Advertisement

ಯೋಗಿಯ ಯೋಗ್ಯಾಡಳಿತ ಶುರು; 15 ದಿನದಲ್ಲಿ ಆಸ್ತಿ ವಿವರ ಸಲ್ಲಿಸಿ

02:20 AM Mar 20, 2017 | Karthik A |

ಲಕ್ನೋ: ಉತ್ತರಪ್ರದೇಶದಲ್ಲೀಗ ‘ಯೋಗಿ’ಯ ಯುಗ ಆರಂಭವಾಗಿದೆ. ದೇಶದ ಅತೀ ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಯೋಗಿ ಆದಿತ್ಯನಾಥ್‌ ತನ್ನ ಸಂಪುಟ ಸಹೋದ್ಯೋಗಿಗಳಿಗೆ ಆಸ್ತಿ ವಿವರ ಸಲ್ಲಿಸುವಂತೆ ಆದೇಶಿಸಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ  ಮಹತ್ವದ ಹೆಜ್ಜೆಯಿಟ್ಟಿದ್ದಾರೆ.

Advertisement

ರವಿವಾರ ಲಕ್ನೋದಲ್ಲಿ ಉತ್ತರಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯೋಗಿ ಆದಿತ್ಯನಾಥ್‌ ಸಂಜೆ ಮೊದಲ ಪತ್ರಿಕಾಗೋಷ್ಠಿ ನಡೆಸಿದರು. ಭ್ರಷ್ಟಾಚಾರದ ವಿರುದ್ಧ ಮೊದಲ ದಿನವೇ ಖಡಕ್‌ ಸಂದೇಶ ರವಾನಿಸಿದ ಅವರು, ’15 ದಿನಗಳ ಒಳಗಾಗಿ ಎಲ್ಲ ಸಂಪುಟ ಸಹೋದ್ಯೋಗಿಗಳು ತಮ್ಮ ಆದಾಯ, ಸ್ಥಿರ ಮತ್ತು ಚರ ಆಸ್ತಿಯ ವಿವರಗಳನ್ನು ಘೋಷಿಸಬೇಕು. ಭ್ರಷ್ಟಾಚಾರವನ್ನು ಬುಡಸಹಿತ ಕಿತ್ತುಹಾಕುವುದೇ ನಮ್ಮ ಮುಖ್ಯ ಕಾರ್ಯಸೂಚಿ’ ಎಂದಿದ್ದಾರೆ.

ಇದೇ ವೇಳೆ, ಕಳೆದ 15 ವರ್ಷಗಳಲ್ಲಿ ಉತ್ತರಪ್ರದೇಶವು ತುಂಬಾ ಹಿಂದೆ ಉಳಿದಿದ್ದು, ಹಿಂದಿನ ಸರಕಾರಗಳು ರಾಜ್ಯದ ಅಭಿವೃದ್ಧಿಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ವಂಶಾಡಳಿತ, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಸಮಸ್ಯೆಯಿಂದಾಗಿ ರಾಜ್ಯದ ಜನ ಬಹಳಷ್ಟು ಸಂಕಷ್ಟ ಅನುಭವಿಸಿದ್ದಾರೆ. ನಮ್ಮ ಸರಕಾರವು ರಾಜ್ಯದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಲಿದೆ ಎನ್ನುವ ಮೂಲಕ ಎಸ್ಪಿ ಹಾಗೂ ಬಿಎಸ್ಪಿ ಸರಕಾರಗಳ ಮೇಲೆ ವಾಗ್ಧಾಳಿ ನಡೆಸಿದರು ಯೋಗಿ.

ತಾರತಮ್ಯ ಮಾಡಲ್ಲ: ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌ ನಮ್ಮ ಗುರಿ. ನಮ್ಮ ಸರಕಾರವು ಯಾವುದೇ ತಾರತಮ್ಯ ಮಾಡದೆ ಸಮಾಜದ ಎಲ್ಲ ವರ್ಗಗಳಿಗಾಗಿ ಕೆಲಸ ಮಾಡಲಿದೆ. ಈ ವಿಚಾರದಲ್ಲಿ ಆಡಳಿತವು ಸಂಪೂರ್ಣ ಬಾಧ್ಯಸ್ಥವಾಗಿರುತ್ತದೆ ಎಂದು ಹೇಳುವ ಮೂಲಕ ಯೋಗಿ ಆದಿತ್ಯನಾಥ್‌ ಅಲ್ಪಸಂಖ್ಯಾಕ ಸಮುದಾಯದ ಭಯವನ್ನು ದೂರಮಾಡುವ ಯತ್ನವನ್ನೂ ಮಾಡಿದ್ದಾರೆ. ಇದಕ್ಕೆ ಪೂರಕವೆಂಬಂತೆ, ಮುಸ್ಲಿಮರು ಭಯಪಡಬೇಕಾದ ಅಗತ್ಯವೇ ಇಲ್ಲ ಎಂದು ಡಿಸಿಎಂ ಕೇಶವ್‌ಪ್ರಸಾದ್‌ ಮೌರ್ಯ ಹೇಳಿದ್ದಾರೆ.

