Advertisement
ಸುಣ್ಣದ ಗಾರೆಗೆ ಹೋಲಿಸಿದರೆ ಸಿಮೆಂಟ್ ಹತ್ತು ಪಟ್ಟು ಗಟ್ಟಿಯಾದ ವಸ್ತುವಾದರೂ ಅದಕ್ಕೆ ಅದರದೇ ಆದ ಮಿತಿಗಳಿವೆ. ಸುಣ್ಣದ ಗಾರೆ ಗಟ್ಟಿಯಾಗುವಾಗ ಹಿಗ್ಗುತ್ತದೆ. ಆದರೆ ಸಿಮೆಂಟ್ ಕುಗ್ಗುತ್ತದೆ. ಈ ಕುಗ್ಗುವಿಕೆಯೇ ಸಿಮೆಂಟನ್ನು ಆರ್. ಸಿ.ಸಿಯಲ್ಲಿ ಕಬ್ಬಿಣದ ಸರಳುಗಳನ್ನು ಬಿಗಿದಪ್ಪಿಕೊಂಡು ಒಂದು ಸಂಕೀರ್ಣ ವಸ್ತುವಾಗಿ ಮಾರ್ಪಾಡಾಗಲು ಸಾಧ್ಯವಾಗಿರುವುದು. ಇದು ನಿಜವಾದರೂ, ಇದೇ ಗುಣ ಸಣ್ಣ ಸಣ್ಣ ಬಿರುಕುಗಳಿಗೆ ಕಾರಣವಾಗಬಹುದು. ಆದರೆ ಗಾರೆಯಲ್ಲಿ ಈ ರೀತಿಯ ಬಿರುಕುಗಳು ಬರುವುದಿಲ್ಲ. ಹಾಗಾಗಿ ನೀರು ಹೀರಿಕೊಳ್ಳುವ ಗುಣ ಗಾರೆಗಿಂತ ಸಿಮೆಂಟಿನಲ್ಲಿ ಹೆಚ್ಚಿರುವ ಸಾಧ್ಯತೆಗಳಿರುತ್ತವೆ.
Related Articles
Advertisement
ಹೊರಗೋಡೆಗಳಿಗೆ ಸಿಮೆಂಟ್ ಆಧಾರಿತ ಪೆಂಟ್‌ಗಳನ್ನು ಬಳಸುವುದು ಸಾಮಾನ್ಯ. ಇವು ಹೆಚ್ಚು ಕುಗ್ಗದಂತೆ ಅವಕ್ಕೆ ಸುಣ್ಣದ ಅಂಶವನ್ನು ಮಿಶ್ರಣಮಾಡಿರುತ್ತಾರೆ. ಹಾಗಾಗಿ ಇವು ಸಣ್ಣ ಸಣ್ಣ ಬಿರುಕುಗಳನ್ನು ಹೊಕ್ಕು, ಅಲ್ಲಿ ಹಿಗ್ಗಿ, ಸೆಟೆದುಕೊಂಡು ನೆಲೆನಿಂತು ಸಂಪೂರ್ಣವಾಗಿ ಬಿರುಕುಗಳನ್ನು ಮುಚ್ಚಿಬಿಡುತ್ತವೆ. ಸಿಮೆಂಟ್ ಆಧಾರಿತ ಪೇಂಟಿಂಗ್ ಮಾಡುವ ಮೊದಲು ಸುಣ್ಣ ಆಧಾರಿತ ಪ್ರ„ಮರ್ ಪೇಂಟ್ ಹಚ್ಚುವುದು ವಾಡಿಕೆಯಲ್ಲಿದೆ. ಇದೂ ಸಹ ಸಿಮೆಂಟ್ ಪ್ಲಾಸ್ಟರ್ ನಲ್ಲಿರುವ ಸಣ್ಣ ಬಿರುಕುಗಳನ್ನು ಮುಚ್ಚಿ ಗೋಡೆಗಳು ಬಹುಕಾಲ ಬಾಳುವಂತೆ ಮಾಡುತ್ತದೆ.
ಈಗ ನಾವು ಸಿಮೆಂಟನ್ನು ಉಪಯೋಗಿಸುತ್ತಿದ್ದೇವೆ ಎಂದಾಕ್ಷಣ, ನಮಗೂ ಹಳೆಕಾಲದಲ್ಲಿ ಉಪಯೋಗಿಸುತ್ತಿದ್ದ ಸುಣ್ಣಕ್ಕೂ ಏನೇನೂ ಸಂಬಂಧವೇ ಇಲ್ಲ ಎಂದೇನೂ ಅಲ್ಲ. ಬರಿ ಸಿಮೆಂಟ್ ಪ್ರ„ಮರ್ ಅಂದರೆ ಮೊದಲ ಪದರವಾಗಿ ಬಳಸುವ ಬಿಳಿಯ ಬಣ್ಣದ ಲೇಪನದಲ್ಲೇ ಅಲ್ಲ, ಸಿಮೆಂಟ್ ಕೂಡ ಮೂಲತಃ ಸುಣ್ಣದಿಂದಲೇ ತಯಾರಾದ ಪದಾರ್ಥ. ಸುಣ್ಣ ಹಾಗೂ ಜೆಡಿಮಣ್ಣು ಮಿಶ್ರಣ ಮಾಡಿ ಸಣ್ಣ ಸಣ್ಣ ಗುಂಡುಗಳನ್ನು ತಯಾರು ಮಾಡಿ, ಅವನ್ನು ಸುಟ್ಟು ಪುಡಿಮಾಡಿದರೆ ತಯಾರಾಗುವ ವಸ್ತುವೇ ಸಿಮೆಂಟ್!
