್ಮುಚ್ಚಿದರೆ ಸಾಕು; ಅಪ್ಪನ ಮೇಲೆ ಯಾರೋ ದಾಳಿ ಮಾಡಿದಂತೆ, ಅಪ್ಪ ಕೂಗಿದಂತೆ, ದಿಕ್ಕು ತಪ್ಪಿ ಅಲೆಯುತ್ತಿರುವಂತೆ ಭಾಸವಾಗುತ್ತಿತ್ತು. ಆ ಕ್ಷಣದಲ್ಲಿ, ಈ ಪಂದ್ಯಕ್ಕಿಂತ ಅಪ್ಪನೇ ಮುಖ್ಯ ಅನ್ನಿಸಿಬಿಡು. ನಿದ್ರೆ ಹತ್ತಿರ ಸುಳಿಯಲಿಲ್ಲ. ಛೇ, ಅಪ್ಪನಿಗೆ ಹೀಗಾಗಿಬಿಡ್ತಲ್ಲ ಎಂಬ ಯೋಚನೆಯಲ್ಲಿ ಜಾಗರಣೆಯೊಂದಿಗೇ ಎರಡು ದಿನಗಳು ಕಳೆದುಹೋದವು.

ಮರುದಿನ ನಡೆದದ್ದೇ ಫೈನಲ್‌ ಪಂದ್ಯ. ಅಂಗಳಕ್ಕೆ ಇಳಿವ ಮೊದಲು ಯೋಚಿಸಿದೆ. ಇವತ್ತು ಅಮ್ಮ ಟಿ.ವಿ. ಮುಂದೆ ಕೂತಿರ್ತಾಳೆ. ಅಪ್ಪ, ಎಲ್ಲ ಅವಮಾನ ಮರೆತು ನನ್ನ ಗೆಲುವಿಗಾಗಿ ಪ್ರಾರ್ಥಿಸಿರ್ತಾರೆ. ನನಗೆ ನೌಕರಿ ಕೊಟ್ಟಿರುವ ಭಾರತ್‌ ಪೆಟ್ರೋಲಿಯಂ ಸಂಸ್ಥೆ, ಮುಂಚಿತವಾಗಿಯೇ- ಕಂಗ್ರಾಟ್ಸ್‌ ಸೈನಾ ನೆಹ್ವಾಲ್‌ ಎಂಬ ಬ್ಯಾನರ್‌ಗಳನ್ನು ರೆಡಿ ಮಾಡಿಸಿರುತ್ತೆ. ಅಭಿಮಾನಿಗಳು, ಕ್ರೀಡಾಪ್ರೇಮಿಗಳು ಖಂಡಿತ ಒಂದು ನಿರೀಕ್ಷೆ ಇಟ್ಟಿರ್ತಾರೆ. ಅಕಸ್ಮಾತ್‌ ನಾನು ಸೋತು ಹೋದ್ರೆ ಇವರೆಲ್ಲರ ಮನಸ್ಸಿಗೂ ನೋವುಂಟು ಮಾಡಿದ ಹಾಗಾಗುತ್ತೆ. ನೋ, ಹಾಗಾಗಬಾರದು…

ಹೀಗೊಂದು ಯೋಚನೆ ಜೊತೆಯಾದ ನಂತರ, ಅದೆಷ್ಟೇ ಆಯಾಸವಾದರೂ ಸರಿ, ಕಡೆಯ ಕ್ಷಣದವರೆಗೂ ಹೋರಾಡಬೇಕು. ಸಿಂಧು, ನನಗಿಂತ ಚಿಕ್ಕವಳು. ನನಗಿಂತ ಶಕ್ತಿವಂತಳು ನಿಜ. ಆಕೆ ಉದ್ದಕ್ಕಿರುವ ಕಾರಣದಿಂದ ಗೆಲುವಿನ ಅವಕಾಶ ಆಕೆಗೆ ಹೆಚ್ಚಿರುವುದೂ ನಿಜ. ಆದರೆ, ಸುದೀರ್ಘ‌ ಅವಧಿ ಆಟವಾಡಿದರೆ ಖಂಡಿತ ಆಕೆ ಸುಸ್ತಾಗುತ್ತಾಳೆ. ಯಾವುದೇ ವ್ಯಕ್ತಿ, ಸುಸ್ತಾದಾಗ ಸಹಜವಾಗಿಯೇ ಮುಗ್ಗರಿಸುತ್ತಾನೆ. ತಪ್ಪು ಮಾಡುತ್ತಾನೆ. ಅಂಥದೇ ಸವಾಲು “ಸೃಷ್ಟಿಸಿ’ ನಾನು ಗೆಲ್ಲಬೇಕು ಅಂದುಕೊಂಡೆ ಮತ್ತು, ಕಡೆಗೂ ನಾನೇ ಗೆದ್ದೆ … 
* * * * *
ಈಗ, ನಮ್ಮ ಬದುಕನ್ನು ಒಮ್ಮೆ ಸೈನಾಳ ಆಟದೊಂದಿಗೆ ಹೋಲಿಸಿಕೊಂಡು ನೋಡೋಣ. ಯಾವುದೇ ಒಂದು ಹೊಸ ಕೆಲಸ/ಸಾಹಸ ಮಾಡಲೆಂದು ನಾವೂ ಹೊರಡುತ್ತೇವೆ. ಆರಂಭದಲ್ಲೇ ಅಂಜಿಕೆಯಾಗುತ್ತದೆ. ಕೆಲಸ ಅರ್ಧವಾಗಿದ್ದಾಗ ಆರೋಗ್ಯ ಸಮಸ್ಯೆ ಅಥವಾ ಹಣಕಾಸಿನ ತೊಂದರೆ ಜೊತೆಯಾಗುತ್ತದೆ. ಅಥವಾ ನಮ್ಮ ಪರಮಾಪ್ತನೇ ಪ್ರತಿಸ್ಪರ್ಧಿಯಾಗುತ್ತಾನೆ.

