ಹುಡುಗಿ, ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ.. ಹಾ..ಯಾವುದೋ ಸಿನಿಮಾ ಹಾಡು ಹೇಳಿ ಯಾಮಾರಿಸ್ತಿದಾನೆ ಅಂತ ಅಂದುಕೊಂಡ್ಯಾ? ಖಂಡಿತಾ ಇಲ್ಲ. ನಿನ್ನ ಪ್ರೀತಿಯ ಸುಳಿಯಲ್ಲಿ ಸಿಲುಕಿದಾಗಿನಿಂದಲೂ ನನ್ನಲ್ಲಿರುವ ಪದಗಳೆಲ್ಲ ನಿನ್ನನ್ನು ಹಾಡಿ ಹೊಗಳಲು ಹಾತೊರೆಯುತ್ತಿವೆ. ಆದರೆ ಏನು ಮಾಡುವುದು? ನಾನು ಕವಿಯಲ್ಲವಲ್ಲ. ಆದರೂ ನನ್ನ ಮಿತಿಯಲ್ಲೇ, ನೀನು ನನಗೇನಾಗಬೇಕು ಎಂದು ಹೇಳ್ತೀನಿ ಕೇಳು.
ಆದರೆ ಓದಿದ ಮೇಲೆ ನನ್ನ ಹುಚ್ಚು ಕಲ್ಪನೆಗಳನ್ನು ಆಡಿಕೊಂಡು ನಗಬಾರದು.. ನೀನೆಂದರೆ ಬೆಳ್ಳಿಮೋಡಗಳ ಮರೆಯಲ್ಲಿನ ಚೆಲುವು. ಮಿಂಚಂತೆ ಸುಳಿದು ಬಾನಾಚೆ ತೇಲಿದ ತಂಗಾಳಿ. ಗರಿ ಬಿಚ್ಚಿ ಕುಣಿವ ನವಿಲು. ಚಂದಿರನಿಗೂ ಬೆಳದಿಂಗಳ ಸಾಲ ಕೊಟ್ಟವಳು ನೀನು. ಮುಂಗಾರಿನ ಮೊದಲ ಮಳೆಗಿಂತ, ಮುಸ್ಸಂಜೆಯ ಪಿಸುಮಾತಿಗೆ ಧ್ವನಿಯ ನೀಡಿ ಹೃದಯದಲಿ ಕಂಪೊಡೆದು ರಂಗಾಗಿ ಬಂದ ಇಬ್ಬನಿ ನೀನು.
ಕನಸಿನ ತಾವರೆಗಳಲ್ಲಿ ಮಿಂದೆದ್ದ, ಬಣ್ಣ-ಬಣ್ಣದ ಚಿಟ್ಟೆಗಳ ಹೂವ ರಾಶಿಯೊಳಗೆ ನನ್ನನ್ನು ಕೈ ಬೀಸಿ ಕರೆಯುವ ಸಿಹಿ ಮಕರಂದ ನೀನು. ಹಸಿರು ತೋರಣದ ಹುಲ್ಲರಾಶಿಯೊಳಗೆ ಬತ್ತಿ ಹೋದ ಭಾವ, ಭುವಿಯೊಳಗೆ ಪ್ರೀತಿ ನೀಡುವ ಕಾಮಧೇನು. ಹುಸಿಯಾದ ಹಸಿ ಕನಸುಗಳಿಗೆ ಜೀವ ಹೊಸೆದವಳು. ಖಾಲಿ ಕನಸುಗಳಿಗೆ ಬಣ್ಣ ಬಳಿದು, ನೆನಪುಗಳ ಸಾಗರದಲ್ಲಿ ಹುಗಿದು ಹೋಗಿ, ಬೆಳ್ಳಿ ಮೋಡಗಳಾಚೆ ಇಳಿದು ಬಂದು ಮುತ್ತಿಕ್ಕಿ ಹೋದವಳು ನೀನೇ ಅಲ್ಲವಾ?
ನನ್ನ ಎದೆಯ ರಾಜ್ಯದಲ್ಲಿ ಅಲೆದಾಡಿ, ನೋವಿನಲ್ಲೂ ನಗುವ ಹೊಳೆಯ ಹರಿಸಿದವಳು. ನನ್ನ ಕಲ್ಪನೆಯ ಲೋಕದ ಸಂಚರಿಸುವ ಕಿನ್ನರಿ. ಕಂಬನಿ ಒರೆಸುವ ಒಲವ ಸುಧೆ. ಕತ್ತಲೆಯ ಬದುಕಿನಲ್ಲಿ ಬೆಳಕಿನ ಭರವಸೆ ನೀಡಿದಳು. ಅಯ್ಯೋ, ಏನಿಷ್ಟು ಹೊಗಳ್ತಾ ಇದಾನೆ ಭಟ್ಟಂಗಿ ಅಂತ ದಯವಿಟ್ಟು ಬೈಬೇಡ. ಇನ್ನೂ ತುಂಬಾ ಇದೆ. ನಿನ್ನ ಅಂದ ಹೊಗಳಲು, ನಿನ್ನ ವರ್ಣನೆ ಮಾಡಲು..ಆದರೆ ಪದಪುಂಜಗಳೇ ನೆನಪಾಗುತ್ತಿಲ್ಲ.
* ಇಂತಿ ನಿನ್ನ ಪ್ರೀತಿಯ ಹುಡುಗ: ಸುನೀಲ ಗದೆಪ್ಪಗೋಳ