ಸಿಮೆಂಟ್‌ನ ಗುಣವರ್ಧನೆಗೆ ಅನೇಕ ವಸ್ತುಗಳನ್ನು ತಯಾರಿಕೆ ಹಂತದಲ್ಲಿ ಸೇರಿಸುವುದರಿಂದ ನಿರ್ದಿಷ್ಟ ಗುಣಗಳು ಬರುತ್ತವೆ. ಸಮುದ್ರತೀರದಲ್ಲಿ ಬಳಸುವ ಸಿಮೆಂಟ್ ಉಪ್ಪುನೀರಿಂದ ಹೆಚ್ಚು ಬೇಗ ಹಾನಿಗೆ ಒಳಗಾಗುವುದರಿಂದ, ಅಂತಹ ಸ್ಥಳಗಳಲ್ಲಿ ಬಳಸಲು ಉಪ್ಪುನಿರೋಧಕ ಗುಣ ಹೊಂದಿರುವ ಸಿಮೆಂಟ್ ಕೂಡ ಲಭ್ಯ. ಹಾಗಾಗಿ ಉಪ್ಪು ನೀರು ಬಸಿಯುವ ಮಣ್ಣಿನಲ್ಲಿ ಪಾಯ ಹಾಕಲು ಹಾಗೂ ಉಪ್ಪು ನೀರ ಸಿಂಪಡನೆಗೆ ಒಳಗಾಗುವ ಸ್ಥಳಗಳಲ್ಲಿ ಉಪ್ಪು ನಿರೋಧಕ ಗುಣಗಳಿರುವ ಸಿಮೆಂಟನ್ನು ಉಪಯೋಗಿಸಿದರೆ ನಮ್ಮ ಮನೆಗಳು ಹೆಚ್ಚುಕಾಲ ಬಾಳಿಕೆ ಬರುತ್ತದೆ.
ಗಾರೆ ಕಟ್ಟಡಗಳಿಂದ ಕಲಿಯಬೇಕಾದ ಮತ್ತೂಂದು ಗುಣವೆಂದರೆ ನಮ್ಮಲ್ಲಿ ಹೆಚ್ಚು ಸಿಮೆಂಟ್ ಹಾಕಿದಷ್ಟೂ ಒಳ್ಳೆಯದೆಂದು ಅನಗತ್ಯವಾಗಿ, ಅನಗತ್ಯ ಸ್ಥಳಗಳಲ್ಲಿ ಹೆಚ್ಚು ಹೆಚ್ಚು ಸಿಮೆಂಟ್ ಅನ್ನು ಬಳಸುವುದು ಕಂಡುಬರುತ್ತದೆ. ಆದರೆ ನಾವು ಬಳಸುವ ಸಿಮೆಂಟ್ ಮಿಶ್ರಣದ ಬಲ ಉಪಯೋಗಿಸುವ ಇಟ್ಟಿಗೆಗಿಂತ ಹೆಚ್ಚಿರಬಾರದು! ಹಿಂದಿನಕಾಲದಲ್ಲಿ ಇಟ್ಟಿಗೆಗಿಂತ ಗಾರೆ ದುರ್ಬಲವಾಗಿದ್ದರಿಂದಲೆ ಆಗಿನ ಕಾಲದ ಕಟ್ಟಡಕ್ಕೆ ಭಾರದಲ್ಲಿ ಏರುಪೇರಾದರೂ ಹೊಂದಿಕೊಂಡುಹೋಗುವ ಗುಣವಿತ್ತು. ಇಟ್ಟಿಗೆಗಿಂತ ಅದರ ಹೊರಮೈಯಲ್ಲಿರುವ ಗಾರೆಯಲ್ಲಿ ಸಣ್ಣ ಸಣ್ಣ ಬಿರುಕುಗಳು ಮೂಡಿದರೂ, ಕಟ್ಟಡಕ್ಕೇನೂ ಹಾನಿಯಾಗುವುದಿಲ್ಲ. ಅದೇ ಇಟ್ಟಿಗೆಯೇ ಬಿರುಕುಬಿಟ್ಟರೆ ಭಾರ ಹೊರುವ ಸಾಮರ್ಥಯವೇ ಕುಂದುತ್ತದೆ! ಹಾಗಾಗಿ, ಯಾವುದೇ ಕಾರಣಕ್ಕೂ ಸಿಮೆಂಟ್ ಮಿಶ್ರಣ 1:6 ಅಂದರೆ ಒಂದು ಸಿಮೆಂಟ್ ಅಳತೆಗೆ ಆರು ಮರಳು ಮಾತ್ರ ಹಾಕಿ ತಯಾರಿಸಬೇಕು. ಹೆಚ್ಚು ಸಿಮೆಂಟ್ ಹಾಕಿದರೆ ಗೋಡೆಯಲ್ಲಿರುವ ಇಟ್ಟಿಗೆಗಳೇ ಬಿರುಕು ಬಿಟ್ಟು ಸುಲಭದಲ್ಲಿ ರಿಪೇರಿ ಮಾಡಲಾಗದ ಸ್ಥಿತಿ ತಲುಪಬಹುದು.
