ಮನಸು ಮಗುಚಿ ಬಿದ್ದಾಗ ಒಬ್ಬಂಟಿಯಾಗಿ ಗೊತ್ತು ಗುರಿಯಿಲ್ಲದೇ ಹೊರಟುಬಿಡುತ್ತೇನೆ. ಬದುಕು ಸರಿದಾರಿಗೆ ಬರುತ್ತಿಲ್ಲ ಅನ್ನಿಸಿದಾಗಲೆಲ್ಲ , ಜೊತೆಗೆ ನೀನಿರಬೇಕಿತ್ತು ಅನಿಸುತ್ತದೆ. ನಿನ್ನ ಚೈತನ್ಯ ತುಂಬುವ ಮಾತಗಳನ್ನ ಕೇಳಬೇಕೆನಿಸುತ್ತದೆ. ಮಾತೇ ಆಡದೇ ಸುಮ್ಮನೆ ಅಂಗೈಯೊಳಗೆ ಅಂಗೈಯಿಟ್ಟು , ಭುಜಕ್ಕೆ ತಲೆಯಿಟ್ಟು ಮಲಗುವ ನಿನ್ನ ನಿರುಮ್ಮಳ ಉಸಿರಾಟ ನಂಗೆ ಅದೆಷ್ಟು ಕಂಪರ್ಟ್ ಕೊಡುತ್ತಿತ್ತು ಗೊತ್ತಾ?
ಎಲ್ಲವೂ ಕನಸಿನಂತೆ ಮುಗಿದುಹೋಯ್ತು.ಏಕೆ ದೂರಾದೆವೆಂದು ಕೇಳಿಕೊಂಡರೆ, ಒಬ್ಬರಿಗೊಬ್ಬರು ಏನೋ ಹುಡುಕುತ್ತಾ ಹೋಗುತ್ತೇವೆ, ಪರಿಸ್ಥಿತಿ , ಅನಿವಾರ್ಯತೆ, ಬಲವಂತ, ಭವಿಷ್ಯದ ಚಿಂತೆ, ಅಮ್ಮನ ಆರೋಗ್ಯ, ಅಪ್ಪನ ಸಿಟ್ಟು, ಅಣ್ಣನ ಕೆಂಗಣ್ಣು, ಹೀಗೆ ನಾನಾ ನೆಪಗಳು.. ಹತ್ತಾರು ಕಾರಣಗಳು ಸಿಗುತ್ತವೆ. ಅದೆಲ್ಲವನ್ನೂ ಮೀರಿ ಒಂದು ಚಂದದ ಬದುಕು ಕಟ್ಟಿಕೊಳ್ಳಬಹುದಿತ್ತು. ಅದನ್ನೆಲ್ಲಾ ನಿಂಗೆ ವಿವರಿಸಿ ಹೇಳಬೇಕೆಂದುಕೊಳ್ಳುವ ಮುಂಚೆಯೇ, ನೀನೆ ನಂಗೆ ಭರವಸೆಯ ಬೆಳಕು ತೋರುತ್ತಿದ್ದೆ. ಬಿಟ್ಟು ಹೋಗುವ ಮಾತಾಡಿಬಿಡುತ್ತಿಯೇನೋ ಅಂದುಕೊಳ್ಳುವ ಹೊತ್ತಿಗೆ . ಇನ್ನೆರಡು ವರ್ಷಗಳಲ್ಲಿ ನಮ್ಮ ಪ್ರೀತಿ ಮತ್ತಷ್ಟು ಗಟ್ಟಿಗೊಂಡಿರುತ್ತದೆ ಆಲ್ವಾ? ಅಂದು ಮೌನವಾಗುತ್ತಿದ್ದೆ.
ಅದ್ಯಾವ ಕಣ್ಣು ತಾಕಿತೋ ನಮ್ಮ ಪ್ರೀತಿಗೆ. ಅದೊಂದು ಸಂಜೆ ಬಂದವಳೇ.. ಬಿಗಿದಪ್ಪಿ. ಮುತ್ತಿನ ಮಳೆಗರೆದು. ಕಣ್ತುಂಬಿಕೊಂಡು. ಚಿನ್ನಿ, ನಾನು ಒಬ್ಬ ಸಾಮಾನ್ಯ ಹುಡುಗಿ ಕಣೋ. ನಿಂಗೆ ಮೋಸ ಮಾಡೆª ಅಂತ ಅನ್ಕೋಬೇಡ ಕಣೋ. ನಿನ್ನ ಬದುಕಿನಲ್ಲಿ ನಾನು ಯಾವಗ್ಲೂ ಒಂದು ಪುಟ್ಟ ಅಧ್ಯಾಯವಾಗಿ ಉಳ್ಕೊತೀನಿ ಕಣೋ. ಆ ನಂಬಿಕೆ ನನಗಿದೆ. ನಿಂಗೆ ತುಂಬಾ ನೋವು ಕೊಟ್ಟು ಹೋಗ್ತಾ ಇದ್ದೀನಿ. ಜೊತೆಗೆ ನಾನು ನೋವು ತುಂಬಿಕೊಂಡು ಹೋಗ್ತಾಯಿದ್ದಿನಿ. ಪ್ಲೀಸ್, ಒಂದ್ಸಾರಿ ಈ ಪಾಪಿ ಕೆನ್ನೆಗೊಂದು ಬಾರ್ಸಿಬಿಡೋ ಅಂದೆಯಲ್ಲ…
ಅಬ್ಟಾ… ಅದೆಂಥಾ ಗಳಿಗೇನೆ ಹುಡುಗಿ ಅದು. ಅದೆಷ್ಟು ಮಾತಾಡಿದೆವು ಅವತ್ತು. ಇಬ್ಬರೂ ದೂರಾಗುತ್ತಿದ್ದೆವೆಂಬುದೇ ಮರೆತು ಹೋಗುವಷ್ಟು.
