ವಾಡಿ (ಚಿತ್ತಾಪುರ): ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ ಅವರು ಏ.30 ರಂದು ವಾಡಿ ಪಟ್ಟಣಕ್ಕೆ ಆಗಮಿಸಲಿದ್ದು, ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಪರ ಪ್ರಚಾರ ನಡೆಸಲಿದ್ದಾರೆ ಎಂದು ಚಿತ್ತಾಪುರ ತಾಲೂಕು ಚುನಾವಣಾ ಉಸ್ತೂವಾರಿ ಮುಕುಂದ ದೇಶಪಾಂಡೆ ತಿಳಿಸಿದರು.
ಶನಿವಾರ ವಾಡಿ ಪಟ್ಟಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದೇಶಪಾಂಡೆ, ಅಂದು ಮದ್ಯಾಹ್ನ ೩:೦೦ ಗಂಟೆಗೆ ವಾಡಿ-ಹಳಕರ್ಟಿ ಮಧ್ಯದ ಬಯಲು ಪ್ರದೇಶದಲ್ಲಿ ಬೃಹತ್ ಸಮಾರಂಭ ಏರ್ಪಡಿಸಲಾಗಿದ್ದು, ಯೋಗಿ ಆದಿತ್ಯನಾಥ ಅವರು ಮಣಿಕಂಠ ರಾಠೋಡ ಪರ ಮತಯಾಚನೆ ಮಾಡಿ ಮಾತನಾಡುವರು. ಇದಕ್ಕಾಗಿ ಬೃಹತ್ ವೇದಿಕೆ ಸಿದ್ದಗೊಂಡಿದ್ದು, ಇಪ್ಪತೈದು ಸಾವಿರಕ್ಕೂ ಹೆಚ್ಚು ಜನರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ಸದೃಢ ರಾಜ್ಯ ಕಟ್ಟಿರುವ ಯೋಗಿ ಆದಿತ್ಯನಾಥ, ಬಿಜೆಪಿಯ ಬಹುದೊಡ್ಡ ಶಕ್ತಿಯಾಗಿದ್ದಾರೆ. ಅಂತಹ ಜನಪ್ರೀಯ ಮುಖ್ಯಮಂತ್ರಿ ಚಿತ್ತಾಪುರ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ತಾಲೂಕಿನ ಮತದಾರರ ಅದೃಷ್ಠವಾಗಿದೆ. ದೇಶದ ಸುಭದ್ರತೆ, ಹಿಂದೂ ಧರ್ಮ ಸಂಸ್ಕೃತಿಯ ರಕ್ಷಣೆ, ಕಠಿಣ ಕಾನೂನು ಪಾಲನೆ, ಅಭಿವೃದ್ಧಿಯ ಕನಸುಗಾರನಾಗಿರುವ ಯೋಗಿ ಅವರು ಮಣಿಕಂಠ ರಾಠೋಡ ಅವರ ಬೆಂಬಲಕ್ಕೆ ನಿಂತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಪ್ರತಿಕ್ರೀಯಿಸಿದರು.
ಜಾರ್ಖಂಡ್ ರಾಜ್ಯಸಭಾ ಸದಸ್ಯ ಆದಿತ್ಯ ಪ್ರಸಾದ್ ಸಾಹು, ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠರಾವ ಪಾಟೀಲ, ತಾಲೂಕು ಉಪಾಧ್ಯಕ್ಷ ವೀರಣ್ಣ ಯಾರಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವರಾಮ ಪವಾರ, ಪ್ರಧಾನ ಕಾರ್ಯದರ್ಶಿ ರಾಹುಲ ಸಿಂಧಗಿ, ಮುಖಂಡರಾದ ವಿಠ್ಠಲ್ ವಾಲ್ಮೀಕಿ ನಾಯಕ, ಸಿದ್ದಣ್ಣ ಕಲಶೆಟ್ಟಿ, ಬಸವರಾಜ ಪಂಚಾಳ, ಅಶೋಕ ಸೂರ್ಯವಂಶಿ, ಬಸವರಾಜ ಕೀರಣಗಿ, ಈಶ್ವರ ರಾಠೋಡ ಸುದ್ದಿಗೋಷ್ಠಿಯಲ್ಲಿ ಇದ್ದರು.
ಇದನ್ನೂ ಓದಿ: ಹೆಬ್ಬರಿಗೆಯಲ್ಲಿ ವ್ಯಕ್ತಿಯ ಅನುಮಾನಾಸ್ಪದ ಸಾವು: ಪ್ರಕರಣ ಭೇದಿಸಿದ ಪೊಲೀಸರು