Advertisement

ಪೌರಕಾರ್ಮಿಕರು ಕಾಯಕ ಯೋಗಿಗಳು

12:17 PM Jan 03, 2017 | Team Udayavani |

ಹುಬ್ಬಳ್ಳಿ: ನವನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಯಂ ಪೌರಕಾರ್ಮಿಕರಿಗೆ ಉಚಿತ ನಿವೇಶನಗಳ ಹಕ್ಕುಪತ್ರ ವಿತರಣೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಬಸವಣ್ಣನವರು 900 ವರ್ಷಗಳ ಹಿಂದೆ ಸಮಾನತೆಗಾಗಿ ಹೋರಾಡಿದರು.

Advertisement

ಡಾ| ಅಂಬೇಡ್ಕರ್‌, ಇಂದಿರಾಗಾಂಧಿಯಂತಹನಾಯಕರು ಕೆಳವರ್ಗದ ಎಳ್ಗೆಗಾಗಿ ಶ್ರಮಿಸಿದ್ದಾರೆ. ಅವರೆಲ್ಲರ ಪ್ರಯತ್ನದಿಂದಾಗಿ ನಾವು ಸಮಾಜದಲ್ಲಿ ಅಲ್ಪಮಟ್ಟದ ಸಮಾನತೆ ಕಾಣುವಂತಾಗಿದೆ. ಆದರೂ ಕೂಡ ಇಂದಿಗೂ ನಾವೆಲ್ಲರೂ ಸಮಾನತೆಗಾಗಿ ಆತ್ಮಗೌರವದ ಬದುಕಿಗಾಗಿ ಹೊರಾಡುವ ಸ್ಥಿತಿಯಿದೆ ಎಂದರು. 

ಸಮಾಜದಲ್ಲಿ ಎಲ್ಲ ರೀತಿಯ ಕೆಲಸಗಳನ್ನು ಮಾಡುವ ಜನರಿದ್ದಾರೆ. ಗ್ರಾಮೀಣ ಭಾಗದಲ್ಲಿ ರೈತ ಸಮಾಜ ಎಲ್ಲಾ ವರ್ಗಗಳ ಸಹಾಯದಿಂದ ತನ್ನ ಅಸ್ಥಿತ್ವ ಕಂಡುಕೊಂಡಿದೆ. ಚಮ್ಮಾರ, ಕಮ್ಮಾರ, ಬಡಿಗ ಹೀಗೆ ಪ್ರತಿಯೊಂದು ಕೆಲಸ ಮಾಡುವವರು ರೈತರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಸಮಾಜದಲ್ಲಿ ಎಲ್ಲ ಕೆಲಸಗಳನ್ನು ಮಾಡುವ ಜನರಿಗೆ ಗೌರವ ಸಿಗುವಂತಾಗಬೇಕು ಎಂದರು. ಹುಬ್ಬಳ್ಳಿ-ಧಾರವಾಡದಂತಹ ಮಹಾ ನಗರದಲ್ಲಿ ನಗರದ ಸ್ವತ್ಛತೆಗಾಗಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಕೆಲಸವನ್ನು ನಾವು ಮರೆಯುವಂತಿಲ್ಲ. ಇಂತಹ ಪೌರ ಕಾರ್ಮಿಕರು ನಿಜವಾದ ಕಾಯಕ ಯೋಗಿಗಳು.

ಇವರ ಅಭ್ಯುದಯಕ್ಕಾಗಿ ಉಚಿತ ನಿವೇಶನಗಳನ್ನು ಹಂಚುತ್ತಿರುವುದು ಸಂತಸದ ವಿಷಯವಾಗಿದೆ ಎಂದರು. ಸರ್ಕಾರ ಪೌರಕಾರ್ಮಿಕರ ಏಳ್ಗೆಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದರ ಅಂಗವಾಗಿ ಪೌರಕಾರ್ಮಿಕರ ವೇತನ ಹೆಚ್ಚಿಸಲಾಗಿದೆ. ಅಲ್ಲದೆ ಪೌರಕಾರ್ಮಿಕರಿಗೆ ಲಘು ಉಪಹಾರ ಹಾಗೂ ಬಿಸಿಯೂಟ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

Advertisement

ಹಿಂದುಳಿದ ವರ್ಗಗಳ ಜನರು ಮಾಡಿರುವ ವಿವಿಧ ಸಾಲಗಳನ್ನು ಸರ್ಕಾರ ಮನ್ನಾ ಮಾಡಿದೆ ಎಂದರು. ಇಲ್ಲಿ ಹಂಚಿರುವ ನಿವೇಶನಗಳಿಗೆ ಮನೆ ಕಟ್ಟಲು ಸರ್ಕಾರ 7.50 ಲಕ್ಷ ಹಣ ನೀಡಲಿದೆ. ಇದರ ಸದುಪಯೋಗ ಪಡೆದುಕೊಳ್ಳಿ. ಅಲ್ಲದೆ ಮನೆ ನಿರ್ಮಿಸಲು ಅಲ್ಪ ಬಡ್ಡಿದರದಲ್ಲಿ 20 ಲಕ್ಷದವರೆಗೂ ಸಾಲ ಪಡೆಯಲು ಮಹಾನಗರ ಪಾಲಿಕೆ ಸಹಾಯ ಮಾಡಲಿದೆ ಎಂದು ಹೇಳಿದರು. 

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಪೌರಕಾರ್ಮಿಕರು ನಗರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ಇಲ್ಲದಿದ್ದರೆ ನಗರ ಸುಂದರವಾಗಿ ಇರಲು ಸಾಧ್ಯವಿಲ್ಲ. 122 ನಿವೇಶನಗಳ ಪೈಕಿ 94 ನಿವೇಶನಗಳನ್ನು ಇವರಿಗಾಗಿ ಹಂಚಲಾಗುತ್ತಿದೆ. ಹಾಗೆಯೆ ಇತರ ಪೌರಕಾರ್ಮಿಕರ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ 320 ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. ಇದಕ್ಕಾಗಿ 2 ಎಕರೆ ಜಮೀನನ್ನು ಸಹ ಗುರುತಿಸಲಾಗಿದೆ ಎಂದರು. 

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮತ್ತು ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿದರು. ಉಪ ಮಹಾಪೌರರಾದ ಲಕ್ಷ್ಮಿ ಉಪ್ಪಾರ ಅಧ್ಯಕ್ಷತೆ ವಹಿಸಿದ್ದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ಸದಾನಂದ ಡಂಗನವರ, ರಾಮಪ್ಪ ಬಡಿಗೇರ, ಪ್ರಕಾಶ ಕ್ಯಾರಕಟ್ಟಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next