ಅಭಿವೃದ್ಧಿಯ ಆಶ್ವಾಸನೆ
ಉತ್ತರಪ್ರದೇಶಕ್ಕಾಗಿ ವಿಕಾಸಕ್ಕೆ ಹೊಸ ಸ್ಪೆಲ್ಲಿಂಗ್‌ ಅನ್ನು ಬಿಜೆಪಿ ಸಿದ್ಧಪಡಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆ, ಉದ್ಯೋಗಾವಕಾಶ ಸೃಷ್ಟಿ, ಮಹಿಳಾ ಸುರಕ್ಷತೆ, ಮಹಿಳೆಯರಿಗೆ ಸಮಾನ ಅವಕಾಶಕ್ಕೆ ಆದ್ಯತೆ ನೀಡುತ್ತೇನೆ. ಜನಕಲ್ಯಾಣವೇ ನನ್ನ ಧ್ಯೇಯ. ಪ್ರಣಾಳಿಕೆಯಲ್ಲಿ ಏನೆಲ್ಲವನ್ನು ಹೇಳಲಾಗಿದೆಯೋ ಅವೆಲ್ಲವನ್ನೂ ಈಡೇರಿಸುತ್ತೇವೆ. ರೈತರು ನಮ್ಮ ರಾಜ್ಯದ ಹೆಮ್ಮೆ. ಅವರಿಗಾಗಿ ನಾವು ಕೆಲಸ ಮಾಡುತ್ತೇವೆ ಎಂದು ಸಿಎಂ ಯೋಗಿ ಹೇಳಿದ್ದಾರೆ.

Advertisement

ಯೋಗಿ ಅವರ ಹೊಸ ನಾಯಕತ್ವದಲ್ಲಿ ಆದಷ್ಟು ಬೇಗನೆ ಅಯೋಧ್ಯೆಯಲ್ಲಿ ವೈಭವಯುತ ರಾಮಮಂದಿರ ನಿರ್ಮಾಣವಾಗಲಿದೆ ಎಂಬ ವಿಶ್ವಾಸ ನಮಗಿದೆ. ಹಿಂದೂಗಳ ಹಲವು ವರ್ಷಗಳ ಬೇಡಿಕೆ ಈಡೇರಲಿದೆ. ಹಿಂದೂಗಳು ಸುರಕ್ಷಿತ ಮತ್ತು ಸಮೃದ್ಧಿಯಿಂದ ಬಾಳಲಿದ್ದಾರೆ.
– ಪ್ರವೀಣ್‌ ತೊಗಾಡಿಯಾ, ವಿಎಚ್‌ಪಿ ನಾಯಕ

2019ರ ಚುನಾವಣೆಯನ್ನು ಅಭಿವೃದ್ಧಿಯ ಆಧಾರದಲ್ಲಿ ಗೆಲ್ಲಬೇಕೆಂಬ ಆಸಕ್ತಿ ಬಿಜೆಪಿಗೆ ಇದ್ದಂತಿಲ್ಲ. ಕೇವಲ ಜಾತಿ ಮತ್ತು ಕೋಮು ಧ್ರುವೀಕರಣ ಮಾಡಿ ಚುನಾವಣೆ ಗೆಲ್ಲುವ ಕನಸನ್ನು ಬಿಜೆಪಿ ಕಾಣುತ್ತಿದೆ. ಅದಕ್ಕಾಗಿಯೇ ಯೋಗಿ ಆದಿತ್ಯನಾಥ್‌ರನ್ನು ಸಿಎಂ ಆಗಿ ನೇಮಿಸಿದೆ.
– ಮಾಯಾವತಿ, ಬಿಎಸ್ಪಿ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next