ಆ ಸಂಜೆ ನಮ್ಮಿಬ್ಬರನ್ನೂ ಬೀಳ್ಕೊಡಲೆಂಬಂತೆ ಸೋನೆಮಳೆ ಬಂತು. ಯಾಕೋ ಮನಸಲ್ಲಿ ನೋವೆಂಬುದು ಕರಗಿ , ಹೊಸತೊಂದು ಹಗುರಾದ ಭಾವ ಮೂಡಿತ್ತು. ನೀ ಮತ್ತಷ್ಟು ಹತ್ತಿರಾದಂಥ ಭಾವ. ನಗುತ್ತಲೇ ಆ ಸಂಜೆಯ ಸನ್ನಿಧಿಯಲ್ಲಿ ಇಬ್ಬರೂ ನಮ್ಮ ನಮ್ಮ ದಾರಿ ತುಳಿದೆವು. ನಮ್ಮ ನಮ್ಮ ಎದೆಯಲ್ಲಿನ ಒಲವು ಒಳಗೆಲ್ಲೇ ನಮ್ಮೊಳಗೇ ಉಳಿದಂತೆ ಒಂದು ನೆಮ್ಮದಿಯ ಸಂಜೆಯನ್ನು ಕತ್ತಲು ಆವರಿಸತೊಡಗಿತು. ಮನೆಗೆ ಬಂದಾಗ ಅಮ್ಮ ಹಣತೆ ಹಚ್ಚುತ್ತಾ ನನ್ನನ್ನ ನೋಡಿ ನಕ್ಕಳು. ಆ ಬೆಳಕಲ್ಲಿ ದಿವ್ಯತೆಯಿತ್ತು. ನಾ ಯಾವತ್ತೂ ನಿನ್ನ ಮರೆಯಬೇಕೆಂದುಕೊಳ್ಳಲಿಲ್ಲ. ದ್ವೇಷಿಸುವುದು ಅಸಾಧ್ಯವಾಯಿತು. ಆದರೆ, ಜಗತ್ತಿಗೆ ಮೋಸ ಮಾಡಿದೆ ,ನಿನ್ನ ಮರೆತಂತೆ ನಾಟಕವಾಡಿದೆ. ಸುಳ್ಳೇ.. ನಿನ್ನನ್ನ ಪ್ರೀತಿಸಿದ್ದೇ ಒಂದು ಅಳಿಸಿಹೋದ ಘಟನೆಯೆಂಬಂತೆ ಮುಖವಾಡ ಧರಿಸಿದೆ.
ಹೀಗೇ ಮನಸಿನ ವಿರುದ್ಧ ಹೊರಗೆ ಹೋರಾಟ ನಡೆಸಿದ್ದಷ್ಟೂ , ಒಳಗೊಳಗೇ ನಿನಗೆ ಹತ್ತಿರವಾಗುತ್ತಲೇ ಹೋದೆ. ಎಲ್ಲರಿಗೂ ಕಾಣುವಂತೆ ಜಗತ್ತಿನ ಗೋಡೆಗೆ ರಭಸವಾಗಿ ಎಸೆದ ನೆನಪಿನ ಚಂಡು , ಯಾರಿಗೂ ಕಾಣದಂತೆ ಅಷ್ಟೇ ಬಿರುಸಿನಿಂದ ಮನಸಿನ ಅಂಗಳಕ್ಕೆ ಬಂದು ಬೀಳುತ್ತಿತ್ತು. ಇನ್ನು ನಿನ್ನಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಅನ್ನಿಸಿದಾಗ , ರಾಶಿ ರಾಶಿ ಕೆಲಸ ಮೈ ಮೇಲೆ ಹೇರಿಕೊಂಡು , ಹೊಸತೊಂದು ಜಗತ್ತಿಗೆ ಹೊರಟು ಬಿಡುತ್ತೇನೆ.
ಅಲ್ಲಿಂದ ಹೊರಬೀಳುವ ಹೊತ್ತಿಗೆ ಬಾಗಿಲಲ್ಲೇ ನಿನ್ನ ನೆನಪು ಕೈ ಚಾಚಿ ಕರೆಯುತ್ತದೆ. ನೀ ಮತ್ತೆಲ್ಲಿಗೋ ಕೈ ಹಿಡಿದು ನಡೆಸ ತೊಡಗುತ್ತೀಯ. ಇದ್ಯಾವುದೂ ಈ ಜಗತ್ತಿಗೆ ತಿಳಿಯುವುದೇ ಇಲ್ಲ.
ನೀ ಜೊತೆಗಿಲ್ಲ ಅಂತ ಯಾವತ್ತಿಗೂ ನನಗನ್ನಿಸುವುದಿಲ್ಲ.
ದೂರದಲ್ಲೇ ನಿಂತ ಹುಡುಗ
ಜೀವ ಮುಳ್ಳೂರು.