ನೀನೆಂದರೆ ಹಾಗೆ..! ನನ್ನಲ್ಲೇನೋ ಪುಳಕ.. ಅದೇನೋ ಚೈತನ್ಯದ ಚಿಲುಮೆ ನನ್ನ ಮನದಲ್ಲಿ ರೂಪತಳೆದುಕೊಳ್ಳುತ್ತದೆ. ನಾ ಕಾಣೋ ಲೋಕವೆಲ್ಲಾ ನಳನಳಿಸುವಂತೆ ತೋರುತ್ತದೆ. ಯಾವುದೇ ಕೆಲಸವಾದರೂ ಸರಿ ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುವಂತಹ ಛಲ ನನ್ನಲ್ಲಿ ಮೂಡುತ್ತದೆ. ಬದುಕಿನಲ್ಲಿ ಎಲ್ಲವೂ ಸುಂದರವಾಗಿ ಕಾಣತೊಡಗುತ್ತದೆ. ನನ್ನ ಅಂತರಂಗದ ಭಾವನೆಗಳೆಲ್ಲ ಸ್ವತ್ಛಂದವಾಗಿ ಆಗಸದಲ್ಲಿ ಹಾರಾಡುವಂತೆ ಭಾಸವಾಗತೊಡಗುತ್ತದೆ. ಅದೆಂತದೋ ಶಕ್ತಿ ಮೈ ಮನಗಳಲ್ಲಿ ಅಡಗಿ ರೋಮಾಂಚನಗೊಳಿಸುತ್ತದೆ.
ಈ ವಯಸ್ಸೇ ಹೀಗೆನಾ..? ನಾನೇಕೆ ಹೀಗಾದೆ..? ನನ್ನೊಳಗಿನ ಈ ಬದಲಾವಣೆಗೆ ಏನು ಕಾರಣ..? ಈ ತರಹದ ಅನೇಕ ಪ್ರಶ್ನೆಗಳಿಗೆ ಉತ್ತರ ನೀನೆ. ನನ್ನಂತರಂಗದಲ್ಲಿ ಪ್ರೀತಿಯ ದೀಪ ಹಚ್ಚಿದವಳು. ಉತ್ಸಾಹದ ಚಿಲುಮೆಯ ಹರಿಸಿದವಳು. ನಿನ್ನ ಕಾಣುವ ಆ ತವಕ..! ನಿನ್ನ ಮಾತುಗಳನ್ನು ಆಲಿಸುವ ಕುತೂಹಲ..! ನಿನ್ನ ಆವಭಾವಗಳನ್ನು ಹತ್ತಿರಲ್ಲೆ ಕಣ್ಣು ಮಿಟುಕಿಸದ ಹಾಗೆ ನೋಡುವ ಪುಳಕ. ಅರೇ.. ಆ ನಿನ್ನ ನಾಚಿಕೆಯ ಸ್ವಭಾವ. ಕೆನ್ನೆಯ ಮೇಲೆ ಆ ನಿನ್ನ ಮುಂಗುರುಳ ನರ್ತನ.. ಕಣ್ಣಂಚಿನಲ್ಲಿ ಹುಚ್ಚೆಬ್ಬಿಸುವ ಆ ನಿನ್ನ ನೋಟಗಳು.. ಅಬ್ಟಾ , ಒಂದೇ ಎರಡೇ ಹೇಳುತ್ತಾ ಹೋದರೆ ಸಮಯವೇ ಸಾಲದು.
ನಿಜ…, ನೀನೆಂದರೆ ನನ್ನೋಳಗೆ ಏನೋ ಒಂದು ನವೀನ ಭಾವದ ಸಂಚಲನ. ಒಂದು ಹಿತವಾದ ನೋವನ್ನು ಮೈಯೊಳಗೆ ಇಷ್ಟ ಪಟ್ಟು ಬಿಟ್ಟುಕೊಂಡಹಾಗೆ. ಈ ಪುಳಕದಲ್ಲೇ ಹೊಸ ಬದುಕನ್ನು ರೂಪಿಸಬೇಕೆನ್ನುವ ಹಂಬಲ ಕಾಮನಬಿಲ್ಲಿನ ಹಾಗೆ ಮೂಡಿದೆ. ಬದುಕಿಗೆ ಹೊಸ ದಿಕ್ಕು ಪರಿಚಯಿಸಿದ ಆತ್ಮೀಯ ಜೀವ ನೀನು ಎಂದು ಅನಿಸುತ್ತಿದೆ. ಆದರೆ…? ಅದೇನೋ ಪುಟ್ಟ ಭಯ ಮನದ ಮೂಲೆಯೊಂದರಲ್ಲಿ ಮರಿ ಹಾಕಿದೆ. ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲಾರೆ.ನನ್ನ ಬದುಕಿನ ಉದ್ದಕ್ಕೂ ನಿನ್ನ ಹೆಜ್ಜೆಗಳು ಮೂಡಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುವೆ.
ಇಂತಿ ನಿನ್ನ ಆತ್ಮೀಯ
-ವೆಂಕಟೇಶ ಚಾಗಿ