ದಿನಾಲೂ ಕಾಲೇಜಿಗೆ ತಡವಾಗಿ ಬರುತ್ತಿದ್ದ ನಾನು, ಅಂದು ಬೇಗ ಬಂದುಬಿಟ್ಟೆ. ಆ ಬೆಳಗಿನ ತಂಪು ವಾತಾವರಣದಲ್ಲಿ, ಕಾಲೇಜಿನ ಸೌಂದರ್ಯವನ್ನು ಸವಿಯುತ್ತಾ ಕಾರಿಡಾರ್‌ನಲ್ಲಿ ನಿಂತಿದ್ದೆ. ಅಲ್ಲಿಯೇ ಇದ್ದ ನೋಟಿಸ್ ಬೋರ್ಡ್ ಗಮನ ಸೆಳೆಯಿತು. ಬೋರ್ಡ್‌ನ ಗಾಜಿನೊಳಗಿಂದ ಸುಂದರ ಹುಡುಗಿಯ ಫೋಟೊ ಕಾಣಿಸಿತು. ಯಾರಪ್ಪಾ ಈ ಚೆಲುವೆ ಅಂತ ತನಿಖೆ ಮಾಡಿದಾಗ ಸಿಕ್ಕಿದವಳು ನೀನು.
ನಿನ್ನ ಸ್ನೇಹ ಸಂಪಾದಿಸಲು ವರುಷವೇ ಹಿಡಿದರೂ, ಅಷ್ಟೊತ್ತಿಗೆ ನನ್ನಲ್ಲಿ ಚಿಗುರಿದ್ದ ಭಾವನೆಗಳು ಸಾವಿರಾರು. ನಿನ್ನ ಹುಟ್ಟುಹಬ್ಬದಂದು ಪುಸ್ತಕ ಮತ್ತು ಒಂದು ಸ್ಮೈಲಿಯನ್ನು ಗಿಫ್ಟ್ ನೀಡಿದರೆ, “ನಂಗೆ ತೋರ್ಪಡಿಕೆಯ ನಗು ಬೇಡ’ ಅಂತ ಆ ಸ್ಮೈಲಿಯನ್ನು ಹಿಂದಿರುಗಿಸಿದ್ದೆಯಲ್ಲ, ಆಗ ನಿನ್ನ ಮೇಲೆ ಬಂದ ಕೋಪ ಅಷ್ಟಿಷ್ಟಲ್ಲ.
ಗೆಳೆಯನ ಅಕ್ಕನ ಮದುವೆಗೆ ಹೋಗಿದ್ದಾಗ, ನೀನು ಗೆಳೆಯನೊಬ್ಬನಿಗೆ ಯಾವುದೋ ಕಾರಣಕ್ಕೆ ನೂರರ ನೋಟು ಕೊಟ್ಟಿದ್ದೆ. ನಿನ್ನ ಕೈ ಸವರಿದ್ದ ಆ ನೋಟನ್ನು ನಾನು ಉಪಾಯ ಮಾಡಿ ಅವನಿಂದ ಪಡೆದುಕೊಂಡೆ. ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ನಿನ್ನ ಕೈಯಿಂದ ಚಲಾವಣೆಯಾದ ಒಟ್ಟು 124 ರೂಪಾಯಿ ನನ್ನ ಪರ್ಸ್‌ನಲ್ಲಿ ಭದ್ರವಾಗಿ ಕೂತಿದೆ. ನಿನ್ನ ಫೋಟೊ, ನೀನಿರುವ ಗ್ರೂಪ್ ಫೋಟೊ ಅಂತೆಲ್ಲಾ ಸೇರಿ ನನ್ನ ಬಳಿಯಿರುವ ನಿನ್ನ ಫೋಟೋಗಳ ಸಂಖ್ಯೆ 240ಕ್ಕೆ ಏರಿವೆ. ಅದರಲ್ಲೂ ಕಾಲೇಜ್ ಡೇಯಲ್ಲಿ ಇಬ್ಬರೂ ಜೋಡಿಯಾಗಿ ನಿಂತು ತೆಗೆಸಿಕೊಂಡ ಫೋಟೋ ಇದೆಯಲ್ಲ; ಅದನ್ನು ನೋಡಿದಾಗೆಲ್ಲಾ ಎದೆಯಲ್ಲಿ ಹೂಮಳೆ. ಮೊಬೈಲ್ ಗ್ಯಾಲರಿಯಲ್ಲಿ ಬೆಚ್ಚಗೆ ಅವಿತಿರುವ ನಿನ್ನ ಫೋಟೋಗಳು, ಮೂರು ವರ್ಷಗಳ ಸಾವಿರ ನೆನಪುಗಳನ್ನು ಸಾರಿ ಹೇಳುತ್ತವೆ.
ನಿನಗೆಂದು ಖರೀದಿಸಿದ ಡೈರಿ, ನಗುವೇ ಸಂಪತ್ತಾಗಲಿ ಎಂದು ನಿನಗೆ ಕೊಟ್ಟಿದ್ದ ಸ್ಮೈಲಿ, ನಿನ್ನಿಂದ ಸಿಕ್ಕ 124 ರೂಪಾಯಿ, ಜೊತೆಗೆ ಆ 240 ಫೋಟೊಗಳನ್ನೆಲ್ಲ ನಿನಗೆ ಅರ್ಪಿಸಿ, ಪ್ರೇಮ ನಿವೇದನೆ ಮಾಡಬೇಕೆಂಬ ಆಸೆಯಿದ್ದರೂ, ನಿನ್ನೆದುರು ನಿಲ್ಲಲು ಧೈರ್ಯ ಸಾಲದೇ ಮೂರು ವರ್ಷದಿಂದ ಸುಮ್ಮನಿದ್ದೇನೆ. ನೀನೀಗ ನನ್ನೆದೆಯಲ್ಲಿ ಮೂರು ವರುಷದ ಪಾಪು. ನಿನ್ನ ಕೈ ಹಿಡಿದು ಜೊತೆ ನಡೆವ ಹಂಬಲ ನನ್ನದು.
– ಉಮೇಶ ರೈತನಗರ