ದುನಿಯಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಯೋಗೇಶ್ ಇಲ್ಲಿವರೆಗೆ ಸಾಕಷ್ಟು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ. ಹೀರೋ ಅಂದಮೇಲೆ ಹೀರೋಯಿನ್ ಇರಲೇಬೇಕು. ಯೋಗಿಯ ಜೊತೆ ಸಾಕಷ್ಟು ನಾಯಕಿಯರು ನಟಿಸಿದ್ದಾರೆ. ಹಾಗಾದರ ಅಷ್ಟು ನಾಯಕಿಯರಲ್ಲಿ ಯಾರು ಬೆಸ್ಟ್? ಈ ಪ್ರಶ್ನೆಗೆ ಯೋಗಿ ಉತ್ತರಿಸಿದ್ದಾರೆ. ಅದು ಹಿತಾ ಚಂದ್ರಶೇಖರ್. ಹೌದು, ಯೋಗೇಶ್ ಸದ್ಯ “ಯೋಗಿ ದುನಿಯಾ’ ಎಂಬ ಸಿನಿಮಾದಲ್ಲಿ ನಟಿಸಿದ್ದು, ಇದು ಅವರದೇ ಬ್ಯಾನರ್‌ನಲ್ಲಿ ತಯಾರಾದ ಚಿತ್ರ.
ಈ ಚಿತ್ರದಲ್ಲಿ ಹಿತ ಚಂದ್ರಶೇಖರ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಹಿತ ನಟನೆ ನೋಡಿ ಯೋಗಿ ಫಿದಾ ಆಗಿದ್ದಾರೆ. ಅದೇ ಕಾರಣದಿಂದ ತಾನು ನಟಿಸಿದ ಅಷ್ಟೂ ನಾಯಕಿಯರಿಗೆ ಹೋಲಿಸಿದರೆ ಹಿತ ಬೆಸ್ಟ್ ಎಂಬುದು ಯೋಗಿ ಮಾತು.
ಈ ಮಾತನ್ನು ಯೋಗಿ, ಹಿತ ಹಾಗೂ “ಯೋಗಿ ದುನಿಯಾ’ ತಂಡದ ಮುಂದೆಯೇ ಹೇಳಿದ್ದಾರೆ. “ಯೋಗಿ ದುನಿಯಾದಲ್ಲಿ ನಾಯಕಿಯ ಪಾತ್ರ ಕೂಡಾ ತುಂಬಾ ಪ್ರಮುಖವಾಗಿದೆ. ಆ ಪಾತ್ರವನ್ನು ಯಾರಿಂದ ಮಾಡಿಸೋದೆಂದು ಯೋಚಿಸುತ್ತಿದ್ದಾಗ ನಮ್ಮ ಕಣ್ಣಿಗೆ ಬಿದ್ದವರು ಹಿತ. ಅದರಂತೆ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ನಾನು ನಟಿಸಿದ ಅಷ್ಟು ನಾಯಕಿಯರಿಗೆ ಹೋಲಿಸಿದರೆ ಹಿತ ಬೆಸ್ಟ್ ಅನಿಸುತ್ತದೆ’ ಎಂದು ಹಿತ ಬಗ್ಗೆ ಹೇಳಿದರು.