ನೀವು ಗೆಲ್ಲೋದಿಲ್ಲ ಎಂದು ಬೆನ್ನ ಹಿಂದೆ ಮಾತನಾಡುವ ಜನ ಹುಟ್ಟಿಕೊಳ್ಳುತ್ತಾರೆ. ಅಂಥ ಸಂದರ್ಭದಲ್ಲಿ, ಉದ್ದಕ್ಕೂ ಅಪಶಕುನಾನೆ ಆಗ್ತಿದೆಯಲ್ಲ; ಇಲ್ಲಿ ಗೆಲುವು ಸಿಗೋದಿಲ್ಲ ಎಂದು ನಮಗೆ ನಾವೇ ಹೇಳಿಕೊಂಡು ಸಾಹಸದ ಕೆಲಸಕ್ಕೆ ಎಳ್ಳು ನೀರು ಬಿಟ್ಟು ಸುಮ್ಮನಾಗುತ್ತೇವೆ. ಇನ್ನು ಮುಂದಾದರೂ, ನಾವೂ ಸೈನಾಳ ಥರ ಯೋಚಿಸಿದರೆ, ವಯಸ್ಸಾದ ಮೇಲೂ ಒಂದು ಗೆಲುವಿನ ಗೋಲು ಹೊಡೆಯಬಹುದಲ್ಲವೆ?

ಎಮ್ಮೆ ಅಂದಿದ್ದವರೇ ಹೆಮ್ಮೆ ಅಂದರು: ಸೈನಾಳ ಮೂಲ ಹರ್ಯಾಣ. ಅಲ್ಲಿ ಮಕ್ಕಳಿಗೆ ಎಮ್ಮೆಯ ಹಾಲನ್ನು ಪೌಷ್ಠಿಕ ಆಹಾರವೆಂದು ಕೊಡುತ್ತಾರೆ. ಪ್ರತಿದಿನವೂ ಅರ್ಧ ಲೀಟರ್‌ ಹಾಲು ಕುಡಿಯುವುದು ಸೈನಾಳ ಅಭ್ಯಾಸವಾಗಿತ್ತು. ಇದನ್ನು ಗಮನಿಸಿದ ಹಲವರು, “ಹರ್ಯಾಣದ ಎಮ್ಮೆ’ ಎಂದು ಗೇಲಿ ಮಾಡುತ್ತಿದ್ದರು. ಇಂಥ ಟೀಕೆಗಳ ಕಡೆಗೆ ತಿರುಗಿ ನೋಡದೆ ಬ್ಯಾಡ್ಮಿಂಟನ್‌ ಕ್ಷೇತ್ರದ ಮಿನುಗುತಾರೆಯಾಗಿ ಬೆಳೆದು ಬಿಟ್ಟಳು ಸೈನಾ. ಈ ಹಿಂದೆ ಸೈನಾಳನ್ನು “ಹರ್ಯಾಣದ ಎಮ್ಮೆ’ ಅಂದವರೇ, “ಈ ಹುಡುಗಿ ದೇಶದ ಹೆಮ್ಮೆ’ ಎಂದು ಹಾಡಿ ಹೊಗಳುತ್ತಿದ್ದಾರೆ!   

* ಎ.ಆರ್.ಮಣಿಕಾಂತ್  

Advertisement

Udayavani is now on Telegram. Click here to join our channel and stay updated with the latest news.

Next