ಧಾರವಾಡ: 2018ಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಈ ಭಾಗದ ಯುವ ಬಿಜೆಪಿ ಮುಖಂಡ ಯೋಗೀಶಗೌಡ ಕೊಲೆ ಪ್ರಕರಣವನ್ನು ಮತ್ತೆ ಮರು ತನಿಖೆ ಮಾಡಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸಮೀಪದ ನರೇಂದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಕೊಲೆ ಪ್ರಕರಣದಲ್ಲಿ ಯಾರ ಕೈವಾಡ ಇದೆ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದರು. ಗಣಿ ಮತ್ತು ಭೂ ವಿಜ್ಞಾನ ಖಾತೆ ಹೊಂದಿರುವ ವಿನಯ್ ಏನು ಮಾಡುತ್ತಿದ್ದಾರೆ.
ಅದೊಂದು ಮರಳು ಮಾμàಯಾ ಅಷ್ಟೇ. ಬಡವರು ಮನೆ ಕಟ್ಟಿಕೊಳ್ಳಲು ಮರಳು ಸಿಕ್ಕುತ್ತಿಲ್ಲ. ಇದನ್ನ ನೋಡಿದರೆ ಗೊತ್ತಾಗುತ್ತದೆ ಅವರೇನು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಸಚಿವ ವಿನಯ್ ಕುಲಕರ್ಣಿ ಅವರು ಏನೂ ಕೆಲಸ ಮಾಡುತ್ತಿಲ್ಲ.
ಬರೀ ಕಳ್ಳ, ಸುಳ್ಳರಿಗೆ ರಕ್ಷಣೆ ಕೊಟ್ಟುಕೊಂಡು ಓಡಾಡುತ್ತಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ಬರೀ ಕಳ್ಳಕಾಕರೇ ದೊಡ್ಡವರಾದರು. ಅಭಿವೃದ್ಧಿ ಬಗ್ಗೆ ನಾನೇನು ಮಾಡಿಲ್ಲ ಎಂದು ಹೇಳುವ ಅವರು, ಅವರೇನು ಮಾಡಿದ್ದಾರೆ ಎಂಬುದನ್ನು ಹೇಳಲಿ. ನಾನು ಚರ್ಚೆಗೆ ಸಿದ್ದನಿದ್ದೇನೆ ಎಂದು ಸವಾಲು ಹಾಕಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಸಿದ್ದರಾಮಯ್ಯ ಈ ರಾಜ್ಯದ ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ. ಇನ್ನು ಅವರು ಮನೆಗೆ ಹೋಗಲು ಸಜ್ಜಾಗಬೇಕಿದೆ ಎಂದು ವ್ಯಂಗ್ಯವಾಡಿದರು. ಸೀಮಾ ಮಸೂತಿ, ಸಿ.ಟಿ. ರವಿ, ಡಿ.ಎಸ್.ವೀರಯ್ಯ, ಅಮೃತ ದೇಸಾಯ ಮಾತನಾಡಿದರು.
ಜಿಲ್ಲಾ ಬಿಜೆಪಿ ಮುಖಂಡರಾದ ಮೋಹನ ಲಿಂಬಿಕಾಯಿ, ಶಂಕರಪಾಟೀಲ್ ಮುನೇನಕೊಪ್ಪ, ಎಸ್.ಐ. ಚಿಕ್ಕನಗೌಡರ, ಸಿ.ಎಂ.ನಿಂಬಣ್ಣನವರ ಇದ್ದರು. ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಬಿಜೆಪಿ ಟಿಕೆಟ್ ಯಾರಿಗೆ ಎನ್ನುವ ಪ್ರಶ್ನೆ ಬಹಿರಂಗ ಸಭೆಯಲ್ಲಿದ್ದ ಜನರಲ್ಲಿ ಮೂಡಿತ್ತು.
ವೇದಿಕೆಯಲ್ಲಿ ಬಿಜೆಪಿ ಮುಖಂಡರು ಭಾಷಣ ಮಾಡುತ್ತಿದ್ದಾಗ, ಅಮೃತ ದೇಸಾಯಿ, ಸೀಮಾ ಮಸೂತಿ ಮತ್ತು ತವನಪ್ಪ ಅಷ್ಟಗಿ ಅವರುಗಳ ಬೆಂಬಲಿಗರು ಜೈಕಾರ ಹಾಕುತ್ತಿದ್ದ ದೃಶ್ಯ ಕಂಡು ಬಂದಿತು. ಸಮಾವೇಶದಲ್ಲಿ ಅಮೃತ ದೇಸಾಯಿ ಬೆಂಬಲಿಗರೇ ಅಧಿಕವಾಗಿದ್ದು ಗೋಚರಿಸಿತು.