Advertisement
ತನ್ನ ಭದ್ರಕೋಟೆ ಅಮೇಥಿಯಲ್ಲೇ ಬಿಜೆಪಿ ಜಯ ಸಾಧಿಸಿರುವುದು ಕಾಂಗ್ರೆಸ್ ನಾಯಕರ ಬೆವರಿಳಿಸುವಂತೆ ಮಾಡಿದೆ. ಬಿಜೆಪಿಗೆ ಅತ್ಯಂತ ಪ್ರಮುಖವಾಗಿದ್ದ ಅಯೋಧ್ಯೆ ಮತ್ತು ವಾರಾಣಸಿಯಲ್ಲೂ ಬಿಜೆಪಿ ಗೆಲುವು ಸಾಧಿಸಿದ್ದು, 16 ನಗರಗಳ ಪೈಕಿ 14ರಲ್ಲಿ ಜಯ ಸಾಧಿಸಿದೆ.
Related Articles
ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ನೆಲಕಚ್ಚಿದ್ದ ಮಾಜಿ ಸಿಎಂ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಚೇತರಿಸಿಕೊಳ್ಳುತ್ತಿದ್ದು, ಮೀರತ್ ಮತ್ತು ಅಲಿಗಢದಲ್ಲಿ ಅಧಿಕಾರಕ್ಕೇರಿದೆ. ಅಲಿಗಢದಲ್ಲಿ ಮಹಮ್ಮದ್ ಫುರ್ಕಾನ್ ಮೇಯರ್ ಆಗಲಿದ್ದು, ಬಿಜೆಪಿಯ ಅಭ್ಯರ್ಥಿ ರಾಜೀವ್ ಅಗರ್ವಾಲ್ ಸೋಲು ಅನುಭವಿಸಿದ್ದಾರೆ.
Advertisement
ಲಖನೌಗೆ ಮೊದಲ ಮಹಿಳಾ ಮೇಯರ್:ಲಖನೌನಲ್ಲಿ ಇದೇ ಮೊದಲ ಬಾರಿಗೆ ಮಹಿಳೆ ಮೇಯರ್ ಆಗಲಿದ್ದಾರೆ. ಮಹಿಳೆಯರಿಗೆ ಈ ಕ್ಷೇತ್ರವನ್ನು ಮೀಸಲಿಡಲಾಗಿದ್ದು, ಬಿಜೆಪಿ ಸಂಯುಕ್ತಾ ಭಾಟಿಯಾ, ಸಮಾಜವಾದಿ ಪಕ್ಷದ ಮೀರಾ ವರ್ಧನ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಯೋಗಿ ಪ್ರಚಾರ: ಉತ್ತರ ಪ್ರದೇಶದ ಸ್ಥಳೀಯ ಚುನಾವಣೆಗಳನ್ನು ಬಿಜೆಪಿ ಈ ಬಾರಿ ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮರ್ಥ್ಯ ಪ್ರದರ್ಶನವೂ ಈ ಚುನಾವಣೆಯಾಗಿತ್ತು. ಹೀಗಾಗಿ ಅವರು ನೇರವಾಗಿ ಪ್ರಚಾರ ಕಣಕ್ಕೇ ಇಳಿದಿದ್ದರು. ಹಿಂದೆಂದೂ ಉತ್ತರಪ್ರದೇಶದಲ್ಲಿ ಸ್ಥಳೀಯ ಚುನಾವಣೆಗಳಿಗೆ ಮುಖ್ಯಮಂತ್ರಿ ಪ್ರಚಾರ ನಡೆಸಿದ ಉದಾಹರಣೆಯಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಹಲವು ಕ್ಷೇತ್ರಗಳಿಗೆ ತೆರಳಿ ಯೋಗಿ ಪ್ರಚಾರ ನಡೆಸಿದ್ದರು. ಅಯೋಧ್ಯೆಗೆ ಮೊದಲ ಮೇಯರ್: ಇದೇ ಮೊದಲ ಬಾರಿ ಅಯೋಧ್ಯೆ, ಮಥುರಾ-ಬೃಂದಾವನಕ್ಕೆ ಸ್ಥಳೀಯ ಚುನಾವಣೆ ನಡೆಸಲು ಯೋಗಿ ಆದಿತ್ಯನಾಥ ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 22ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ರಿಷಿಕೇಶ್ ಉಪಾಧ್ಯಾಯ ಇಲ್ಲಿನ ಮೇಯರ್ ಆಗಲಿದ್ದಾರೆ. ಬಿಜೆಪಿಗೆ ಇದು ಅತ್ಯಂತ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಮಥುರಾದಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಕಿ ಡ್ರಾ ಮೂಲಕ ಗೆದ್ದಿದ್ದಾರೆ. ರಾಹುಲ್ ಗಾಂಧಿ ಕ್ಷೇತ್ರವೇ ಅಭದ್ರ!