ಎಲ್ಲ ಗೋಡೆಗಳಲ್ಲಿಯೂ ಇಟ್ಟಿಗೆಗಳ ಮಧ್ಯೆ ಹಾಕಿರುವ ಮಿಶ್ರಣ ಸ್ವಲ್ಪ ಅದುರಿ ಕಂಪನದ ಶಕ್ತಿಯನ್ನು ಅರಗಿಸಿಕೊಳ್ಳುವ ಗುಣ ಹೊಂದುವಂತೆ ಮಾಡಲಾಗಿರುತ್ತದೆ. ರಬ್ಬರ್ ಚೆಂಡು ಹಾಗೂ ಗಾಜಿನ ಗೋಲಿಗೆ ಹೋಲಿಸಿದಾಗ ರಬ್ಬರ್ ಹೆಚ್ಚು ಮೃದು ಎಂದೆನಿಸಿದರೂ, ರಬ್ಬರ್ ಮಾದರಿಯಲ್ಲಿ ಗಾಜಿನ ಗೋಲಿ ಪುಟಿದೇಳುವಲ್ಲಿ ಸಮರ್ಥವಲ್ಲ. ಈ ಮಾದರಿಯ ಪುಟಿದೇಳುವ ಗುಣ- ಡಕ್ಟಿಲಿಟಿ ನಮ್ಮ ಕಟ್ಟಡಗಳಿಗಿದ್ದರೆ ದೀರ್ಘಕಾಲ ಬಾಳಿಕೆ ಬರಲು ಸಯಾಹಕಾರಿಯಾಗಿರುತ್ತದೆ. ಅತಿ ಹೆಚ್ಚು ಭಾರ ಹೊತ್ತು ಹಳ್ಳ ಕೊಳ್ಳಗಳಿರುವ ರಸ್ತೆಗಳ ಮೇಲೆ ಸರಾಗವಾಗಿ ಹತ್ತಾರು ಟನ್ ತೂಗುವ ಲಾರಿಗಳ ಚಕ್ರಗಳನ್ನು ಈಕಾರಣದಿಂದಾಗೇ ರಬ್ಬರ್‌ನಿಂದ ಮಾಡಲಾಗಿರುತ್ತದೆ. ಭೂಕಂಪ ನಿರೋಧಕ ಕಟ್ಟಡಗಳಲ್ಲಿಯೂ ಪುಟಿದೇಳುವ ಗುಣ ವರ್ಧಿಸಲು ಡಕ್ಟೆ„ಲ್ ಸ್ಟೀಲ್ ಎಂದು ಸೂಕ್ತ ಸ್ಥಳಗಳಲ್ಲಿ ಸ್ಟೀಲಿನ ಸರಳುಗಳನ್ನು ಬಳಸಲಾಗುತ್ತದೆ. ಇದು ಆರ್‌ಸಿಸಿ ಕಟ್ಟಡಗಳಲ್ಲಿ ಕಾಲಂ ಹಾಗೂ ಬೀಮ್‌ನಲ್ಲಿ ಅಳವಡಿತವಾಗಿದ್ದರೆ, ಇಟ್ಟಿಗೆ ಗೋಡೆಗಳಲ್ಲಿ ಲಿಂಟಲ್ ಮಟ್ಟದಲ್ಲಿ ಒಂದು ಪದರ ಆರ್‌ಸಿಸಿ ಬೀಮ್ ರೂಪದಲ್ಲಿ ಹಾಕಿದರೆ ನಮ್ಮ ಕಟ್ಟಡಗಳು ಹೆಚ್ಚುದಿನ ಬಾಳಿಕೆ ಬರುತ್ತವೆ. – ಆರ್ಕಿಟೆಕ್ಟ್ ಕೆ. ಜಯರಾಮ್