ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2002ರಲ್ಲಿ ಸ್ಥಾಪಿಸಿದ್ದ ಹಿಂದೂ ಯುವವಾಹಿನಿ ಸಂಘಟನೆಗೆ ಇದೀಗ ಭಾರೀ ಬೇಡಿಕೆಯಂತೆ! ಯೋಗಿ ಅವರು ಸಿಎಂ ಆಗಿದ್ದೇ ತಡ, ಹಿಂದೂ ಯುವವಾಹಿನಿಯ ಸದಸ್ಯರಾಗಲು “ನಾನು, ನಾನು’ ಎಂದು ಜನ ಮುಗಿಬೀಳುತ್ತಿದ್ದಾರೆ. ಹಾಗೆ ಬಂದವರಿಗೆಲ್ಲ ಸದಸ್ಯತ್ವ ಕೊಡಕ್ಕಾಗುತ್ತಾ? ನಾಳೆ ಅವರೇನೋ “ಘನಂದಾರಿ’ ಕೆಲಸ ಮಾಡಿ ಸಿಕ್ಕಿಹಾಕಿಕೊಂಡರೆ ಯೋಗಿ ಮರ್ಯಾದೆ ಏನಾಗಬಹುದು?
ಇದನ್ನೆಲ್ಲ ಯೋಚಿಸಿಯೋ ಯುವ ವಾಹಿನಿ ಸಂಘಟನೆಯು ತನ್ನ ಸದಸ್ಯತ್ವ ಪ್ರಕ್ರಿಯೆಯಲ್ಲಿ ಹೆಚ್ಚಿನ ನಿಗಾ ವಹಿಸಲಾರಂಭಿಸಿದೆ. ಪ್ರತಿಯೊಬ್ಬನ ಮಾಹಿತಿ ಸಂಗ್ರಹಿಸಿ, ಅವನ ಹಿನ್ನೆಲೆಯನ್ನು ಅರಿತು, ಅವನಿಂದ ಮುಂದೆ ಯಾವುದೇ ಸಮಸ್ಯೆಯಾಗದು ಎಂದು ದೃಢವಾದ ಬಳಿಕವೇ ಸದಸ್ಯತ್ವ ನೀಡಲು ನಿರ್ಧರಿಸಿದೆ.
ಘನತೆ ಉಳಿಸುವುದೇ ಉದ್ದೇಶ: ಕೆಲವರು ಸಂಘಟನೆಯ ಹೆಸರು ಕೆಡಿಸಲೆಂದೇ ಇದರ ಸದಸ್ಯತ್ವ ಪಡೆದುಕೊಳ್ಳುತ್ತಿದ್ದಾರೆ. ಅಂಥವರಿಂದ ಯುವವಾಹಿನಿಯನ್ನು ರಕ್ಷಿಸುವ ಸಲುವಾಗಿ ಇಂಥ ಹಿನ್ನೆಲೆ ಪರಿಶೀಲನೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಸದಸ್ಯತ್ವ ನೀಡಿದ ಬಳಿಕವೂ ಆತನಿಗೆ ಯಾವುದಾದರೂ ಹುದ್ದೆ ನೀಡುವುದಿದ್ದರೆ ಮತ್ತೆ 6 ತಿಂಗಳ ಕಾಲ ಆತನ ಬಗ್ಗೆ ನಿಗಾ ವಹಿಸಲಾಗುತ್ತದೆ. ಯಾವುದೇ ಸಮಾಜಘಾತುಕ, ಕ್ರಿಮಿನಲ್‌ಗಳು ಸದಸ್ಯತ್ವ ಪಡೆಯಬಾರದು ಎನ್ನುವುದು ನಮ್ಮ ಉದ್ದೇಶ ಎಂದು ಸಂಘಟನೆಯ ವೆಬ್‌ಸೈಟ್‌ನಲ್ಲೇ ಪ್ರಕಟಿಸಲಾಗಿದೆ.
6 ತಿಂಗಳ ಹಿನ್ನೆಲೆ ಚೆಕ್
ಯುವವಾಹಿನಿಯ ಸದಸ್ಯರಾಗಲು ಇಚ್ಛಿಸುವವರಿಗೂ ಆಧಾರ್ ಕಡ್ಡಾಯ. ಜತೆಗೆ, ಮತದಾರರ ಗುರುತಿನ ಚೀಟಿಯನ್ನೂ ತೋರಿಸಬೇಕು. ಅಷ್ಟಕ್ಕೇ ಸದಸ್ಯತ್ವ ಸಿಗುತ್ತದೆ ಎಂದು ಭಾವಿಸಬೇಡಿ. ಏಕೆಂದರೆ, ವಾಹಿನಿಯ ಸದಸ್ಯನಾಗಬೇಕೆಂದರೆ, ಇದಾದ ಬಳಿಕ 6 ತಿಂಗಳು ಕಾಯಬೇಕು. ಈ 6 ತಿಂಗಳ ಅವಧಿಯಲ್ಲಿ ವ್ಯಕ್ತಿಯ ಸಂಪೂರ್ಣ ಹಿನ್ನೆಲೆಯಲ್ಲಿ ಪರಿಶೀಲಿಸಲಾಗುತ್ತದೆ. ಅವರಬಗ್ಗೆ ಸಂಪೂರ್ಣ ನಂಬಿಕೆ ಬಂದ ಬಳಿಕವಷ್ಟೇ ಹಿಂದೂ ಯುವ ವಾಹಿನಿಯ ಕುಟುಂಬಕ್ಕೆ ಸೇರಿಸಿಕೊಳ್ಳಲಾಗುತ್ತದೆ.