Advertisement

ನೀನೇ ನನ್ನ ಬದುಕು 

06:00 AM Jun 26, 2018 | |

ನೀ ಕನಸಿಗೆ ಬರದ ಇರುಳುಗಳು, ಮುಗಿಯದ ದೀರ್ಘ‌ ಕತ್ತಲ ಹಾದಿಯಂತೆ ಕಂಗೆಡಿಸುತ್ತವೆ. ನೀ ಎದಿರು ಬರದ ಹಗಲುಗಳು, ಅದೆಷ್ಟೋ ಸಂವತ್ಸರಗಳಿಂದ ಹಸಿರು ಕಳೆದುಕೊಂಡ ಕಳೇಬರದಂಥ ಕಾಡಿನಂತೆ ಕಾಡುತ್ತವೆ.

Advertisement

ಬೆಳದಿಂಗಳ ಪರಿಮಳವೇ, 
ಇವತ್ತು ನನ್ನೊಳಗೆ ಹರಳುಗಟ್ಟಿರುವ ಒಲವನ್ನು ನಿನ್ನೆದುರಿಗೆ ನಿವೇದಿಸದೇ ಉಳಿಯಲಾರೆ ಅನ್ನಿಸಿಬಿಟ್ಟಿದೆ. ನೀ ಎಲ್ಲೇ ಇದ್ದರೂ , ಈ ಸಂಜೆ ಮುಗುಳ್ನಗೆಯೊಂದಿಗೆ  ಹಾಜರಾಗುತ್ತೀಯೆಂದು ಒಳಮನಸು ಪದೇ ಪದೆ ಹೇಳುತ್ತಿದೆ. ಅಂಥ ಸಿಹಿಸುದ್ದಿಯನ್ನು ನಂಬದೇ ಹೇಗೆ ಉಳಿಯಲಿ ಹೇಳು? ನಿಂಗೊತ್ತಾ, ನನ್ನ ಬದುಕಿನ ಪಯಣದ ಹಾದಿ ನಿನ್ನಿಂದ ಬದಲಾಯಿತು. ಸದ್ದೇ ಮಾಡದೇ ಆವರಿಸುವ ಬೆಳದಿಂಗಳ ಬೆಳಕಿನಂಥವಳು ನೀನು. ಸಾವಿರಾರು ಮಾತುಗಳ ನಡುವೆ ಒಂದು ಕ್ಷಣದ ಮೌನಕ್ಕೆ ಅನೂಹ್ಯ ಅರ್ಥ ದಕ್ಕಿಬಿಡುವಂಥ ನಿನ್ನ ಕಣ್ಣೋಟ, ಹೇಳದೇ ಉಳಿದ ನೂರು ಮಾತುಗಳನ್ನು ಒಂದೇ ಕ್ಷಣದಲ್ಲಿ ಎದೆಯಾಳಕ್ಕೆ ತಲುಪಿಸಿಬಿಡುತ್ತದೆ. ರೇಜಿಗೆ ಹುಟ್ಟಿಸಿ, ಬೇಸರ ಆವರಿಸಿ, ಬೂದು ಬೆಳಕಿನ ಮಂಕು ಬಣ್ಣವನ್ನು ಹಗಲಿಗೆ ಸುರಿವ ಜಿಟಿ ಜಿಟಿ ಮಳೆಯಲ್ಲೂ, ನಿನ್ನ ನೆನಪುಗಳಿಗೆ ಚುರುಗುಡುವ ಎಳೆ ಬಿಸಿಲಿನ ಪ್ರಾಯ. 

ನಂಗೆ ಗೊತ್ತಿದೆ, ನನ್ನದು ಒಬ್ಬಂಟಿ ಆಲಾಪನೆ. ನಿನಗಾಗಿ ಕಾಯುತ್ತಲೇ ಉಳಿದವನಿಗೆ ನೀನೇ ದಾರಿ, ನೀನೇ ಗುರಿ. ಅದೆಂಥದೇ ಸವಾಲುಗಳು ಬದುಕಿಗೆ ಎದುರಾಗಿ ಅಡ್ಡಬಿದ್ದಿರಲಿ. ನಿನ್ನ ತಲುಪುವ ಹಾದಿಯೊಂದೇ ನನ್ನ ಕಣ್ಣ ಕಪ್ಪಿನಲ್ಲಿ ಉಳಿದ ಬಿಂಬ. ಮನಸು ಎಂಥಾ ಮಾಯಾವಿ ಗೊತ್ತಾ? ಅದು, ನೀ ಇಲ್ಲದ ಘಳಿಗೆಯಲ್ಲಿ ನಿನ್ನ ಹಂಬಲಿಸಿ ರಚ್ಚೆ ಹಿಡಿದ ಮಗುವಿನಂತಾಗುತ್ತದೆ. ಒಮ್ಮೊಮ್ಮೆ ಒಳಗೊಳಗೇ ಎಂಥದ್ದೋ ವಿವರಣೆಗೆ ಸಿಕ್ಕದ ಕದನ. ನಿನ್ನ ಹೊರತು ಈ ಬದುಕನ್ನು ಕಲ್ಪಿಸಿಕೊಳ್ಳಲು ಯತ್ನಿಸಿದಾಗೆಲ್ಲಾ ತಹಬದಿಗೆ ಬರದ ದುಃಖವೊಂದು ಕಣ್ಣಿನಾಳದ ಕಡಲು. ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ ದಿಕ್ಕೆಟ್ಟ ತರಗೆಲೆಯಂತೆ ಒಲವಿನ ಒಡಲು. ನೀ ಕನಸಿಗೆ ಬರದ ಇರುಳುಗಳು, ಮುಗಿಯದ ದೀರ್ಘ‌ ಕತ್ತಲ ಹಾದಿಯಂತೆ ಕಂಗೆಡಿಸುತ್ತವೆ. ನೀ ಎದಿರು ಬರದ ಹಗಲುಗಳು, ಅದೆಷ್ಟೋ ಸಂವತ್ಸರಗಳಿಂದ‌ ಹಸಿರು ಕಳೆದುಕೊಂಡ ಕಳೇಬರದಂಥ ಕಾಡಿನಂತೆ ಕಾಡುತ್ತವೆ. 

