ಅವತ್ತು ಅವಸರದಲ್ಲಿ ಇದ್ದೆ ಅನ್ಸತ್ತೆ. ತಲೆಯೆತ್ತಿ ನಿನ್ನ ನೋಡೋ ಹೊತ್ತಿಗೆ, “ಅಮ್ಮಾ, ನಾನು ಹೋಗ್ಬೇಕು. ಅರ್ಜಂಟ್ ಬಾ ಅಂತ ಬಾಸ್ ಫೋನ್ ಮಾಡಿದ್ದಾರೆ’ ಅಂತ ನಿಮ್ಮಮ್ಮನ್ನ ನಮ್ಮ ಮನೇಲಿ ಬಿಟ್ಟು ನಡೆದಿದ್ದೆ. ನಿಮ್ಮಮ್ಮ ನೋಡಲಿ ಅಂತ ನಾನು ಆ ರೇಂಜ್‌ಗೆ ರೆಡಿ ಆಗಿದ್ದೆ, ನೀನು ನೋಡಲಿ ಅಂತಾನೋ?
ಗಡಿಬಿಡಿಯಲ್ಲಿ ನಿನ್ನನ್ನು ಸರಿಯಾಗಿ ನೋಡೋಕೆ ಆಗದಿದ್ದರೂ, ನಿನ್ನ ನಿಲುವು ನನ್ನ ಮನದಲ್ಲಿ ಹುಚ್ಚೆಬ್ಬಿಸಿದೆ. ನೀನು ಅವತ್ತು ಕಪ್ಪು ಅಂಗಿ ಹಾಕಿದ್ದೆ ಅಲ್ವಾ? ಇನ್ನೇನು ಬಂದು ಮಾತನಾಡಬೇಕು ಎನ್ನುವಷ್ಟರಲ್ಲಿ ಹೋಗಿ ಬಿಟ್ಟೆಯಲ್ಲೋ! ಒಂದು ಡೌಟು; ಹೆಣ್ಣು ನೋಡೋಕೆ ಅಂತ ಬಂದವನು ನನ್ನನ್ನು ಒಂದ್ಸಾರಿಯಾದರೂ ಸರಿಯಾಗಿ ನೋಡಿದೆಯೋ ಅಥವಾ ನಿಮ್ಮಮ್ಮನ ಮಾತಿಗೆ ಕಟ್ಟು ಬಿದ್ದು ನನ್ನನ್ನು ಒಪ್ಪಿಕೊಂಡೆಯೋ?
ನಿಮ್ಮಮ್ಮ ಮತ್ತು ನಮ್ಮಮ್ಮನ್ನು ಮಹಡಿಗೆ ಕಳಿಸಿ ನಿನ್ನ ಜೊತೆ ಮಾತಾಡ್ಬೇಕು ಅಂತ ನಾನು ಪ್ಲಾನ್ ಮಾಡಿದ್ದರೆ, ನೀನು ಹಾಳಾದ ಬಾಸ್ ಕರೀತಿದಾರೆ ಅಂತ ಹೋದೆ ಅಲ್ವಾ; ನೆನಪಿಟ್ಕೊ. ಮದುವೆ ಆದ್ಮೇಲೆ ನಾನೇ ನಿನ್ನ ಬಾಸ್. ಆವಾಗ ಇದೆ ನಿಂಗೆ. ನಿಮ್ಮ ಬಾಸ್‌ನ ಮರೆತು ನನ್ನ ಹಿಂದೆ ಸುತ್ತಬೇಕು ಹಾಗ್ ಮಾಡ್ತೀನಿ, ನೋಡ್ತಿರು!
ಅವತ್ತು ನನ್ನ ನೋಡಿಕೊಂಡು ಹೋದೋನು ಮತ್ತೂಮ್ಮೆ ಮೀಟ್ ಮಾಡೋದಿರಲಿ, ಒಂದೇ ಒಂದು ಕಾಲ್ ಕೂಡಾ ಮಾಡಿಲ್ಲ. ಹೆದರಬೇಡ, ನಾನೇನು ನಿನ್ನ ತಿಂದು ಬಿಡೋದಿಲ್ಲ ಆಯ್ತಾ. ಅದೊಂದು ಕಲ್ತಿದ್ದೀಯ ಗೂಬೆ ಥರ ಗುಡ್‌ಮಾರ್ನಿಂಗ್, ಗುಡ್‌ನೈಟ್ ಮೆಸೇಜ್ ಮಾಡೋಕೆ. ಅದನ್ನ ಬಿಟ್ರೆ ಬೇರೆ ಏನೂ ಗೊತ್ತಿಲ್ವೇನೋ? ಸ್ವಲ್ಪನಾದ್ರೂ ರೊಮ್ಯಾಂಟಿಕ್ ಆಗಿರೋ ಪೆದ್ದು.
ಸಾರಿ, ಸ್ವಲ್ಪ ಜಾಸ್ತಿ ಬೈದೆ ಅನ್ಸತ್ತೆ ಅಲ್ವಾ? ಮತ್ತೇನು ಮಾಡ್ಲಿ ಹೇಳು? ನನ್ನ ಹುಡುಗ ಹೀಗಿರಬೇಕು ಅಂತೆಲ್ಲಾ ನನಗೂ ಕನಸುಗಳಿರುತ್ತವೆ ಅಲ್ವಾ? ನಿನ್ನನ್ನ ತುಂಬಾ ಮಿಸ್ ಮಾಡ್ಕೊತಿದೀನಿ. ನಿಂಗೆ ನಾನು ನೆನಪ್ ಆಗ್ತಿàನೋ ಇಲ್ವೋ ಗೊತ್ತಿಲ್ಲ. ನಂಗೆ ಮಾತ್ರ ನಿಂದೇ ನೆನಪು. ಪಕ್ಕಾ ಆಗಿಯಾ ನನ್ನ ಮನಕ್ಕೆ. ನಮ್ಮ ಮದುವೆಯ ಹೋಳಿಗೆ ಊಟ ಯಾವಾಗ ಮಾಡ್ತೀನೋ ಅನ್ನಿಸ್ತಿದೆ. ಅದಕ್ಕೂ ಮುಂಚೆ, ಒಂದ್ಸರಿ ಆದ್ರೂ ಬಂದು ಎದುರಾಗಿ ಮಾತಾಡೋ. ನಿಂಗಾಗಿ ಕಾಯ್ತಾ ಇರ್ತಿನಿ.
-ಬಿ.ಎಂ. ಪಾಟೀಲ