ಇತ್ತೀಚೆಗಷ್ಟೇ ನಟ ಯೋಗಿ “ಲಂಕೆ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಎರಡನೇ ಲಾಕ್‌ಡೌನ್ ನಂತರ ತೆರೆಗೆ ಬಂದ “ಲಂಕೆ’ಗೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಈಗ ಯೋಗಿ “ಒಂಬತ್ತನೇ ದಿಕ್ಕು’ ಹುಡುಕಲು ಹೊರಟಿದ್ದಾರೆ.
ಹೌದು, ಲೂಸ್‌ಮಾದ ಯೋಗಿ ಅಭಿನಯದ “ಒಂಬತ್ತನೇ ದಿಕ್ಕು’ ತೆರೆಗೆ ಬರಲು ತಯಾರಾಗುತ್ತಿದ್ದು, ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಹೊರಬಂದಿದೆ. ಕನ್ನಡದಲ್ಲಿ ತಮ್ಮದೇ ಆದ ಪ್ರಯೋಗಾತ್ಮಕ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿ ಬಂದಿರುವ “ಒಂಬತ್ತನೇ ದಿಕ್ಕು’ ಚಿತ್ರದಲ್ಲಿ ಯೋಗಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಜೋಡಿಯಾಗಿದ್ದಾರೆ. ಉಳಿದಂತೆ ಸಾಯಿಕುಮಾರ್, ಅಶೋಕ್, ಸುಂದರ್, ಮುನಿ, ರಮೇಶ್ ಭಟ್, ಶೃತಿ ನಾಯಕ್, ಪ್ರಶಾಂತ್ ಸಿದ್ದಿ ಮುಂತಾದವರು “ಒಂಬತ್ತನೇ ದಿಕ್ಕು’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಒಂಬತ್ತನೇ ದಿಕ್ಕು’ ಚಿತ್ರದ ಟ್ರೇಲರ್ ಬಿಡುಗಡೆಯ ಬಳಿಕ ಮಾತನಾಡಿದ ನಟ ಯೋಗಿ, “ನಾನು ಇಲ್ಲಿಯವರೆಗೂ ಮಾಡಿರದಂಥ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡಿದ್ದೇನೆ. ನಿರ್ದೇಶಕ ದಯಾಳ್ ಹೇಳಿದ ಕಥೆ ತುಂಬಾ ಇಷ್ಟವಾಯ್ತು. ಕಂಟೆಂಟ್ ಇರುವಂಥ ಕಮರ್ಷಿಯಲ್ ಸಿನಿಮಾ ಇದು. ಶೂಟಿಂಗ್ ಮುಗಿದ ಮೇಲೆ, ಸಿನಿಮಾ ಹೇಗೆ ಬಂದಿರಬಹುದು ಎಂಬ ಕಾತುರ ನನಗೂ ಇತ್ತು. ಇತ್ತೀಚೆಗಷ್ಟೇ ಸಿನಿಮಾ ನೋಡಿದ ಮೇಲೆ ಖುಷಿಯಾಯ್ತು. ಸಿನಿಮಾ ತುಂಬಾ ಚೆನ್ನಾಗಿದೆ. ಪ್ರೇಕ್ಷಕರು ಕೂಡ ನಮ್ಮ ಸಿನಿಮಾ ನೋಡಿ ಇಷ್ಟಪಡುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಭರವಸೆಯ ಮಾತುಗಳನ್ನಾಡಿದರು.
ಇದನ್ನೂ ಓದಿ:ಪುನೀತ್ ಇಲ್ಲದ ಮೇಲೆ… ಹೊಸಬರ ಕನಸುಗಳು ಅರ್ಧಕ್ಕೆ ನಿಂತಿವೆ…
ಇನ್ನು “ಒಂಬತ್ತನೇ ದಿಕ್ಕು’ ದಯಾಳ್ ಪದ್ಮನಾಭನ್ ನಿರ್ದೇಶನದ 19ನೇ ಸಿನಿಮಾ. ಈ ಬಗ್ಗೆ ಮಾತನಾಡಿದ ದಯಾಳ್, “ಕಳೆದ ಕೆಲವು ವರ್ಷಗಳಿಂದ ನಾನು “ಹಗ್ಗದ ಕೊನೆ’, “ಆ ಕರಾಳ ರಾತ್ರಿ’, “ರಂಗನಾಯಕಿ’ಯಂತಹ ವಿಭಿನ್ನ ಕಥೆಯುಳ್ಳ ಸಿನಿಮಾಗಳನ್ನು ನಿರ್ದೇಶಿಸುತ್ತಾ ಬಂದಿದ್ದೇನೆ. ಈಗ ಮತ್ತೂಂದು ವಿಭಿನ್ನತೆಯಿರುವ ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ “ಒಂಬತ್ತನೇ ದಿಕ್ಕು’ ನಿರ್ದೇಶಿಸಿದ್ದೇನೆ. ಈ ಸಿನಿಮಾದ ಕಥೆ ಎರಡು ಟೈಮ್ ಲೈನ್‌ನಲ್ಲಿ ನಡೆಯುತ್ತದೆ. ನಮಗೆ ಸಿಗುವುದಿಲ್ಲ ಎಂದು ಗೊತ್ತಿದರೂ ನಾವು ಮತ್ತೂಂದು ದಾರಿಯಲ್ಲಿ ಏನನ್ನೋ ಹುಡುಕುತ್ತಾ ಹೋಗುತ್ತೇವೆ. ಅದು ಮತ್ತೂಂದು ಕಡೆ ಸಿಗುತ್ತದೆ. ಹೀಗೆ ಇಲ್ಲದ ಕಡೆ ಹುಡುಕುತ್ತಾ ಸಾಗುತ್ತೇವೆ. ಅದಕ್ಕೆ ನಾನು ಈ ಸಿನಿಮಾಕ್ಕೆ ಇಂಥದ್ದೊಂದು ಟೈಟಲ್ ಆಯ್ಕೆ ಮಾಡಿಕೊಂಡೆ. ನೋಡುಗರಿಗೆ ಇದೊಂದು ಹೊಸಥರದ ಅನುಭವ ಕೊಡುವ ಸಿನಿಮಾವಾಗಲಿದೆ’ ಎಂದರು.
ಚಿತ್ರದ ನಾಯಕಿ ಅದಿತಿ ಪ್ರಭುದೇವ. ಹಿರಿಯ ನಟ ಅಶೋಕ್, ಸುಂದರ್, ಶೃತಿ ನಾಯಕ್, ಅವಿನಾಶ್ ಯು ಶೆಟ್ಟಿ, ಮೊದಲಾದ ಕಲಾವಿದರು ಅನುಭವ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಚಿತ್ರದ ಬ್ಯುಸಿನೆಸ್ ಅಸೋಸಿಯೇಟ್ ಗುರು ದೇಶಪಾಂಡೆ “ಒಂಬತ್ತನೇ ದಿಕ್ಕು’ ವಿಶೇಷತೆ ಹಂಚಿಕೊಂಡರು.
“ಒಂಬತ್ತನೇ ದಿಕ್ಕು’ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತವಿದೆ. ಚಿತ್ರಕ್ಕೆ ರಾಕೇಶ್ ಛಾಯಾಗ್ರಹಣ, ಪ್ರೀತಿ ಮೋಹನ್ ಸಂಕಲನವಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ನ. 19ರಂದು ಚಿತ್ರವನ್ನು ತೆರೆಗೆ ತರುವ ಯೋಚನೆ ಯಲ್ಲಿದೆ.