ಅಂದುಕೊಂಡಂತೆ ಬದುಕು ದಕ್ಕಿಬಿಡುವುದಿಲ್ಲ ಅನ್ನೋದು ನಿಜವೇ ಇರಬಹುದು. ಅದರೆ, ನಿನ್ನ ವಿಷಯಕ್ಕೆ ಬಂದಾಗ,  ಉಹುಃ…. ರಾಜಿಯಾಗುವ ಮಾತೇ ಇಲ್ಲ. ನೀನು ನನ್ನ ಬದುಕು. ಈ ಜೀವದೊಳಗಿನ ಜೀವ. ನಿನ್ನಿಂದಲೇ ನನ್ನ ಜಗತ್ತು ನೂರಾರು ಉÇÉಾಸದ ಬಣ್ಣಗಳನ್ನ ಕಂಡಿತು. ಸಾವಿರಾರು ಸಂತೋಷದ ಗಳಿಗೆಗಳನ್ನ ನೆನಪಿನ ಬುತ್ತಿಗೆ ಕಟ್ಟಿಕೊಟ್ಟಿತು. ಮಾತಿನಲ್ಲಿ, ಮೌನದಲ್ಲಿ ಹೊಸ ಹಾಡುಗಳ ಹುಡುಕಿ ಕುಣಿದಾಡಿತು. ನೋವಿನ ಆಳ, ಸಂಭ್ರಮದ ಶಿಖರ ಎರಡನ್ನೂ ಮುಟ್ಟಿ ಬದುಕನ್ನು ಅಥೆìçಸಿಕೊಳ್ಳುವುದ ಕಲಿಯಿತು. ನಿನ್ನ ಮಾತು ನಿಜ, ನೋವುಗಳು ಒಬ್ಬಂಟಿ ಮಾಡುತ್ತವೆ. ಸಂಭ್ರಮಗಳಲ್ಲಿ ಸಂತೆ ನೆರೆಯುತ್ತದೆ.

ಒಲವೇ ಚೆಲುವ ಕವನ
ನಗುವೇ ಸುಖದ ಹೂಬನ 

ಬಂದು ಬಿಡು ಹುಡುಗಿ, ನನ್ನ ಎದೆಯೊಳಗೆ ನಿನಗಾಗಿ ಪುಟ್ಟ ಬೆಚ್ಚನೆಯ ಗೂಡೊಂದು ಕಾಯುತ್ತಿದೆ. ನನ್ನ ಮಾತುಗಳೆಲ್ಲವನ್ನೂ ನನ್ನ ಮೌನದಲ್ಲೇ ಬಲ್ಲವಳು ನೀನು. ಮಾತುಗಳಾಚೆಗಿನ ಒಲವನ್ನು ಅರಿಯಲಾರದದಷ್ಟು ದಡ್ಡಿಯಲ್ಲಾ ನೀನೆಂದು ಗೊತ್ತು. ಆದರೂ ನೀನು ಹಠವಾದಿ. ನನ್ನ ಅಂತರಾಳದ ಮೌನಕ್ಕೆ, ಮಾತಿನ ಮೂರ್ತರೂಪ ದಕ್ಕುವವರೆಗೆ ನೀನು ನನ್ನ ಒಲವಿನೆಡೆಗೆ ನಿಶ್ಚಲ ನಿಶ್ಚಲ. ಇನ್ನೆಷ್ಟು ದಿನ ಹೀಗೆ ಕಾಯಲಿ ಹುಡುಗಿ? ಮೋಡಗಟ್ಟಿದ ಬಾನು ಎಷ್ಟು ಭಾರ ತಡೆದೀತು ಹೇಳು? ಇವತ್ತು ನನ್ನ ಬದುಕಿಗೆ ಹೊಸ ಹಾದಿ ತೆರೆದುಕೊಳ್ಳುತ್ತದೆ. ಅದು ನೀ ಬರುವ ಹಾದಿಯಲ್ಲಿ.

Advertisement

ಮಾತಿನಲ್ಲಿ ಹೇಳಲಾರೆನು
ರೇಖೆಯಲ್ಲಿ ಗೀಚಲಾರೆನು
ಆದರೂನು ಹಾಡದೇನೆ ಉಳಿಯಲಾರೆನು ..
ನಿನ್ನವನು

ಜೀವ ಮುಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next