ನವದೆಹಲಿ: ಕೋವಿಡ್ 19 ಬಿಕ್ಕಟ್ಟನ್ನು ಸಮರ್ಪಕವಾಗಿ ನಿರ್ವಹಿಸದ ಯೋಗಿ ಆದಿತ್ಯನಾಥ್ ಅವರ ನಾಯಕತ್ವವನ್ನು ಮುಂಬರುವ ವಿಧಾನಸಭಾ ಚುನಾವಣೆ ವೇಳೆ ಬದಲಾಯಿಸುವ ಸಾಧ್ಯತೆ ಇದೆ ಎಂಬ ಊಹಾಪೋಹ ದಟ್ಟವಾಗಿ ಹಬ್ಬಿದ್ದ ಬೆನ್ನಲ್ಲೇ ಶುಕ್ರವಾರ(ಜೂನ್ 11) ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿವಾಸದಲ್ಲಿ ಭೇಟಿಯಾಗಿ ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಿತಿ ಮೀರಿ ATM ನಿಂದ ಹಣ ವಿತ್ ಡ್ರಾ ಮಾಡುವುದು ಇನ್ಮುಂದೆ ದುಬಾರಿ: RBI ಹೇಳಿದ್ದೇನು..?
“ನಾನು ಇಂದು ಗೌರವಾನ್ವಿತ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಮಾರ್ಗದರ್ಶನ ನೀಡಿದ್ದಾರೆ. ಬಿಡುವಿಲ್ಲದ ನಡುವೆಯೂ ಮಾತುಕತೆ ನಡೆಸಲು ಅವಕಾಶ ಕೊಟ್ಟಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ” ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿ ಜತೆಗಿನ ಪೋಟೋ ಸಹಿತ ಟ್ವೀಟ್ ಮಾಡಿದ್ದಾರೆ.
ನಂತರ ಯೋಗಿ ಆದಿತ್ಯನಾಥ್ ಬಿಜೆಪಿ ವರಿಷ್ಠ ಜೆಪಿ ನಡ್ಡಾ ಅವರ ನಿವಾಸಕ್ಕೆ ಭೇಟಿ ನೀಡಿ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದರು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ಯಶಸ್ವಿಯಾಗಿರುವುದಾಗಿ ಜೆಪಿ ನಡ್ಡಾ ಟ್ವೀಟ್ ಮಾಡಿದ್ದಾರೆ.
ಗುರುವಾರದಿಂದ ಯೋಗಿ ಆದಿತ್ಯನಾಥ್ ಅವರು ದೆಹಲಿಯಲ್ಲಿ ಉನ್ನತ ಮುಖಂಡರ ಜತೆ ನಿರಂತರವಾಗಿ ಮಾತುಕತೆ ನಡೆಸಿದ್ದರು. ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜತೆ ಸುಮಾರು 90 ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಬದಲಾಯಿಸುವ ಬಗ್ಗೆ ಪಕ್ಷ ಯೋಚಿಸಿಲ್ಲ, ಆದರೆ ಬದಲಾವಣೆ ಸಾಧ್ಯತೆ ಇದ್ದಿರುವುದಾಗಿ ಮೂಲಗಳು ತಿಳಿಸಿವೆ.