ಇದೇ ಮಾತನ್ನು ಯೋಗಿ ಅವರ ತಾಯಿ ಅಂಬುಜಾಕ್ಷಿ ಕೂಡಾ ಪುನರುತ್ಛರಿಸಿದರು. “ನಾನು ಮೊದಲು ಬಣ್ಣ ಹಚ್ಚಿದ್ದು, ಸಿಹಿಕಹಿ ಚಂದ್ರು ಅವರ ಬ್ಯಾನರ್‌ನಲ್ಲಿ. ಈಗ ಅವರ ಮಗಳು ನಮ್ಮ ಬ್ಯಾನರ್‌ನ ಸಿನಿಮಾದಲ್ಲಿ ನಟಿಸಿದ್ದಾಳೆ. ನಮಗೆ ಅವಳೇ ಬೇಕಿತ್ತು. ನಮ್ಮೆಲ್ಲರಿಗೂ ಅವಳಂದ್ರೆ ತುಂಬಾ ಇಷ್ಟ. ಒಂದು ಹಂತದಲ್ಲಿ ಅವಳು ಬಿಝಿಯಾಗಿ ನಮ್ಮ ಕೈ ತಪ್ಪುವ ಸಾಧ್ಯತೆ ಇತ್ತು. ಆದರೆ, ಕೊನೆಗೆ ನಮ್ಮ ಸಿನಿಮಾದಲ್ಲಿ ಮುಂದುವರೆದಿದ್ದಾಳೆ. ಈ ಸಿನಿಮಾ ಮೂಲಕ ತುಂಬಾ ಬಿಝಿಯಾಗುತ್ತಾಳೆ’ ಎಂಬುದು ಅವರ ಅಂಬುಜಾಕ್ಷಿ ಮಾತು. ಅಂದಹಾಗೆ, “ಯೋಗಿ ದುನಿಯಾ’ದಲ್ಲಿ ಹಿತ ಮಧ್ಯಮ ವರ್ಗದ, ಗಾರ್ಮೆಂಟ್‌ನಲ್ಲಿ ಕೆಲಸ ಮಾಡುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
“ದುನಿಯಾ-2′ ಟು “ಯೋಗಿ ದುನಿಯಾ’: ಆರಂಭದಲ್ಲಿ ಯೋಗಿ ಚಿತ್ರಕ್ಕೆ “ದುನಿಯಾ-2′ ಎಂದು ಟೈಟಲ್ ಇಡಲಾಗಿತ್ತು. ಆದರೆ, ಆ ಟೈಟಲ್ ಮತ್ತೂಂದು ಸಿನಿಮಾ ತಂಡದವರು ಇಟ್ಟುಕೊಂಡಿದ್ದರಿಂದ ಈಗ ಅನಿವಾರ್ಯವಾಗಿ ಟೈಟಲ್ ಬದಲಿಸಿದೆ. ಈಗ “ಯೋಗಿ ದುನಿಯಾ’ ಆಗಿದೆ. “ನಾವು ಸಿನಿಮಾವನ್ನು 6 ತಿಂಗಳ ಮುಂಚೆಯೇ ಬಿಡುಗಡೆ ಮಾಡಬೇಕೆಂದಿದ್ದೇವು. ಆದರೆ, ಈ ಟೈಟಲ್ ಸಮಸ್ಯೆಯಿಂದ ತಡವಾಯಿತು. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.
“ದುನಿಯಾ’ ಬಿಡುಗಡೆಯಾಗಿ ಫೆಬ್ರವರಿ 23ಕ್ಕೆ 11 ವರ್ಷವಾಗುತ್ತದೆ. ಅಂದು ಬಿಡುಗಡೆ ಮಾಡುವ ಯೋಚನೆ ಇತ್ತು. ಆದರೆ, ಅಂದು “ಟಗರು’ ಬರುತ್ತಿರುವುದರಿಂದ ನಾವು ಮಾರ್ಚ್ 9 ರಂದು ಬಿಡುಗಡೆ ಮಾಡಲು ಯೋಚಿಸಿದ್ದೇವೆ. ಟೈಟಲ್ ವಿಚಾರದಲ್ಲಿ ಮಂಡಳಿ ಸರಿಯಾದ ಬೈಲಾ ಮಾಡಬೇಕಾಗಿದೆ. ಇಲ್ಲವಾದರೆ ಗೊಂದಲ ಸೃಷ್ಟಿಯಾಗುತ್ತದೆ’ ಎಂಬುದು ನಿರ್ಮಾಪಕ ಟಿ.ಪಿ. ಸಿದ್ಧರಾಜು ಮಾತು. ಅಂದಹಾಗೆ, ಟಿ.ಪಿ. ಸಿದ್ಧರಾಜು ಅವರು ಮತ್ತೂಂದು ಬ್ಯಾನರ್ ಆರಂಭಿಸಿದ್ದಾರೆ. “ಎಂವೈ ಫಿಲಂ ಫ್ಯಾಕ್ಟರಿ’ ಆರಂಭಿಸಿದ್ದಾರೆ. ಎಂವೈ ಅಂದರೆ ಮಹೇಶ್-ಯೋಗೇಶ್ ಎಂದರ್ಥ.