ಅಮೇಥಿ ನಗರ ಪಂಚಾಯಿತಿ ಹಿಂದಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಈ ಸನ್ನಿವೇಶ ಈಗ ಬದಲಾಗುತ್ತಿದೆ. ಬಿಜೆಪಿಯ ಅಭ್ಯರ್ಥಿ ಚಂದ್ರಮ್ಮ ದೇವಿ 1035 ಮತಗಳಿಂದ ಕಾಂಗ್ರೆಸ್‌ಗೆ ಸೋಲುಣಿಸಿದ್ದಾರೆ. ಇನ್ನೊಂದೆಡೆ ಸ್ಪರ್ಧಿಸಿದ್ದ ಎಲ್ಲ ನಾಲ್ಕು ಕ್ಷೇತ್ರಗಳಾದ ತಿಲೋಯಿ, ಜಗದೀಶ್‌ಪುರ, ಗೌರಿಗಂಜ್ ಮತ್ತು ಸಲೋನ್‌ನಲ್ಲೂ ಕಾಂಗ್ರೆಸ್ ಸೋಲುಂಡಿದೆ. ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಅಮೇಥಿಯಲ್ಲಿ ಉಂಟಾದ ಅಭಿವೃದ್ಧಿ ಕಾರ್ಯದ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಹೆಚ್ಚು ಪ್ರಚಾರ ನಡೆಸಿದ್ದರು ಎನ್ನಲಾಗಿದೆ. ಯೋಗಿ ಕ್ಷೇತ್ರದಲ್ಲೇ ಸೋಲು!
ಇಡೀ ರಾಜ್ಯದಲ್ಲಿ ಸ್ಥಳೀಯ ಚುನಾವಣೆಯನ್ನು ಗೆದ್ದ ಸಿಎಂ ಯೋಗಿ ಆದಿತ್ಯನಾಥ ತಮ್ಮ ವಾರ್ಡ್‌ನಲ್ಲೇ ಸೋಲುಂಡಿದ್ದಾರೆ. ಗೋರಖ್‌ಪುರದ ವಾರ್ಡ್ ನಂ.68ರಲ್ಲಿ ಬಿಜೆಪಿಯ ಮಾಯಾ ತ್ರಿಪಾಠಿಯವರನ್ನು ಸ್ವತಂತ್ರ ಮುಸ್ಲಿಂ ಅಭ್ಯರ್ಥಿ ನಾದಿರಾ ಖಾತೂನ್ ಸೋಲಿಸಿದ್ದಾರೆ. ಇದೇ ವಾರ್ಡ್‌ನ ವ್ಯಾಪ್ತಿಯಲ್ಲಿರುವ ಜನಪ್ರಿಯ ಗೋರಖನಾಥ ದೇಗುಲದಲ್ಲಿ ಆದಿತ್ಯನಾಥ್ ಮಹಾಂತರಾಗಿದ್ದಾರೆ.